ಶಾಹಿ ಮಸೀದಿ ಸಮೀಕ್ಷೆ: ವಿಚಾರಣೆ ಮುಂದೂಡಲು ಸಂಭಲ್‌ ನ್ಯಾಯಾಲಯಕ್ಕೆ ಸುಪ್ರೀಂ ಸೂಚನೆ, ಹೈಕೋರ್ಟ್‌ನತ್ತ ಚಿತ್ತ

ವಿಚಾರಣಾ ನ್ಯಾಯಾಲಯದ ಆದೇಶದ ನಂತರ ಉಂಟಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಸರ್ವೋಚ್ಚ ನ್ಯಾಯಾಲಯ.
Sambhal Jama Masjid
Sambhal Jama Masjid
Published on

ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಅನುಮತಿಸಿದ್ದ ಆದೇಶದ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಂತೆ ಸಂಭಲ್‌ನಲ್ಲಿರುವ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ [ಶಾಹಿ ಜಾಮಾ ಮಸೀದಿ ಸಂಭಾಲ್ ನಿರ್ವಹಣಾ ಸಮಿತಿ ವಿರುದ್ಧ ಹರಿಶಂಕರ್ ಜೈನ್ ಮತ್ತು ಓರ್ಸ್].

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರ ಪೀಠವು ವಿಚಾರಣಾ ನ್ಯಾಯಾಲಯದ ಆದೇಶದ ನಂತರ ಉಂಟಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಸರ್ವೋಚ್ಚ ನ್ಯಾಯಾಲಯವು ತನ್ನ ಇಂದಿನ ಆದೇಶದಲ್ಲಿ, "ಸಿವಿಲ್ ಪ್ರಕ್ರಿಯಾ ಸಂಹಿತೆಯ ಪ್ರಕಾರ ಸೂಕ್ತ ವೇದಿಕೆಯ ಮುಂದೆ ಅರ್ಜಿದಾರರು ನವೆಂಬರ್ 19ರ ಆದೇಶವನ್ನು ಪ್ರಶ್ನಿಸಬೇಕು ಎಂದು ನಾವು ಭಾವಿಸುತ್ತೇವೆ. ಈ ಮಧ್ಯೆ, ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಎಎಸ್‌ಜಿ ಕೆ ಎಂ ನಟರಾಜ್ ಅದೇ ಭರವಸೆ ನೀಡಿದ್ದಾರೆ. ಯಾವುದೇ ಮೇಲ್ಮನವಿಗೆ ಮುಂದಾದರೆ ಅದನ್ನು (ಹೈಕೋರ್ಟ್‌ನಲ್ಲಿ) ಮೂರು ಕರ್ತವ್ಯದ ದಿನಗಳೊಳಗೆ ಪಟ್ಟಿ ಮಾಡಬೇಕು. ವಿಚಾರಣಾ ನ್ಯಾಯಾಲಯವು ಜನವರಿ 8 ರಂದು ಪ್ರಕರಣವನ್ನು ಆಲಿಸಲಿರುವುದಾಗಿ ಹೇಳಿದ್ದು ಹೈಕೋರ್ಟ್‌ನಲ್ಲಿ ಈ ವಿಷಯವನ್ನು ಪಟ್ಟಿ ಮಾಡುವವರೆಗೆ ವಿಚಾರಣಾ ನ್ಯಾಯಾಲಯವು ಈ ವಿಷಯದಲ್ಲಿ ಮುಂದುವರಿಯುವುದಿಲ್ಲ ಎಂದು ನಾವು ವಿಶ್ವಾಸವಿರಿಸುತ್ತೇವೆ. ನಾವು ಪ್ರಕರಣದ ಸಂಬಂಧ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ವಿಶೇಷ ವಿಚಾರಣಾ ಅರ್ಜಿಯನ್ನುವಿಲೇವಾರಿ ಮಾಡುತ್ತಿಲ್ಲ, ಬದಲಿಗೆ 2025 ರ ಜನವರಿ 6ರಿಂದ ಪ್ರಾರಂಭವಾಗುವ ವಾರದಲ್ಲಿ ಪ್ರಕರಣವನ್ನು ಮರುಪಟ್ಟಿ ಮಾಡಿ," ಎಂದು ಹೇಳಿದೆ.

