ಅತ್ಯಾಚಾರ ಪ್ರಕರಣ: ಮಲಯಾಳಂ ನಟ ಸಿದ್ದಿಕ್‌ಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು

ದೂರುದಾರೆಗೆ ಫೇಸ್‌ಬುಕ್‌ನಲ್ಲಿ ಅತ್ಯಾಚಾರದ ವಿಚಾರ ಹಂಚಿಕೊಳ್ಳಲು ಧೈರ್ಯವಿತ್ತು ಆದರೆ ಪೊಲೀಸ್ ಠಾಣೆಗೆ ದೂರು ನೀಡಲು ಧೈರ್ಯ ಇರಲಿಲ್ಲವೇ ಎಂದು ಇದೇ ವೇಳೆ ನ್ಯಾಯಾಲಯ ಪ್ರಶ್ನಿಸಿತು.
Siddique, Supreme Court
Siddique, Supreme Court
Published on

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಸಿದ್ದಿಕ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ [ಸಿದ್ದಿಕ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಆ ಮೂಲಕ ಸಿದ್ದಿಕ್‌ಗೆ ಈ ಹಿಂದೆ ನೀಡಲಾದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಎತ್ತಿಹಿಡಿಯಿತು.

Also Read
ಅತ್ಯಾಚಾರ ಪ್ರಕರಣ: ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

ಅಪರಾಧ 2016ರಲ್ಲೇ ನಡೆದಿದ್ದರೂ ದೂರು ದಾಖಲಿಸಲು ಎಂಟು ವರ್ಷ ತೆಗೆದುಕೊಂಡಿದ್ದೇಕೆ ಎಂಬುದಾಗಿ ಅರ್ಜಿದಾರೆಯನ್ನು ನ್ಯಾಯಮೂರ್ತಿ ಬೇಲಾ ಪ್ರಶ್ನಿಸಿದರು.

ದೂರುದಾರೆಗೆ ಫೇಸ್‌ಬುಕ್‌ನಲ್ಲಿ ಅತ್ಯಾಚಾರದ ವಿಚಾರ ಹಂಚಿಕೊಳ್ಳಲು ಧೈರ್ಯವಿತ್ತು. ಆದರೆ  ಪೊಲೀಸ್‌ ಠಾಣೆಗೆ ದೂರು ನೀಡಲು ಧೈರ್ಯ ಇರಲಿಲ್ಲವೇ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದ್ದು ತೀರ್ಪಿನಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.

Also Read
'ದೂರು ದಾಖಲಿಸಲು 8 ವರ್ಷ ಏಕೆ ಬೇಕಾಯಿತು?' ಸಿದ್ದಿಕ್ ಮೇಲಿನ ಅತ್ಯಾಚಾರ ಪ್ರಕರಣ ಕುರಿತು ಸುಪ್ರೀಂ ಪ್ರಶ್ನೆ

2016ರಲ್ಲಿ ನಡೆದಿತ್ತು ಎನ್ನಲಾದ ಘಟನೆ ಬಗ್ಗೆ ಸುಮಾರು  8 ವರ್ಷಗಳ ನಂತರ ದೂರುದಾರೆ ಆರೋಪ ಮಾಡಿದ್ದಾರೆ. 2018 ರ ಸುಮಾರಿಗೆ ಫೇಸ್‌ಬುಕ್‌ನಲ್ಲಿ ಈ ಕುರಿತು ವಿವರ ಹಂಚಿಕೊಂಡಿದ್ದಾರೆ. ಅಲ್ಲದೆ ಆಕೆ ಸೇರಿದಂತೆ 14 ಜನರ ಬಗ್ಗೆ ಆರೋಪ ಮಾಡಿದ್ದಾರೆ. ಅಲ್ಲದೆ ತನ್ನ ಸಮಸ್ಯೆ ಹೇಳಿಕೊಳ್ಳಲು ಆಕೆ ಕೇರಳ ಹೈಕೋರ್ಟ್‌ ರಚಿಸಿದ್ದ ನ್ಯಾ. ಹೇಮಾ ಸಮಿತಿ ಎದುರೂ ಹೋಗಿಲ್ಲ ಎಂಬ ವಿಷಯವನ್ನು ಪರಿಗಣಿಸಿದ ನ್ಯಾಯಾಲಯ ಸಿದ್ದಿಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿತು. ತನಿಖಾಧಿಕಾರಿಗೆ ಸಿದ್ದಿಕ್‌ ತಮ್ಮ ಪಾಸ್‌ಪೋರ್ಟ್‌ ಒಪ್ಪಿಸಬೇಕು ಎಂಬುದು ಸೇರಿದಂತೆ ವಿಚಾರಣಾ ನ್ಯಾಯಾಲಯದ ಷರತ್ತುಗಳಿಗೆ ಅನುಗುಣವಾಗಿ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಂತೆ ಅದು ಆದೇಶಿಸಿತು.    

"ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಧೈರ್ಯವಿದೆ ಆದರೆ ಪೊಲೀಸ್ ಠಾಣೆಗೆ ಹೋಗಲಿಲ್ಲವೇ?"
ದೂರುದಾರೆಗೆ ನ್ಯಾಯಮೂರ್ತಿ ಬೇಲಾ ತ್ರಿವೇದಿ ಪ್ರಶ್ನೆ

ನ್ಯಾ. ಹೇಮಾ ಅವರ ವರದಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ, ಪಾತ್ರಕ್ಕಾಗಿ ಪಲ್ಲಂಗ ಹಾಗೂ ಲಿಂಗತಾರತಮ್ಯದ ಮೇಲೆ ಬೆಳಕು ಚೆಲ್ಲಿತ್ತು. ವರದಿ ಪ್ರಕಟಣೆಯ ಹಿನ್ನೆಲೆಯಲ್ಲಿ ಅನೇಕ ನಟರು, ನಿರ್ದೇಶಕರು ಹಾಗೂ ಚಿತ್ರಕರ್ಮಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದವು.

ತಮಿಳು ಚಿತ್ರವೊಂದರಲ್ಲಿ ನಟಿಸಲು ಅವಕಾಶ ನೀಡುವುದಕ್ಕಾಗಿ ಸಿದ್ದಿಕ್‌ ಲೈಂಗಿಕ ಬೇಡಿಕೆ ಇಟ್ಟಿದ್ದರು. ಇದನ್ನು ತಾನು ನಿರಾಕರಿಸಿದ್ದರಿಂದ ತಿರುವನಂತಪುರದ ಮಸ್ಕಟ್‌ ಹೋಟೆಲ್‌ನಲ್ಲಿ 2016ರಲ್ಲಿ ತನ್ನ ಮೇಲೆ ಆತ ಅತ್ಯಾಚಾರವೆಸಗಿದ್ದಾರೆ ಎಂದು ನಟಿ ಆರೋಪಿಸಿದ್ದರು. ಕಳೆದ ವಿಚಾರಣೆ ವೇಳೆಯೂ 'ದೂರು ದಾಖಲಿಸಲು 8 ವರ್ಷ ಏಕೆ ಬೇಕಾಯಿತು?ʼ ಎಂದು ಸುಪ್ರೀಂ ಕೋರ್ಟ್‌ ದೂರುದಾರೆಯನ್ನು ಪ್ರಶ್ನಿಸಿತ್ತು.

Kannada Bar & Bench
kannada.barandbench.com