ಕಂಚ ಗಚ್ಚಿಬೌಲಿಯಲ್ಲಿ ಮರಗಳ ಹನನ ನಿಲ್ಲಿಸುವಂತೆ ತೆಲಂಗಾಣಕ್ಕೆ ಸುಪ್ರೀಂ ಸೂಚನೆ

ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಕೆ ಪರಮೇಶ್ವರ್ ಅವರು ಅರಣ್ಯ ಪ್ರದೇಶದಲ್ಲಿ ಮರ ಕಡಿಯುತ್ತಿರುವುದನ್ನು ಪ್ರಸ್ತಾಪಿಸಿರುವ ಸುದ್ದಿ ವರದಿಗಳ ಬಗ್ಗೆ ತಿಳಿಸಿದ ನಂತರ ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು.
Trees Image for representative purpose
Trees Image for representative purpose
Published on

ಹೈದರಾಬಾದ್‌ನ ಕಂಚ ಗಚ್ಚಿಬೌಲಿಯಲ್ಲಿ ಅರಣ್ಯ ನಾಶಕ್ಕೆ ಮುಂದಾಗದಂತೆ ತೆಲಂಗಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ತೆಲಂಗಾಣ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಇಂದು ಮಧ್ಯಾಹ್ನ 3:30 ರೊಳಗೆ ಮಧ್ಯಂತರ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಸೂಚಿಸಿತು.

Also Read
ಶಿವಾಲಿಕ್ ಆನೆ ಅಭಯಾರಣ್ಯದಲ್ಲಿ 3,300 ಮರ ಕಡಿಯುವ ಪ್ರಸ್ತಾವನೆಗೆ ಉತ್ತರಾಖಂಡ ಹೈಕೋರ್ಟ್ ತಡೆ

ನ್ಯಾಯಾಲಯದ ಮುಂದಿನ ಆದೇಶದವರೆಗೆ ಕಂಚ ಗಚ್ಚಿಬೌಲಿ ಅರಣ್ಯ ಪ್ರದೇಶದಲ್ಲಿ ಯಾವುದೇ ಮರ ಕಡಿಯಲು ಅನುಮತಿ ನೀಡಬಾರದು ಎಂದು ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಾವು ನಿರ್ದೇಶನ ನೀಡುತ್ತೇವೆ ಎಂದ ನ್ಯಾಯಾಲಯ ಮಧ್ಯಾಹ್ನ 3:45 ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಟಿ ಎನ್ ಗೋದವರ್ಮನ್ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಕೆ ಪರಮೇಶ್ವರ್ ಅವರು ಅರಣ್ಯ ಪ್ರದೇಶದಲ್ಲಿ ಮರ ಕಡಿಯುತ್ತಿರುವುದನ್ನು ಪ್ರಸ್ತಾಪಿಸಿರುವ ಸುದ್ದಿ ವರದಿಗಳ ಬಗ್ಗೆ ತಿಳಿಸಿದ ನಂತರ ನ್ಯಾಯಾಲಯ  ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.

"ವಾರಾಂತ್ಯದ ದೀರ್ಘ ರಜಾದಿನಗಳ ಲಾಭ ಪಡೆದು ಅಧಿಕಾರಿಗಳು ಮರಗಳನ್ನು ಕಡಿಯಲು ಆತುರ ತೋರುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಅಲ್ಲದೆ, ಅರಣ್ಯ ಎಂಟು ಜಾತಿಯ  ಪ್ರಾಣಿಗಳಿಗೆ ನೆಲೆಯಾಗಿದೆ ಎಂದು ಹೇಳಲಾಗುತ್ತಿದೆ" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಂಚ ಗಚ್ಚಿಬೌಲಿ ಗ್ರಾಮದ 400 ಎಕರೆ ಜಮೀನನ್ನು ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್, ಹೈದರಾಬಾದ್ (ಟಿಜಿಐಐಸಿ) ಮೂಲಕ ಹರಾಜು ಮಾಡುವ ಪ್ರಸ್ತಾವನೆ ಸರ್ಕಾರದ್ದಾಗಿತ್ತು.

ಯೋಜನೆ ಅರಣ್ಯ ಭೂಮಿಯನ್ನು ಕಬಳಿಸುತ್ತದೆ ಇದು ಪರಿಸರ ಸೂಕ್ಷ್ಮ ವಲಯವಾಗಿದ್ದು ಹೈದರಾಬಾದ್‌ ನಗರದ ಶ್ವಾಸಕೋಶದಂತೆ ಕೆಲಸ ಮಾಡುತ್ತದೆ ಎಂದು ಯೋಜನೆಯ ವಿರೋಧಿಗಳು ವಾದಿಸುತ್ತಿದ್ದಾರೆ. ವಿರೋಧ ವ್ಯಕ್ತಪಡಿಸಿದವರಲ್ಲಿ ಹತ್ತಿರದ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸೇರಿದ್ದಾರೆ, ವರದಿಗಳ ಪ್ರಕಾರ, ಇಬ್ಬರು ಮಾಜಿ ವಿದ್ಯಾರ್ಥಿಗಳನ್ನು ಸಹ ಬಂಧಿಸಲಾಗಿದೆ.

Also Read
ತಾಜ್ ಮಹಲ್ ಟ್ರಪೀಜಿಯಂ ವಲಯದಲ್ಲಿ ಕೃಷಿ-ಅರಣ್ಯಕ್ಕಾಗಿ ಮರ ಕಡಿಯುವುದಕ್ಕೆ ಅನುಮತಿಸಿದ್ದನ್ನು ಪ್ರಶ್ನಿಸಿದ ಸುಪ್ರೀಂ

ಮರ ಕಡಿಯುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳು ತೆಲಂಗಾಣ ಹೈಕೋರ್ಟ್‌ನಲ್ಲೂ ವಿಚಾರಣೆಗೆ ಬರಲಿವೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಪ್ರಕರಣದಲ್ಲಿ ಹಾಜರಾಗಲಿದ್ದಾರೆ.

"ತೆಲಂಗಾಣ ಹೈಕೋರ್ಟ್‌ನ ಮುಂದಿರುವ ವಿಚಾರಣೆಗೆ ನಾವು ತಡೆ ನೀಡುತ್ತಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ " ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Kannada Bar & Bench
kannada.barandbench.com