ಪ್ರಕರಣ ಉಲ್ಲೇಖ, ತುರ್ತು ಪಟ್ಟಿ, ಮುಂದೂಡಿಕೆ ನಿಯಮಗಳಲ್ಲಿ ಬದಲಾವಣೆ ಮಾಡಿದ ಸುಪ್ರೀಂ ಕೋರ್ಟ್‌: ನಾಳೆಯಿಂದ ಜಾರಿ

ಜಾಮೀನು ಮತ್ತು ಖುಲಾಸೆ ಸಂಬಂಧಿತ ಅರ್ಜಿಗಳ ಸ್ವಯಂ ಪಟ್ಟಿ, ಹಿರಿಯ ವಕೀಲರು ಪ್ರಕರಣ ಉಲ್ಲೇಖಿಸದಂತೆ ನಿರ್ಬಂಧ, ಪ್ರಕರಣಗಳ ಮುಂದೂಡಿಕೆಗೆ ಪ್ರತಿವಾದಿಗಳ ಸಮ್ಮತಿ ಅಗತ್ಯ ಎಂದು ಹೊಸ ನಿಯಮಗಳು ಹೇಳುತ್ತವೆ.
Supreme Court of India
Supreme Court of India
Published on

ಪ್ರಕರಣಗಳ ತುರ್ತು ಪಟ್ಟಿ, ಮುಂದೂಡಿಕೆ ಮತ್ತು ತುರ್ತು ವಿಚಾರಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ಪುನಾರಚಿಸಿದ್ದು ಹಿರಿಯ ವಕೀಲರು ಪ್ರಕರಣ ಪಟ್ಟಿ ಮಾಡುವಂತೆ ಉಲ್ಲೇಖಿಸುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಆ ನಿಟ್ಟಿನಲ್ಲಿ, ನ್ಯಾಯಾಲಯ ನಾಳೆಯಿಂದ (ಡಿಸೆಂಬರ್ 1) ಜಾರಿಗೆ ಬರಲಿರುವ ನಾಲ್ಕು ಸುತ್ತೋಲೆಗಳನ್ನು ಪ್ರಕಟಿಸಿದೆ.

Also Read
ಕೊಲಿಜಿಯಂನಿಂದ ಆಡಳಿತಾತ್ಮಕ ಅಧಿಕಾರದ ವ್ಯಾಪಕ ದುರ್ಬಳಕೆ: ಸಮಕಾಲೀನ ಬೆಳವಣಿಗೆಗಳ ಬಗ್ಗೆ ದುಷ್ಯಂತ್ ದವೆ ಕಿಡಿನುಡಿ

ಸೂರ್ಯ ಕಾಂತ್ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿದ ಕೆಲವೇ ದಿನಗಳಲ್ಲಿ ಹೊರಡಿಸಲಾದ ಈ ಕುರಿತಾದ ಆದೇಶ, ವಿಭಿನ್ನ ಪೀಠಗಳ ಎದುರು ಉಂಟಾಗುತ್ತಿದ್ದ ಮನಸೋಇಚ್ಛೆಯ ಉಲ್ಲೇಖಗಳನ್ನು ಕಡಿಮೆ ಮಾಡುವುದು ಮತ್ತು ದಾವೆ ಹೂಡುವವರಿಗೆ ಅದರಲ್ಲಿಯೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೂರ್ವ ನಿಗದಿತ ಕಾಲಮಿತಿ ಮತ್ತು ಸ್ಪಷ್ಟತೆ ಒದಗಿಸುವತ್ತ ಹೆಜ್ಜೆ ಇರಿಸಿವೆ.

ಕೈಗೊಂಡ ಕ್ರಮಗಳ ಪ್ರಮುಖಾಂಶಗಳು

  • ಹಿರಿಯ ವಕೀಲರು ಪ್ರಕರಣಗಳನ್ನು ಮೌಖಿಕವಾಗಿ ಪ್ರಸ್ತಾವಿಸುವುದಕ್ಕೆ ನಿಷೇಧ ಹೇರಲಾಗಿದ್ದು ಕಿರಿಯ ವಕೀಲರು ಈ ಕಾರ್ಯ ಮಾಡಬೇಕು ಎನ್ನುತ್ತದೆ ಸುಪ್ರೀಂ ಕೋರ್ಟ್‌.

  • ಜಾಮೀನು, ನಿರೀಕ್ಷಣಾ ಜಾಮೀನು, ಜಾಮೀನು ರದ್ದತಿ, ಮರಣ ದಂಡನೆ ಸಂಬಂಧಿತ ಅರ್ಜಿ, ಹೇಬಿಯಸ್‌ ಕಾರ್ಪಸ್‌, ಒಕ್ಕಲೆಬ್ಬಿಸುವಿಕೆ ಅಥವಾ ಮಾಲೀಕತ್ವ ತಪ್ಪುವಿಕೆಗೆ ಸಂಬಂಧಿಸಿದ ಪರಿಹಾರ, ತೆರವು ಕಾರ್ಯಾಚರಣೆಯಿಂದ ರಕ್ಷಣೆ ಅಥವಾ ಯಾವುದೇ ತುರ್ತು ಮಧ್ಯಂತರ ಪರಿಹಾರ ಸೇರಿದಂತೆ ಎಲ್ಲಾ ತುರ್ತು ಹೊಸ ಪ್ರಕರಣಗಳು ಎರಡು ಕೆಲಸದ ದಿನಗಳ ಒಳಗಾಗಿ ಸ್ವಯಂಚಾಲಿತವಾಗಿ ಪಟ್ಟಿಯಾಗಲಿವೆ.

