ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಕೇರಳದ ಮೀಡಿಯಾ ಒನ್ ಸುದ್ದಿವಾಹಿನಿಯ ಪ್ರಸಾರ ಪರವಾನಗಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಪರಿಹಾರವಾಗಿ ತಡೆಯಾಜ್ಞೆ ನಿಡಿದೆ [ಮಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]. ಇದರಿಂದ ಈ ಮುಂಚಿನಂತೆಯೇ ಸುದ್ದಿವಾಹಿನಿಯು ಕಾರ್ಯನಿರ್ವಹಿಸಲು ಅವಕಾಶವಾಗಿದೆ.
ಕೇಂದ್ರ ಸರ್ಕಾರ, ಪ್ರಸಾರ ಪರವಾನಗಿ ರದ್ದುಪಡಿಸುವ ಮೊದಲು ಸುದ್ದಿ ವಾಹಿನಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಿತ್ತೋ ಅದೇ ರೀತಿ ಅದು ಕಾರ್ಯ ನಿರ್ವಹಿಸಬಹುದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಹಾಗೂ ವಿಕ್ರಮ್ ನಾಥ್ ಅವರಿದ್ದ ಪೀಠ ಆದೇಶಿಸಿತು.
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು. ಪ್ರತಿಕೂಲ ಗುಪ್ತಚರ ಮಾಹಿತಿ ಇರುವ ಫೈಲ್‌ಗಳನ್ನು ಚಾನಲ್‌ಗೆ ನೀಡಬಹುದೇ ಅಥವಾ ಇಲ್ಲವೇ ಎಂಬ ವಿಚಾರವನ್ನು ಮುಕ್ತವಾಗಿರಿಸಿಸರುವ ನ್ಯಾಯಾಲಯವು ಅಂತಿಮ ನಿರ್ಣಯದ ವೇಳೆ ಅದನ್ನು ನಿರ್ಧರಿಸುವುದಾಗಿ ತಿಳಿಸಿದೆ.
ಚಾನೆಲ್ ಪರವಾಗಿ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ, ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ವಾದ ಮಂಡಿಸಿದರು. ಸುದೀರ್ಘವಾಗಿ ವಾದ ಆಲಿಸಿದ ಬಳಿಕ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಲು ಒಪ್ಪಿತು.