ವರ್ಚುವಲ್ ಕಲಾಪ: ತಮ್ಮದೇ ಆದ ನಿಯಮ ರೂಪಿಸಲು ಹೈಕೋರ್ಟ್‌ಗಳಿಗೆ ʼಸುಪ್ರೀಂʼ ಅಸ್ತು

ನ್ಯಾಯಾಲಯಗಳಿಗೆ ಫೈಬರ್‌ ಆಪ್ಟಿಕ್‌ ಜಾಲದ ಸಂಪರ್ಕ ಒದಗಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದ್ದು ಇದರಿಂದ ಜಾಲ ಕಲಾಪಗಳ ವಿಚಾರಣೆ ಸುಗಮವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ವರ್ಚುವಲ್ ಕಲಾಪ: ತಮ್ಮದೇ ಆದ ನಿಯಮ ರೂಪಿಸಲು ಹೈಕೋರ್ಟ್‌ಗಳಿಗೆ ʼಸುಪ್ರೀಂʼ ಅಸ್ತು

ಕೋವಿಡ್-19 ಸಮಯದಲ್ಲಿ ಜಾಲ ಕಲಾಪಗಳ (Virtual Hearing) ಕುರಿತು ಹೊರಡಿಸಲಾದ ಮಾರ್ಗಸೂಚಿಗಳ ಒಂದು ಭಾಗವನ್ನು ಮಾರ್ಪಾಡು ಮಾಡಿರುವ ಸುಪ್ರೀಂಕೋರ್ಟ್‌ ಈ ಸಂಬಂಧ ತಮ್ಮದೇ ಆದ ನಿಯಮ ರೂಪಿಸಲು ಹೈಕೋರ್ಟ್‌ಗಳಿಗೆ ಸೋಮವಾರ ಅವಕಾಶ ನೀಡಿದೆ. ಇದೇ ವೇಳೆ ಮಾಧ್ಯಮ ಸಂಪರ್ಕ ಎಂಬುದು ಔಟ್‌ಪುಟ್‌ಗೆ ಮಾತ್ರ ಸೀಮಿತವಾಗಿರಬೇಕು ಇನ್‌ಪುಟ್‌ಗೆ ಅಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಜಾಲ ಕಲಾಪಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ರೂಪಿಸಲಿರುವ ನಿಯಮಗಳು ಮೇಲ್ಮನವಿಗಳ ವಿಚಾರಣೆ ಮತ್ತು ವಿಚಾರಣಾ ಪ್ರಕರಣಗಳನ್ನು ಒಳಗೊಂಡಿರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಹಾಗೂ ಎಲ್‌ ನಾಗೇಶ್ವರ ರಾವ್‌ ಅವರಿದ್ದ ಪೀಠ ತಿಳಿಸಿದೆ. ಸುಪ್ರೀಂಕೋರ್ಟ್‌ ಇ- ಸಮಿತಿ ನೀಡಿದ ಮಾದರಿ ನಿಯಮಗಳನ್ನು ಅನುಸರಿಸಿ ದೇಶದ ಹನ್ನೊಂದು ಹೈಕೋರ್ಟ್‌ಗಳು ಈಗಾಗಲೇ ತಮ್ಮದೇ ಆದ ನಿಯಮಾವಳಿಗಳನ್ನು ರೂಪಿಸಿಕೊಂಡಿವೆ ಎಂದು ನ್ಯಾ. ಚಂದ್ರಚೂಡ್‌ ಮಾಹಿತಿ ಹಂಚಿಕೊಂಡರು.

ʼಇನ್ನೂ ನಿಯಮಗಳನ್ನು ರೂಪಿಸದ ನ್ಯಾಯಾಲಯಗಳು ಅವುಗಳನ್ನು ರೂಪಿಸಿಕೊಳ್ಳಲಿವೆ, ಈ ನಡುವೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸೃಜಿಸಿದ ನಿಯಮಾವಳಿಗಳನ್ನು ಅನುಸರಿಬಹುದುʼ ಎಂದು ಸಿಜೆಐ ಬೊಬ್ಡೆ ತಿಳಿಸಿದರು. ನ್ಯಾಯಾಲಯ ಕಲಾಪಗಳಿಗೆ ತಂತ್ರಜ್ಞಾನ ಬಳಸುವಂತೆ ಹಿರಿಯ ವಕೀಲರು ಮತ್ತು ಸುಪ್ರೀಂಕೋರ್ಟ್‌ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರಾದ ವಿಕಾಸ್‌ ಸಿಂಗ್‌ ಅವರು ಪತ್ರ ಬರೆದಿದ್ದರು. ಇದನ್ನು ಆಧರಿಸಿ ನ್ಯಾಯಾಲಯ ವಿಷಯವನ್ನು ಸ್ವಯಂ ಪರಿಗಣನೆಗೆ ತೆಗೆದುಕೊಂಡಿತ್ತು.