  • ಜಾಮೀನು ಸಂಬಂಧಿತ ಎಲ್ಲಾ ಅರ್ಜಿಗಳಿಗೆ ವಕೀಲರು ರಾಜ್ಯ/ಕೇಂದ್ರದ ವಕೀಲರಿಗೆ ತಕ್ಷಣವೇ ನೋಟಿಸ್ ನೀಡಬೇಕು, ನಂತರ ಅದರ ಸರ್ವಿಸ್ ಪ್ರೂಫ್ ಸಲ್ಲಿಸಬೇಕು ಇಲ್ಲದಿದ್ದರೆ ಪ್ರಕರಣ ಪಟ್ಟಿಯಾಗದು.

  • ತುರ್ತಾಗಿ ಪ್ರಕರಣ ಆಲಿಸಬೇಕಾದ ಮನವಿಯನ್ನು ಹಿಂದಿನ ಕೆಲಸದ ದಿನದ ಮಧ್ಯಾಹ್ನ 3:00 ಗಂಟೆಯೊಳಗೆ ಸಲ್ಲಿಸಬೇಕು. ಮರಣದಂಡನೆ, ಹೇಬಿಯಸ್ ಕಾರ್ಪಸ್ ಮುಂತಾದ ಅತೀ ತುರ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಅದೇ ದಿನ ಬೆಳಿಗ್ಗೆ 10:30 ಗಂಟೆಯೊಳಗೆ ಕಾರಣಸಹಿತ ಅರ್ಜಿ ಸಲ್ಲಿಸುವುದು ಕಡ್ಡಾಯ.

  • ಪ್ರಕರಣಗಳನ್ನು ಅನಗತ್ಯ ಮುಂದೂಡದಂತೆ ಕಠಿಣ ನಿಯಮ ಜಾರಿಗೆ ತರಲಾಗಿದ್ದು ಪ್ರಕರಣ ಮುಂದೂಡುವುದಕ್ಕೆ ಪ್ರತಿವಾದಿಗಳ ಲಿಖಿತ ಸಮ್ಮತಿ ಕಡ್ಡಾಯವಾಗಿದೆ. ಅದನ್ನು ಹಿಂದಿನ ಕೆಲಸದ  ದಿನದ ಬೆಳಿಗ್ಗೆ 11:00 ಗಂಟೆಯೊಳಗೆ ಸಲ್ಲಿಸಬೇಕು. ಹಿಂದೆ ಮಾಡಲಾಗಿದ್ದ ಎಲ್ಲಾ ಮುಂದೂಡಿಕೆಗಳ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು ಅಲ್ಲದೆ ಕುಟುಂಬ ಸದಸ್ಯರ ಸಾವು, ಗಂಭೀರ ಆರೋಗ್ಯ ಸಮಸ್ಯೆ, ಅನಿವಾರ್ಯ ಆಕಸ್ಮಿಕ ಸ್ಥಿತಿಗಳಂತಹ ನೈಜ ಕಾರಣಗಳಿದ್ದರೆ ಮಾತ್ರ ಮುಂದೂಡಿಕೆಗೆ ಅನುಮತಿ ನೀಡಲಾಗುತ್ತದೆ. ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ನೀಡಬೇಕಿದೆ.

ಒಟ್ಟಾರೆಯಾಗಿ, ನಾಲ್ಕು ಸುತ್ತೋಲೆಗಳು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದಲ್ಲಿ ಗಣನೀಯ ಆಡಳಿತಾತ್ಮಕ ಬದಲಾವಣೆ ತರಲಿವೆ.

ಹೊಸ ವ್ಯವಸ್ಥೆ ಮೌಖಿಕ ಪ್ರಸ್ತಾಪವನ್ನು ಕಡಿಮೆ ಮಾಡುತ್ತದೆ, ಮುಂದೂಡಿಕೆಗಳನ್ನು ನಿಯಂತ್ರಿಸುತ್ತದೆ, ಜಾಮೀನು ಪ್ರಕರಣಗಳಲ್ಲಿ ಸರ್ಕಾರಿ ವಕೀಲರೊಂದಿಗೆ ಸಂವಹನವನ್ನು ಕಡ್ಡಾಯಗೊಳಿಸುತ್ತದೆ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪೂರ್ವನಿಗದಿತ ವಿಧಾನದಲ್ಲಿ ಪಟ್ಟಿ ಮಾಡುವಂತೆ ಹೇಳುತ್ತದೆ.

[ಸುತ್ತೋಲೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
F__No__20_Judl__2025
Preview
Attachment
PDF
F__No_21_Judl__2025
Preview
Attachment
PDF
F__No__22_Judl__2025
Preview
Attachment
PDF
F_No__23_Judl__2025
Preview
Kannada Bar & Bench
kannada.barandbench.com