ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕಿಯಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಕೊನೆಯ ಕರ್ತವ್ಯದ ದಿನವಾದ ಇಂದು ನ್ಯಾಯಮೂರ್ತಿಗಳು ಮತ್ತು ವಕೀಲ ಸಮುದಾಯ ಅವರಿಗೆ ಮೆಚ್ಚುಗೆ ಸೂಚಿಸಿದರು.
ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರು ನ್ಯಾ. ಹಿಮಾ ಕೊಹ್ಲಿ ಅವರೊಂದಿಗೆ ಔಪಚಾರಿಕವಾಗಿ ಪೀಠ ಹಂಚಿಕೊಂಡಿದ್ದರು.
“ಕಠಿಣ ಸಂದರ್ಭದಲ್ಲಿ ನ್ಯಾ. ಹಿಮಾ ಅವರು ನನ್ನ ಜೊತೆ ಬಲವಾಗಿ ನಿಂತಿದ್ದರು. ಹಿಮಾ ಅವರೇ ನೀವು ಮಹಿಳಾ ನ್ಯಾಯಮೂರ್ತಿ ಮಾತ್ರವಲ್ಲ, ಕೆಲಸದ ಸ್ಥಳದಲ್ಲಿಯೂ ಸಮಾನ ಸ್ಥಿತಿಯನ್ನು ಮಹಿಳೆಯರಿಗೆ ದೊರೆಯಬೇಕು ಎನ್ನುವ ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕರು” ಎಂದರು.
ನ್ಯಾ. ಕೊಹ್ಲಿ ಅವರು ಇನ್ನೊಬ್ಬ ಮಹಿಳಾ ನ್ಯಾಯಮೂರ್ತಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಳ್ಳುವ ಭರವಸೆಯನ್ನು ದಿನದ ಆರಂಭದಲ್ಲಿ ವ್ಯಕ್ತಪಡಿಸಿದ್ದಾರೆ. ಇಂದು ಬೆಳಿಗ್ಗೆ ಕಾಫಿ ಸವಿಯುವ ಕೊಠಡಿಯಲ್ಲಿ ಮೊದಲ ಐವರು ನ್ಯಾಯಮೂರ್ತಿಗಳು (ಕೊಲಿಜಿಯಂ ಸದಸ್ಯರು) ಇಲ್ಲ ಎಂಬ ಕುರಿತು ನ್ಯಾಯಮೂರ್ತಿಗಳ ನಡುವೆ ಊಹಾಪೋಹ ಏರ್ಪಟ್ಟಿತ್ತು. ಹಿಮಾ ತನ್ನದೇ ಶೈಲಿಯಲ್ಲಿ ನನ್ನ ನಿವೃತ್ತಿಯಿಂದ ತೆರವಾಗುವ ಸ್ಥಾನ ತುಂಬಲು ಸಭೆ ನಡೆಸುತ್ತಿರಬಹುದು. ನನ್ನ ಸ್ಥಾನಕ್ಕೆ ಮಹಿಳಾ ನ್ಯಾಯಮೂರ್ತಿಯೇ ನೇಮಕವಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ” ಎಂದರು.
ಅಭಿಮಾನಪೂರ್ವಕ ಮಾತುಗಳನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ನ್ಯಾ. ಹಿಮಾ ಕೊಹ್ಲಿ,“ನನಗೆ ಇಲ್ಲಿ ಎಲ್ಲವನ್ನೂ ಸುಗಮಗೊಳಿಸಿದಿರಿ. ಮನೆಯ ಆಪ್ತತೆಯನ್ನು ಉಂಟು ಮಾಡಿದಿರಿ. ಈ ಮೂರು ವರ್ಷಗಳು ಅತ್ಯಂತ ಸ್ಮರಣೀಯವಾಗಿದ್ದವು, ಮುಖ್ಯ ನ್ಯಾಯಮೂರ್ತಿ, ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳೊಂದಿಗೆ ಕಲಿಕೆಯ ಅನುಭವ ದೊರೆಯಿತು, ಎಲ್ಲರೂ ಸಹೃದಯಿಗಳಾಗಿದ್ದರು. ವಕೀಲರ ಸಮೂಹ ಸಹ ಎಲ್ಲಾ ರೀತಿಯ ನೆರವು ನೀಡಿದೆ. ನನ್ನ ಬದುಕಿನಲ್ಲಿ ಬಂದು ಹೋಗಿರುವುದಕ್ಕೆ ಎಲ್ಲರಿಗೂ ಧನ್ಯವಾದ” ಎಂದು ನ್ಯಾ. ಹಿಮಾ ಕೊಹ್ಲಿ ಹೇಳಿದರು.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಮಾತನಾಡಿ, “ನ್ಯಾ. ಹಿಮಾ ಅವರು ನಮ್ಮ ನಡುವಿನ ಸಾಮಾನ್ಯ ಮಾತುಕತೆಯ ವೇಳೆ ನೀವು ನ್ಯಾ. ಬೋಪಣ್ಣ ನಿವೃತ್ತರಾಗುವಾಗ ಕನ್ನಡದಲ್ಲಿ ಏನೋ ಹೇಳಿದ್ದಿರಿ. ಅದೇ ರೀತಿ, ನನ್ನ ಬೀಳ್ಕೊಡುಗೆಯ ವೇಳೆ ಪಂಜಾಬಿ ಕಲಿತು ನ್ಯಾಯ ಒದಗಿಸಬೇಕು ಎಂದಿದ್ದರು. ಆದರೆ, ಇದು ನನ್ನ ಪಾಲಿಗೆ ಕಠಿಣ ಕೆಲಸ. ಹೀಗಾಗಿ, ನಾನು ನ್ಯಾ. ಕೊಹ್ಲಿ ಅವರ ಬೀಳ್ಕೊಡುಗೆ ನ್ಯಾಯ ಒದಗಿಸಲು ದಕ್ಷಿಣ ಭಾರತದ ಸರಳ ಇಂಗ್ಲಿಷ್ ಬಳಕೆ ಮಾಡುತ್ತೇನೆ” ಎಂದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಅಗತ್ಯವಿರುವಾಗಲೆಲ್ಲಾ ನ್ಯಾ. ಕೊಹ್ಲಿ ಅವರು ಸೂಕ್ತ ನಿಲುವು ಕೈಗೊಂಡಿದ್ದಾರೆ. ಅದಕ್ಕಾಗಿ ಅವರಿಗೆ ನಾವು ಸಲ್ಯೂಟ್ ಮಾಡುತ್ತೇವೆ” ಎಂದರು.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮಾತನಾಡಿ, "ನಿಮ್ಮ ತೀಕ್ಷ್ಣ ನೋಟದ ಹಿಂದೆ ಅನುಭೂತಿಯುಳ್ಳ ಹೃದಯವಿದೆ ಎಂಬುದನ್ನು ನಾವು ನಿಮ್ಮ ತೀರ್ಪುಗಳ ಮೂಲಕ ತಿಳಿದಿದ್ದೇವೆ. ನಿಮಗೆ ಯಾರೂ ಗೂಗ್ಲಿ ಬೌಲ್ ಮಾಡಲು ಆಗುತ್ತಿರಲಿಲ್ಲ" ಎಂದು ಕೊಹ್ಲಿ ಅವರ ತೀಕ್ಷ್ಣಮತಿ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದರು.
ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಒಕ್ಕೂಟದ ಅಧ್ಯಕ್ಷ ವಿಪಿನ್ ನಾಯರ್ ಮಾತನಾಡಿದರು.