ʼಜಾಲ ಕಲಾಪಗಳು ಹೆಚ್ಚಾಗಿ ಯಶಸ್ವಿಯಾಗಿದ್ದರೂ, ತಾಂತ್ರಿಕ ತೊಂದರೆಗಳು ಈ ಪ್ರಕ್ರಿಯೆಯಲ್ಲಿ ಎದುರಾಗುತ್ತಿವೆ ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಹೇಳಿದರು. ಹೀಗಾಗಿ, ಇ-ಸಮಿತಿಯು ಅಂತಹ ವಿಚಾರಣೆಗೆ ಉತ್ತಮ ವೇದಿಕೆಯಾಗುವ ಕುರಿತು ಸಲಹೆ ನೀಡಬಹುದೇ ಎಂದು ಅವರು ನ್ಯಾಯಾಲಯದಿಂದ ತಿಳಿದುಕೊಳ್ಳಲು ಪ್ರಯತ್ನಿಸಿದರು.

ಇ-ಸಮಿತಿಯ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಚಂದ್ರಚೂಡ್ ಇದಕ್ಕೆ ಪ್ರತಿಕ್ರಿಯಿಸಿ, “ನ್ಯಾಯಾಲಯ ಈ ಸಂಬಂಧ ಟೆಂಡರ್ ಹೊರಡಿಸಿದ್ದು ಇದರಿಂದ ಸುಪ್ರೀಂಕೋರ್ಟ್‌ನ ಎಲ್ಲಾ ವಿಚಾರಣೆಗಳಿಗೆ ಸಾಮಾನ್ಯ ವೇದಿಕೆ ಬಳಸಬಹುದು. ಆದರೆ, ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಪರಿಸ್ಥಿತಿ ಸ್ವಲ್ಪ ಭಿನ್ನ” ಎಂದು ವಿವರಿಸಿದರು. ಏಕಪ್ರಕಾರದ ಸಾಮಾನ್ಯ ಜಾಲ ವೇದಿಕೆಯೊಂದನ್ನು ಹೊಂದುವ ಸಲುವಾಗಿ ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ನಾವು ರಾಷ್ಟ್ರಮಟ್ಟದಲ್ಲಿ ಪ್ರತ್ಯೇಕ ಟೆಂಡರ್‌ ಕರೆಯಲಿದ್ದೇವೆ ಎನ್ನುವ ಅಂಶವನ್ನು ನ್ಯಾಯಮೂರ್ತಿಗಳು ತಿಳಿಸಿದರು.

ನಾಲ್ಕು ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯನ್ನು ನ್ಯಾಯಾಲಯ ನೇಮಕ ಮಾಡಿತ್ತು, ಸಮಿತಿಯು ಜಾಲ ಕಲಾಪಗಳಿಗಾಗಿ ನಿಯಮಗಳನ್ನು ರೂಪಿಸಿ, ಎಲ್ಲಾ ಹೈಕೋರ್ಟ್‌ಗಳಿಗೆ ಅದನ್ನು ವಿತರಿಸಿದೆ. 11 ಹೈಕೋರ್ಟ್‌ಗಳು ಈ ನಿಯಮಗಳನ್ನು ಅಳವಡಿಸಿಕೊಂಡಿದ್ದು ಉಳಿದವು ಇದನ್ನು ಇನ್ನಷ್ಟೇ ಅನುಸರಿಸಬೇಕಿದೆ ಎಂದು ಪ್ರತಿಕ್ರಿಯಿಸಿದರು.

ಈ ಹಂತದಲ್ಲಿ ಸಿಜೆಐ ಬೊಬ್ಡೆ ಅವರು ಹೀಗೆ ಅಭಿಪ್ರಾಯಪಟ್ಟರು:

ʼಹೈಕೋರ್ಟ್‌ಗಳು ತಮಗೆ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ತಮ್ಮದೇ ಆದ ನಿಯಮಗಳನ್ನು ರೂಪಿಸಲು ಸಲಹೆ ನೀಡುತ್ತೇವೆ. ಸಾಧನಗಳು ಅಥವಾ ವೈಫೈ ಬಳಕೆ ಒಂದು ಹೈಕೋರ್ಟಿನಿಂದ ಮತ್ತೊಂದು ಹೈಕೋರ್ಟಿಗೆ ಭಿನ್ನವಾಗಿದೆ. ವಕೀಲರ ಇ- ಸಾಕ್ಷರತೆಯ ಮಟ್ಟದಲ್ಲಿಯೂ ವ್ಯತ್ಯಾಸ ಇದೆʼ.

ಸಿಜೆಐ ಎಸ್‌ ಎ ಬೊಬ್ಡೆ

ನ್ಯಾಯಾಲಯಗಳಿಗೆ ಫೈಬರ್‌ ಆಪ್ಟಿಕ್‌ ಜಾಲ ಸಂಪರ್ಕ ಒದಗಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದು ಇದರಿಂದ ಜಾಲ ಕಲಾಪಗಳ ವಿಚಾರಣೆ ಸುಗಮವಾಗಲಿದೆ ಎಂಬುದಾಗಿ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com