ಮತಗಟ್ಟೆವಾರು ಮತಗಳ ವಿವರ ಬಹಿರಂಗ ಕೋರಿದ್ದ ಅರ್ಜಿ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

ಚುನಾವಾಣಾ ಆಯೋಗಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ ಎಂದ ನ್ಯಾಯಾಲಯ ವಿಚಾರಣೆ ಮುಂದೂಡಿತು.
ಮತಗಟ್ಟೆವಾರು ಮತಗಳ ವಿವರ ಬಹಿರಂಗ ಕೋರಿದ್ದ ಅರ್ಜಿ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
Published on

ಮತದಾನದ 48 ಗಂಟೆಗಳ ಒಳಗೆ ಎಲ್ಲಾ ಮತಗಟ್ಟೆಗಳಲ್ಲಿ ಮತದಾನದ ಅಂತಿಮ ದೃಢೀಕೃತ ವಿವರವನ್ನು ಬಹಿರಂಗಪಡಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.

ಚುನಾವಣಾ ಆಯೋಗ ತನ್ನ ಜಾಲತಾಣದಲ್ಲಿ ಫಾರ್ಮ್ 17C ಭಾಗ-Iರ (ದಾಖಲಾದ ಮತಗಳ ಖಾತೆ) ಸ್ಕ್ಯಾನ್‌ ಮಾಡಿದ, ಸ್ಪಷ್ಟವಾದ ಪ್ರತಿಗಳನ್ನು ಪ್ರಕಟಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅರ್ಜಿ ಸಲ್ಲಿಸಿದ್ದರು.

Also Read
ಮತಗಟ್ಟೆವಾರು ಮತಗಳ ಮಾಹಿತಿ ಕೋರಿಕೆ ಕಾನೂನಾತ್ಮಕ ಹಕ್ಕಲ್ಲ; ಇದರಿಂದ ಮತದಾರರಲ್ಲಿ ಗೊಂದಲ: ಸುಪ್ರೀಂನಲ್ಲಿ ಇಸಿಐ ಹೇಳಿಕೆ

ಹತ್ತು ದಿನದೊಳಗೆ ಇಸಿಐಗೆ ಮನವಿ ಸಲ್ಲಿಸುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ ಎಂದು ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.

ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್ , ಹೊಸ ಚುನಾವಣಾ ಆಯುಕ್ತರನ್ನು ನೇಮಿಸಲಾಗಿದ್ದು ಅರ್ಜಿದಾರರು ಅವರನ್ನು ಭೇಟಿ ಮಾಡಿ ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿದ ಬಳಿಕ ಪೀಠ ಈ ಸೂಚನೆ ನೀಡಿತು. ಬಳಿಕ ಪ್ರಕರಣವನ್ನು ಜುಲೈ 28ರಂದು ವಿಚಾರಣೆ ನಡೆಸುವುದಾಗಿ ಅದು ತಿಳಿಸಿತು.

Also Read
ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಬಾಂಡ್‌ ಮಾರಾಟ ನಿಷೇಧ ಕೋರಿದ್ದ ಎಡಿಆರ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮತದಾನದ ದಿನ ಘೋಷಿಸಲಾದ ಆರಂಭಿಕ ಅಂದಾಜಿಗೆ ಹೋಲಿಸಿದರೆ 2024ರ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳಿಗೆ ಇಸಿಐ ಘೋಷಿಸಿದ ಅಂತಿಮ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಎಡಿಆರ್‌ ಮೇ 2024ರಲ್ಲಿ ಅರ್ಜಿ ಸಲ್ಲಿಸಿತ್ತು.

ಚುನಾವಣಾ ಆಯೋಗವು ಮತದಾನದ ನೀಡಿದ ಮತಚಲಾವಣೆಯ ವಿವರಕ್ಕೂ ಹಾಗೂ ಅಂತಿಮವಾಗಿ ನೀಡಿದ ಮತಚಲಾವಣೆ ವಿವರಕ್ಕೂ ಸುಮಾರ ಶೇ.5-6 ವ್ಯತ್ಯಾಸವಿರುವುದನ್ನು ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ, ಮತಚಲಾಯಿಸಿದ ಮತದಾರರ ಕುರಿತಾದ ಅಂಕಿಅಂಶಗಳನ್ನು ನೀಡುವಲ್ಲಿ ಚುನಾವಣಾ ಆಯೋಗವು ಅನುಸರಿಸಿದ ವಿಳಂಬವು ಕೂಡ ರಾಜಕೀಯ ಪಕ್ಷಗಳಲ್ಲಿ, ಮತದಾರರಲ್ಲಿ ಚರ್ಚೆಗೆ ಕಾರಣವಾಗಿದೆ. ಆಯೋಗ ನೀಡಿದ ಅಂಕಿಅಂಶಗಳ ನೈಜತೆಯ ಬಗ್ಗೆ ಅನುಮಾನಗಳನ್ನು ಉಂಟು ಮಾಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇಂದು ನಡೆದ ಪ್ರಕರಣ ವಿಚಾರಣೆ ವೇಳೆ, ಎಡಿಆರ್ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಇವಿಎಂ ಎಣಿಕೆ ಮತ್ತು (ವಾಸ್ತವವಾಗಿ) ಮತ ಚಲಾಯಿಸಲು ಬಂದವರ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಹೇಳಿದರು. ಮಹುವಾ ಮೊಯಿತ್ರಾ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿದರು.

Kannada Bar & Bench
kannada.barandbench.com