ಮಸೀದಿಯ ಸಮೀಕ್ಷೆ ನಡೆಸುವಂತೆ ಸಿವಿಲ್ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆಯನ್ನು ಪೀಠವು ನಡೆಸಿತು. ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ್ ಅವರು ನವೆಂಬರ್ 29 ರೊಳಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ವಕೀಲ ಆಯುಕ್ತರನ್ನು ನೇಮಿಸಿದ್ದರು.

ಮೊಘಲರ ಕಾಲದಲ್ಲಿ ಧ್ವಂಸ ಮಾಡಲಾದ ದೇವಾಲಯದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ವಕೀಲ ಹರಿಶಂಕರ್ ಜೈನ್ ಮತ್ತು ಇತರ ಏಳು ಮಂದಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ವಿಚಾರಣಾ ನ್ಯಾಯಾಲಯವು ಈ ನಿರ್ದೇಶನವನ್ನು ನೀಡಿತ್ತು.

ಇಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಕರಣವು ವಿಚಾರಣೆಗೆ ಬಂದಾಗ ಸಿಜೆಐ ಖನ್ನಾ ಅವರು, "ನಾವು ಆದೇಶದ ಬಗ್ಗೆ ಕೆಲವು ಸಂದೇಹಗಳನ್ನು ಹೊಂದಿದ್ದೇವೆ... ಇದು ಹೈಕೋರ್ಟ್‌ಗೆ ಸಂಬಂಧಿಸಿದ 227ನೇ ವಿಧಿಯ ನ್ಯಾಯವ್ಯಾಪ್ತಿಗೆ ಬದ್ಧವಾಗಿದೆ ಅಲ್ಲವೇ? ಹಾಗಾಗಿ, ಇದು ಬಾಕಿ ಉಳಿದಿರಲಿ... ನಮಗೆ ಶಾಂತಿ ಮತ್ತು ಸೌಹಾರ್ದತೆ ಬೇಕು... ನೀವು ಪ್ರತಿಕ್ರಿಯೆಗಳನ್ನು ಸಲ್ಲಿಸಿ... ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ" ಎಂದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಈ ಆದೇಶವು (ವಿಚಾರಣಾ ನ್ಯಾಯಾಲಯದ ಆದೇಶ) "ದೊಡ್ಡ ಸಾರ್ವಜನಿಕ ಕಿಡಿಗೇಡಿತನ" ವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ನ್ಯಾಯಾಲಯದ ಮುಂದೆ ಅಸಮಾಧಾನ ತೋಡಿಕೊಂಡರು.

ಮುಂದುವರೆದು, "ಅಂತಹ 10 ವ್ಯಾಜ್ಯಗಳು ಬಾಕಿ ಉಳಿದಿವೆ... ಸಮೀಕ್ಷೆಗೆ ಆದೇಶಿಸಲಾಗಿದೆ ಹಾಗೂ ಆ ನಂತರ ಕಥೆಯೊಂದನ್ನು ನಿರ್ಮಿಸಲಾಗಿದೆ, ಇದುವೇ ಕಾರ್ಯವಿಧಾನವಾಗಿದೆ..." ಎಂದು ಆಕ್ಷೇಪಿಸಿದರು.

