ಕೇರಳ ಆರ್ಥಿಕ ಬಿಕ್ಕಟ್ಟು: ಒಂದು ಬಾರಿಯ ಪ್ಯಾಕೇಜ್‌ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸಲಹೆ

ಕಠಿಣ ಷರತ್ತುಗಳೊಂದಿಗೆ ಪ್ಯಾಕೇಜ್ ನೀಡಬಹುದು ಎಂದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ.
ಸುಪ್ರೀಂ ಕೋರ್ಟ್, ಕೇರಳ ಭೂಪಟ
ಸುಪ್ರೀಂ ಕೋರ್ಟ್, ಕೇರಳ ಭೂಪಟ

ಕೇರಳ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಅದನ್ನು ಪಾರು ಮಾಡಲು ಒಂದು ಬಾರಿಯ ಪ್ಯಾಕೇಜ್‌ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ [ಕೇರಳ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕಠಿಣ ಷರತ್ತುಗಳೊಂದಿಗೆ ಪ್ಯಾಕೇಜ್ ನೀಡಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.

"ನೀವು (ಕೇಂದ್ರ) ಸ್ವಲ್ಪ ಉದಾರವಾಗಿ ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಒಂದು ಬಾರಿಯ ಪ್ಯಾಕೇಜ್ ನೀಡಬಹುದು. ಮುಂದಿನ ಬಜೆಟ್‌ಗಳಲ್ಲಿ ಹೆಚ್ಚು ಕಠಿಣ ಷರತ್ತುಗಳನ್ನು ಹಾಕಬಹುದು... ಮಾರ್ಚ್ 31ರೊಳಗೆ ಕೇರಳಕ್ಕೆ ಪ್ಯಾಕೇಜ್‌ ನೀಡಿ. ಆದರೆ ಉಳಿದ ರಾಜ್ಯಗಳಿಗಿಂತಲೂ ಕಠಿಣ ಷರತ್ತನ್ನು ಅದಕ್ಕೆ ವಿಧಿಸಬೇಕು. ಇತರೆ ರಾಜ್ಯಗಳಿಗೆ ಮುಂದಿನ ಬಾರಿ (ಬಹುಶಃ) ಉದಾರವಾಗಿರಿ" ಎಂದು ನ್ಯಾ. ಸೂರ್ಯ ಅವರು ಕೇಂದ್ರದ ಪರ ವಕೀಲರಿಗೆ ತಿಳಿಸಿದರು.

ನ್ಯಾಯಾಲಯಕ್ಕೆ ಹಣಕಾಸಿನ ವಿಷಯಗಳಲ್ಲಿ ಪರಿಣತಿ ಇರುವುದಿಲ್ಲವಾದರೂ ಸರ್ಕಾರಗಳು ಸದ್ಯಕ್ಕೆ ಮಧ್ಯಮ ಮಾರ್ಗ ಹಿಡಿಯಬಹುದು ಎಂದಿತು.

ಪ್ರಕರಣ ನಾಳೆ ಮತ್ತೆ ವಿಚಾರಣೆಗೆ ಬರಲಿರುವುದರಿಂದ ಅದಕ್ಕೂ ಮೊದಲು ಕೇಂದ್ರ ಮತ್ತು ಕೇರಳ ಸರ್ಕಾರದ ಅಧಿಕಾರಿಗಳು ಸಭೆ ನಡೆಸುವ ಸಾಧ್ಯತೆ ಇದೆ.

ಹಿರಿಯ ವಕೀಲ ಕಪಿಲ್ ಸಿಬಲ್ ಕೇರಳ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್ ಹಾಜರಿದ್ದರು.

 ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್

ಸಾಲ ಪಡೆಯುವ ಮತ್ತು ನಿಯಂತ್ರಿಸುವ ತನ್ನ ಅಧಿಕಾರದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ದೂರಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ವಿಧಿಸಿರುವ ಸಾಲದ ಮಿತಿಯಿಂದಾಗಿ ಹಲವು ವರ್ಷಗಳಿಂದ ಪಾವತಿಯಾಗದ ಬಾಕಿಯ ಮೊತ್ತ ಬೆಳೆಯುತ್ತಿದ್ದು ಗಂಭೀರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಮೊಕದ್ದಮೆಯಲ್ಲಿ ಕೇರಳ ಸರ್ಕಾರ ಆರೋಪಿಸಲಾಗಿತ್ತು.

ನಂತರ ಕೇರಳ ಸರ್ಕಾರ ತನ್ನ ಅನೇಕ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ಸಂಬಳ ಪಾವತಿಸಲು ವಿಫಲವಾಗಿತ್ತು.

ಹಣಕಾಸು ಮತ್ತು ಬಜೆಟ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾತುಕತೆ ನಡೆಸುವುದಾಗಿ ಹಿಂದಿನ ವಿಚಾರಣೆ ವೇಳೆ ಕೇರಳ ಮತ್ತು ಕೇಂದ್ರ ಸರ್ಕಾರಗಳು ಒಪ್ಪಿಕೊಂಡಿದ್ದವು. ಅದರಂತೆ ಸಭೆ ನಡೆದಿತ್ತು.

ಕೇರಳಕ್ಕೆ ಕೇಂದ್ರ ನೀಡಬೇಕಾದ 19,000 ಕೋಟಿ ರೂಪಾಯಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಿಬಲ್ ಇಂದಿನ ವಿಚಾರಣೆ ವೇಳೆ ಕೋರಿದರು. ಆದರೆ ಕೇರಳಕ್ಕೆ ಯಾವುದೇ ವಿಶೇಷ ಉಪಚಾರ ಸಾಧ್ಯವಿಲ್ಲ. ಕೇರಳದ್ದು ವಿಶೇಷ ಪ್ರಕರಣವಲ್ಲ. ಉಳಿದ ರಾಜ್ಯಗಳಿಗೂ ಹಣಕಾಸು ನೆರವು ನಿರಾಕರಿಸಲಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಕೈಗಳನ್ನು ಕಟ್ಟಿಹಾಕಲಾಗಿದೆ ಎಂದು ಎಎಸ್‌ಜಿ ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ಪರಿಹಾರ ರೂಪಿಸುವಂತೆ ಪಕ್ಷಕಾರರಿಗೆ ಸೂಚಿಸಿತು. ಅಲ್ಲದೆ ಕೇಂದ್ರ ಸರ್ಕಾರ ಸದ್ಯ ಕೇರಳಕ್ಕೆ ವಿಶೇಷ ವಿನಾಯಿತಿ ನೀಡುವಂತೆ ಕಿವಿಮಾತು ಹೇಳಿತು.

Related Stories

No stories found.
Kannada Bar & Bench
kannada.barandbench.com