ಮಗುವನ್ನು ಸುಪರ್ದಿಗೆ ಪಡೆಯುವ ವಿಚಾರದಲ್ಲಿ ಪೋಷಕರ ನಡುವಿನ ಜಗಳದಿಂದಾಗಿ ಮಗುವಿನ ಯೋಗಕ್ಷೇಮ ನಿರ್ಲಕ್ಷ್ಯಕ್ಕೆ ಒಳಗಾದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.
ಜಗಳ ಮಾಡುವ ಬದಲು ಬಿರುಬಿಸಿಲಿನಿಂದ ತತ್ತರಿಸಿರುವ ದೆಹಲಿಯಲ್ಲಿ ಮಗುವನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡುವಂತೆ ನ್ಯಾ. ಪಿ ವಿ ಸಂಜಯ್ ಕುಮಾರ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ರಜಾಕಾಲೀನ ಪೀಠ ಪೋಷಕರ ಕಿವಿ ಹಿಂಡಿತು.
ಕಳೆದ ನವೆಂಬರ್‌ನಿಂದ ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಪೋಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
"ನಿಮಗೆ ಇಲ್ಲಿಯವರೆಗೆ ಒಳ್ಳೆಯ ಮಕ್ಕಳ ವೈದ್ಯರನ್ನು ಹುಡುಕಲು ಸಾಧ್ಯವಾಗಲಿಲ್ಲ. ತಂದೆ-ತಾಯಿಗಳಿಬ್ಬರೂ ತಮ್ಮ ಮಗುವನ್ನು ಅಡ ಇಡಲು ಹೊರಟಿದ್ದಾರೆ. ತೀರಾ ಭಯಂಕರವಾಗಿದೆ. ನಿಮಗಿಬ್ಬರಿಗೂ ಮಗುವಿನ ಮೇಲೆ ಯಾವುದೇ ಪ್ರೀತಿ ಇಲ್ಲ. ಬದಲಿಗೆ ಮಗುವಿನ ಖರ್ಚಿನ ವಿಚಾರಕ್ಕೆ ಜಗಳವಾಡುತ್ತಿದ್ದೀರಿ. ಸಾಕಷ್ಟು ತಿಂಗಳುಗಳು ಇದರಲ್ಲೇ ಕಳೆದು ಹೋಗಿವೆ” ಎಂದು ನ್ಯಾ. ಕುಮಾರ್ ಹೇಳಿದರು.
"ಮಗುವಿನ ಹಕ್ಕುಗಳ ಬಗ್ಗೆಯಷ್ಟೇ ನಮಗೆ ಕಾಳಜಿ. ನಿಮ್ಮಲ್ಲಿ ಯಾರೊಬ್ಬರ ಬಗ್ಗೆಯೂ ಅಲ್ಲ. ನಿಮ್ಮ ಮಗುವಿನ ಕಾಳಜಿ ವಹಿಸಿ. ವಿಪರೀತ ಉಷ್ಣದ ವಾತಾವರಣ ಇದೆ" ನ್ಯಾ. ಮಸಿಹ್ ಅವರು ದನಿಗೂಡಿಸಿದರು.
ಬಳಿಕ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯ ತಂದೆಗೆ ಭೇಟಿ ನೀಡುವ ಹಕ್ಕನ್ನು ನೀಡಿತು.
ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯ ಜೊತೆಗೆ 50 ಡಿಗ್ರಿ ಸೆಲ್ಸಿಯಸ್‌ಗಿಂತ ತಾಪಮಾನ ಇದ್ದು ನೀರಿನ ಕೊರತೆ ಎದುರಿಸುತ್ತಿದೆ. ದೆಹಲಿಗೆ ನೀರು ಒದಗಿಸುವಂತೆ ಕೋರಿ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.