ಹರಿದ್ವಾರದ 4 ಅಕ್ರಮ ಧಾರ್ಮಿಕ ನಿರ್ಮಾಣಗಳ ತೆರವಿಗೆ ಉತ್ತರಾಖಂಡ ಸರ್ಕಾರಕ್ಕೆ ಮೇ 2021ರವರೆಗೆ ಸಮಯ ನೀಡಿದ ಸುಪ್ರೀಂ

ರಾಜ್ಯದಲ್ಲಿ ಈ ಸಂದರ್ಭದಲ್ಲಿ ಧಾರ್ಮಿಕ ನಿರ್ಮಾಣ ತೆರವುಗೊಳಿಸಲು ಪ್ರಯತ್ನಿಸಿದರೆ ಧಾರ್ಮಿಕ ಸಮಸ್ಯೆಗಳು ಆರಂಭವಾಗಬಹುದು ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಮನವಿಯಲ್ಲಿ ವಿವರಿಸಿದೆ.
Haridwar
HaridwarGetty images

ಹರಿದ್ವಾರದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿರುವ ನಾಲ್ಕು ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಲು ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮೇ 2021ರ ವರೆಗೆ ಕಾಲಾವಕಾಶ ನೀಡಿದೆ (ಉತ್ತರಾಖಂಡ ಸರ್ಕಾರ ವರ್ಸಸ್‌ ಇನ್‌ ರಿ ಕಾನೂನು ಬಾಹಿರ ಧಾರ್ಮಿಕ ನಿರ್ಮಾಣ).

ಉತ್ತರಾಖಂಡದಲ್ಲಿನ ಅಕ್ರಮ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಉತ್ತರಾಖಂಡ ಹೈಕೋರ್ಟ್‌ ವಜಾಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಒಂದು ನಿರ್ಮಾಣವು ಉಧಮ್‌ ಸಿಂಗ್‌ ನಗರ ಜಿಲ್ಲೆಯಲ್ಲಿ ಮತ್ತು ಉಳಿದ ನಾಲ್ಕು ನಿರ್ಮಾಣಗಳು ಹರಿದ್ವಾರಲ್ಲಿದ್ದು, ಅವುಗಳನ್ನು ಮಹಾಕುಂಭಕ್ಕೆ ಸಂಬಂಧಿಸಿದ ಅಖಾಡಗಳು ನಿರ್ಮಿಸಿವೆ. 2010ರಲ್ಲಿ ನಿರ್ಮಿಸಲಾಗಿರುವ ಈ ಧಾರ್ಮಿಕ ನಿರ್ಮಾಣಗಳನ್ನು ಹರಿದ್ವಾರದಲ್ಲಿ ನಡೆಯುವ ಮಹಾಕುಂಭದ ಸಂದರ್ಭದಲ್ಲಿ ಬಳಸಲಾಗುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭ ನಡೆಯಲಿದ್ದು, ಮುಂದಿನ ವರ್ಷ 2021ರ ಜನವರಿಯಿಂದ-ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಮನವಿಯಲ್ಲಿ ಸರ್ಕಾರ ವಿವರಿಸಿದೆ.

ರಾಜ್ಯದಲ್ಲಿ ಈ ಸಂದರ್ಭದಲ್ಲಿ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ಧಾರ್ಮಿಕ ಸಮಸ್ಯೆಗಳು ಆರಂಭವಾಗಬಹುದು. ಮಹಾಕುಂಭ ನಡೆಯುವ ವೇಳೆ ದೈವಗಳನ್ನು ಇಲ್ಲಿರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೇವರೆಗೆ ಕಾಲಾವಕಾಶ ನೀಡುವಂತೆ ಕೋರಲಾಗಿದ್ದು, 2021ರ ಏಪ್ರಿಲ್‌ ಒಳಗೆ ಕುಂಭಮೇಳ ಮುಕ್ತಾಯವಾಗಲಿದೆ ಎಂದು ರಾಜ್ಯ ಸರ್ಕಾರವು ತನ್ನ ಮನವಿಯಲ್ಲಿ ವಿವರಿಸಿದೆ.

“2021ರ ಮೇನಲ್ಲಿ ಹರಿದ್ವಾರದಲ್ಲಿ ನಿರ್ಮಿಸಲಾಗಿರುವ ನಾಲ್ಕು ಕಾನೂನು ಬಾಹಿರ ಧಾರ್ಮಿಕ ಕಟ್ಟಡಗಳನ್ನು ತೆರೆವುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲಿದ್ದು, ಮೇ 31ರ ಒಳಗೆ ಪೂರ್ಣಗೊಳಿಸಲಾಗುವುದು” ಎಂದು ಸರ್ಕಾರ ಮನವಿಯಲ್ಲಿ ಉಲ್ಲೇಖಿಸಿದೆ.

ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಪ್ರಸ್ತಾವವನ್ನು ಮಹಾಕುಂಭ ಮುಗಿಯುವವರೆಗೆ ಮುಂದೂಡುವಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದರು. ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಿದ ಪೀಠವು ಮೇ 31ರ ವರೆಗೆ ಕಾಲಾವಕಾಶ ನೀಡಿತು.

Also Read
ಉತ್ತರಾಖಂಡ ಮುಖ್ಯಮಂತ್ರಿ ರಾವತ್‌ ವಿರುದ್ಧದ ಸಿಬಿಐ ತನಿಖೆಯ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ

ಅಖಿಲ ಭಾರತೀಯ ಅಖಾಡ ಪರಿಷತ್‌ ಸಲ್ಲಿಸಿದ್ದ ಮಧ್ಯಪ್ರವೇಶ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತು. ನೀರಾವರಿ ಇಲಾಖೆಗೆ ಸೇರಿರುವ ಜಾಗದಲ್ಲಿ ನಿರ್ಮಾಣಗಳನ್ನು ಮಾಡಲಾಗಿದ್ದು, ಯಾವುದೇ ಕಾರಣಕ್ಕೂಅವುಗಳನ್ನು ತೆರೆವುಗೊಳಿಸಬಾರದು ಎಂದು ಪರಿಷತ್‌ ಪರ ವಕೀಲರು ನ್ಯಾಯಾಲಯಕ್ಕೆ ಮೊರೆ ಇಟ್ಟರು.

ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ 2018ರಲ್ಲಿ ಸೂಚಿಸಿದ್ದ ಸುಪ್ರೀಂ ಕೋರ್ಟ್‌ ಅದರ ಉಸ್ತುವಾರಿಯನ್ನು ಹೈಕೋರ್ಟ್‌ಗಳಿಗೆ ವಹಿಸಿತ್ತು.

ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿದ್ದ ಉತ್ತರಾಖಂಡ ಹೈಕೋರ್ಟ್‌ ಐದು ಕಾನೂನು ಬಾಹಿರ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸುವಂತೆ ಆದೇಶಿಸಿತ್ತು. ಇತ್ತ ರಾಜ್ಯ ಸರ್ಕಾರವು ಗುರುತಿಸಲಾದ 739 ನಿರ್ಮಾಣಗಳ ಪೈಕಿ ಕೇವಲ 5 ಅನ್ನು ಮಾತ್ರ ತೆರವುಗೊಳಿಸುವುದು ಬಾಕಿ ಇದೆ ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com