ಈ ವೇಳೆ ನ್ಯಾಯಾಲಯವು, "ಶಾಂತಿ ಮತ್ತು ಸೌಹಾರ್ದತೆಯನ್ನು ಖಾತ್ರಿಪಡಿಸಬೇಕು. ನಾವು ಪ್ರಕರಣವನ್ನು ಬಾಕಿ ಇರಿಸುತ್ತೇವೆ" ಎಂದರು. ಮುಂದುವರೆದು, ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ "ಸೆಕ್ಷನ್ 43ರ ಅನ್ವಯ ಜಿಲ್ಲಾಡಳಿತವು ಮಧ್ಯಸ್ಥಿಕೆ ಸಮಿತಿಗಳನ್ನು ರಚಿಸಲಿ... ನಾವು ಸಂಪೂರ್ಣವಾಗಿ ತಟಸ್ಥರಾಗಿರಬೇಕು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು..." ಎಂದು ಒತ್ತಿ ಹೇಳಿತು.

ಸರ್ವೋಚ್ಚ ನ್ಯಾಯಾಲಯದ ಮುಂದೆ ಶಾಹಿ ಜಾಮಾ ಮಸೀದಿ ಸಮಿತಿಯು ಸಲ್ಲಿಸಿರುವ ಮನವಿಯಲ್ಲಿ, ಸಂಭಲ್‌ನ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಪ್ರಾರ್ಥಿಸಿದ್ದು, ಇದನ್ನು "ತರಾತುರಿಯಲ್ಲಿ" ಆದೇಶಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ. ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸರ್ವೆ ಆದೇಶವನ್ನು ಮಾಮೂಲಿಯಂತೆ ನೀಡುವುದನ್ನು, ಕಾರ್ಯಗತಗೊಳಿಸುವುದನ್ನು ಮಾಡಬಾರದು" ಎಂದು ಸಮಿತಿ ಹೇಳಿದೆ.

ಅಲ್ಲದೆ ಪ್ರತಿವಾದಿಗಳನ್ನು ಆಲಿಸದೆ ಅಂತಹ ಆದೇಶಗಳನ್ನು ಜಾರಿಗೊಳಿಸಬಾರದು. ಅಂತಹ ಆದೇಶವನ್ನು ಜಾರಿಗೊಳಿಸಿದರೆ, ಸೂಕ್ತ ನ್ಯಾಯಿಕ ಪರಿಹಾರವನ್ನು ಪಡೆಯಲು ಸಿವಿಲ್ ನ್ಯಾಯಾಲಯಗಳು ಸಾಕಷ್ಟು ಸಮಯವನ್ನು ನೀಡಬೇಕು ಎಂದೂ ಕೋರಲಾಗಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಹುಝೆಫಾ ಎ ಅಹ್ಮದಿ ಮತ್ತು ವಕೀಲರಾದ ಫುಜೈಲ್ ಅಹ್ಮದ್ ಅಯೂಬಿ, ನಿಜಾಮುದ್ದೀನ್ ಪಾಷಾ, ಇಬಾದ್ ಮುಷ್ತಾಕ್, ಆಕಾಂಕ್ಷಾ ರೈ ಮತ್ತು ಗುರ್ನೀತ್ ಕೌರ್ ವಾದ ಮಂಡಿಸಿದರು.

ಹಿನ್ನೆಲೆ: ವಿಚಾರಣಾ ನ್ಯಾಯಾಲಯವು ಶಾಹಿ ಮಸೀದಿ ಸಮೀಕ್ಷೆಗೆ ಆದೇಶಿಸಿದ ನಂತರ ಸಂಭವಿಸಿದ ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ನವೆಂಬರ್ 19 ರಂದು ಪ್ರಾರಂಭಿಕ ಸಮೀಕ್ಷೆಯ ನಡೆದಿತ್ತು. ಆನಂತರ ಶಾಹಿ ಜಾಮಾ ಮಸೀದಿಯ ಎರಡನೇ ಸಮೀಕ್ಷೆಯನ್ನು ನಡೆಸಲು ಸರ್ವೇಯರ್‌ಗಳ ತಂಡದೊಂದಿಗೆ ಆಗಮಿಸಿದ ನಂತರ ನವೆಂಬರ್ 24 ರಂದು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಹಿಂಸಾಚಾರ ಸಂಭವಿಸಿತ್ತು.

Kannada Bar & Bench
kannada.barandbench.com