ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾನ ಕೇಂದ್ರಗಳಲ್ಲೂ 48 ಗಂಟೆಗಳ ಒಳಗೆ ಎಷ್ಟು ಹಕ್ಕು ಚಲಾವಣೆಯಾಗಿದೆ ಎಂಬುದರ ಅಂತಿಮ ಅಧಿಕೃತ ದತ್ತಾಂಶ ಬಹಿರಂಗಪಡಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಎಷ್ಟು ಮತದಾನವಾಗಿದೆ ಎಂಬುದರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಲು ಏನು ಸಮಸ್ಯೆ ಎಂದು ಚುನಾವಣಾ ಆಯೋಗದ ವಕೀಲರನ್ನು ಅಮಿತ್ ಶರ್ಮಾ ಪ್ರಶ್ನಿಸಿದ್ದಾರೆ.
“ಮತದಾನದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಲು ಏನು ಸಮಸ್ಯೆ ಇದೆ ಮಿಸ್ಟರ್ ಶರ್ಮಾ” ಎಂದು ಸಿಜೆಐ ಪ್ರಶ್ನಿಸಿದರು.
ಇದಕ್ಕೆ ಶರ್ಮಾ ಅವರು “ನಾವು ಸಾಕಷ್ಟು ದತ್ತಾಂಶ ಸಂಗ್ರಹಿಸಬೇಕಿದ್ದು, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ” ಎಂದರು.
ಇದಕ್ಕೆ ಪೀಠವು “ಪ್ರತಿ ಮತಟ್ಟೆಯ ಅಧಿಕಾರಿಯು ಸಂಜೆಯ ವೇಳೆಗೆ ಅಪ್ಲಿಕೇಶನ್‌ನಲ್ಲಿ ದತ್ತಾಂಶ ಹಂಚಿಕೊಳ್ಳುತ್ತಾರಲ್ಲವೇ? ದಿನದ ಅಂತ್ಯಕ್ಕೆ ಚುನಾವಣಾಧಿಕಾರಿಯ ಬಳಿ ಇಡೀ ಕ್ಷೇತ್ರದ ದತ್ತಾಂಶ ಇರುತ್ತದಲ್ಲದೇ?” ಎಂದರು.
ಇದಕ್ಕೆ ಇಸಿಐ ವಕೀಲರು “ತಕ್ಷಣಕ್ಕೆ ಲಭ್ಯವಾಗುವುದಿಲ್ಲ” ಎಂದರು. ಆಗ ಸಿಜೆಐ ಅವರಿ “ಮಾರನೇಯ ದಿನಕ್ಕಾದರೂ ಸಿಗುವುದಿಲ್ಲವೇ?” ಎಂದರು.
ಅಂತಿಮವಾಗಿ ಪೀಠವು ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಇಸಿಐಗೆ ನಿರ್ದೇಶಿಸಿ, ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿತು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನದ ದಿನದಂದು ಘೋಷಿಸಲಾದ ಆರಂಭಿಕ ಅಂದಾಜಿಗೆ ಹೋಲಿಸಿದರೆ ಮೊದಲ ಎರಡು ಹಂತಗಳಿಗೆ ಇಸಿಐ ಘೋಷಿಸಿದ ಅಂತಿಮ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದ ಸುತ್ತಲಿನ ಇತ್ತೀಚಿನ ವಿವಾದದ ಬೆಳಕಿನಲ್ಲಿ ಅರ್ಜಿ ಸಲ್ಲಿಸಲಾಗಿದೆ.