5 ಪುಟಗಳ ತೀರ್ಪು ಪ್ರಶ್ನಿಸಲು 60 ಪುಟಗಳ ಸಾರಾಂಶದ ಮೇಲ್ಮನವಿ! ಅರ್ಜಿದಾರರಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಇಂತಹ ಸುದೀರ್ಘ ಮನವಿಗಳು ಅನಪೇಕ್ಷಿತ ಎಂದು ಸೆಪ್ಟೆಂಬರ್ 27ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ತಿಳಿಸಿದೆ.
Supreme Court
Supreme Court

ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ನೀಡಿದ್ದ 5 ಪುಟಗಳ ತೀರ್ಪನ್ನು ಪ್ರಶ್ನಿಸಲು 60 ಪುಟಗಳ ಸಾರಾಂಶ ಇರುವ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ್ದ ಅರ್ಜಿದಾರರೊಬ್ಬರಿಗೆ ಸುಪ್ರೀಂ ಕೋರ್ಟ್‌ ಈಚೆಗೆ ₹ 25,000 ದಂಡ ವಿಧಿಸಿದೆ [ಸಂದೀಪ್ ಕುಮಾರ್ ಗರ್ಗ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇಂತಹ ಸುದೀರ್ಘ ಮನವಿಗಳು ಅನಪೇಕ್ಷಿತ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಸೆಪ್ಟೆಂಬರ್ 27ರಂದು ನೀಡಿದ್ದ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಅನುಮತಿ ನೀಡಲು ನಿರಾಕರಿಸಿದ ನ್ಯಾಯಾಲಯ ಅರ್ಜಿದಾರರು ದತ್ತಿ ಸಂಸ್ಥೆಗೆ ದೇಣಿಗೆಯಾಗಿ ₹ 25,000 ಪಾವತಿಸುವಂತೆ ಸೂಚಿಸಿತು.

Also Read
ಘನ ತ್ಯಾಜ್ಯ ನಿರ್ವಹಣೆ: ನಿಯಮ ಉಲ್ಲಂಘಿಸುವವರಿಗೆ ದುಬಾರಿ ದಂಡ ವಿಧಿಸಲು ಬಿಬಿಎಂಪಿ, ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

ಆರಂಭದಲ್ಲಿ ಅರ್ಜಿದಾರರ ಪರ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ವಕೀಲರಿಗೇ ದಂಡ ವಿಧಿಸಲು ನ್ಯಾಯಾಲಯ ಮುಂದಾದರೂ ತಾವು ಅರ್ಜಿದಾರರ ಖಚಿತ ನಿರ್ದೇಶನದ ಹಿನ್ನೆಲೆಯಲ್ಲಿ ಅರ್ಜಿಯನ್ನು ಸಿದ್ಧಪಡಿಸಿದ್ದು, ದಂಡ ವಿಧಿಸಿದರೆ ಇದು ತಪ್ಪು ನಿದರ್ಶನಕ್ಕೆ ಕಾರಣವಾಗುತ್ತದೆ ಎಂದು ಅರ್ಜಿದಾರರ ವಕೀಲರು ವಾದಿಸಿದ ಹಿನ್ನೆಲೆಯಲ್ಲಿ ನಿರ್ಧಾರದಿಂದ ಹಿಂದೆ ಸರಿಯಿತು.

ಇದರ ನಡುವೆಯೂ ಮೇಲ್ಮನವಿದಾರರಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿಗೆ ಸಂಬಂಧಿಸಿದ ಮುಖ್ಯ ಪ್ರಕರಣದಲ್ಲಿ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.

ಅರ್ಜಿದಾರರು ನಕಲಿ ದಾಖಲೆಗಳು ಸೃಷ್ಟಿಸಿದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ಈ ವರ್ಷ ಜುಲೈ 17 ರಂದು, ಅಲಾಹಾಬಾದ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆರೋಪಿ-ಅಪೀಲುದಾರರಿಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದು, ಆರೋಪಿ ತನಿಖೆಗೆ ಸಹಕರಿಸುವ ಷರತ್ತಿಗೆ ಒಳಪಟ್ಟಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 6 ರಂದು ನಡೆಯುವ ಸಾಧ್ಯತೆಯಿದೆ.

Kannada Bar & Bench
kannada.barandbench.com