ಪೋಕ್ಸೊ ಪ್ರಕರಣದ ಆರೋಪಿಯಾಗಿರುವ ಮುರುಘಾ ಶ್ರೀ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
Justices Vikram Nath and Prashant Kumar Mishra with SC
Justices Vikram Nath and Prashant Kumar Mishra with SC

ಮುರುಘಾ ಮಠದ ಹಾಸ್ಟೆಲ್‌ನಲ್ಲಿ ಇದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೋಕ್ಸೊ ಪ್ರಕರಣದ ಅಡಿ ಬಂಧಿತರಾಗಿದ್ದ ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್‌ ಈಚೆಗೆ ತಡೆಯಾಜ್ಞೆ ನೀಡಿದೆ.

ಎಚ್‌ ಏಕನಾಥಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಆರೋಪಿಯಷ್ಟೇ ಅಲ್ಲದೇ ಸಂತ್ರಸ್ತರ ದೃಷ್ಟಿಯಿಂದ ನ್ಯಾಯಯುತ ವಿಚಾರಣೆಯ ಅಗತ್ಯದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರು ವಾಸ್ತವಿಕ ಅಂಶಗಳ ಸಾಕ್ಷ್ಯ ವಿಚಾರಣೆಯ ಸಂದರ್ಭದಲ್ಲಿ ಜೈಲಿನಲ್ಲಿರುವುದು ಸೂಕ್ತ” ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ಸ್ವಾಮೀಜಿಯು ಒಂದು ವಾರದಲ್ಲಿ ಪೊಲೀಸರಿಗೆ ಶರಣಾಗಬೇಕು. ಜಾಮೀನು ರದ್ದತಿ ಆದೇಶವು ನಾಲ್ಕು ತಿಂಗಳಿಗೆ ಸೀಮಿತವಾಗಿದ್ದು, ಅಗತ್ಯಬಿದ್ದಲ್ಲಿ ಮತ್ತೆರಡು ತಿಂಗಳು ವಿಸ್ತರಿಸಬಹುದಾಗಿದೆ. ವಿಚಾರಣಾಧೀನ ನ್ಯಾಯಾಲಯವು ಪಕ್ಷಕಾರರ ನಡತೆಯ ಮೇಲೆ ನಿಗಾ ಇಡಲಿದ್ದು, ಯಾವುದೇ ಪಕ್ಷಕಾರರು ಅನಗತ್ಯವಾಗಿ ವಿಚಾರಣೆ ತಡಮಾಡಿದರೆ ಅದನ್ನು ಉಲ್ಲೇಖಿಸಿ, ಅದರ ಮಾಹಿತಿಯನ್ನು ವಿಚಾರಣಾಧೀನ ನ್ಯಾಯಾಲಯವು ಸುಪ್ರೀಂ ಕೋರ್ಟ್‌ಗೆ ರವಾನಿಸಬೇಕು” ಎಂದಿದೆ. ಅಲ್ಲದೇ, ಒಂದು ವರ್ಷದೊಳಗೆ ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಬೇಕು ಎಂದಿದೆ.

ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ 14 ತಿಂಗಳು ಜೈಲಿನಲ್ಲಿದ್ದ ಸ್ವಾಮೀಜಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

₹2  ಲಕ್ಷ ಮೌಲ್ಯದ ಎರಡು ವೈಯಕ್ತಿಕ ಬಾಂಡ್‌ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಶರಣರಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಸಾಕ್ಷ್ಯ ತಿರುಚಬಾರದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡುವಂತಿಲ್ಲ ಎಂಬ ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿತ್ತು.

2022ರ ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದರು. ಹಾಸ್ಟೆಲ್‌ನಲ್ಲಿ ತಂಗಿದ್ದ ತಮ್ಮನ್ನು ಸ್ವಾಮೀಜಿ ಅವರ ಖಾಸಗಿ ಕೋಣೆ ಸ್ವಚ್ಛತೆಗೆ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಚಾಕೋಲೇಟ್‌ ಮತ್ತು ಸೇಬಿನ ಹಣ್ಣಿಗೆ ಮಾದಕ ದ್ರವ್ಯ ಸೇರಿಸಿ ಕೊಡುತ್ತಿದ್ದರು. ಇದರಿಂದ ಪ್ರಜ್ಞೆ ತಪ್ಪಿದಾಗ ಸ್ವಾಮೀಜಿ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಬಾಲಕಿಯರು ದೂರಿನಲ್ಲಿ ಆರೋಪಿಸಿದ್ದರು.

ಮೈಸೂರಿನ ನಜಾರಾಬಾದ್‌ ಠಾಣೆಯ ಪೊಲೀಸರು ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಿದ್ದರು. ಇದರಲ್ಲಿ ಶಿವಮೂರ್ತಿ ಮುರುಘಾ ಶರಣರು, ಮಠದ ಹಾಸ್ಟೆಲ್‌ ವಾರ್ಡನ್‌ ರಶ್ಮಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ಕಿರಿಯ ಸ್ವಾಮೀಜಿ ಮತ್ತು ಮಠದ ವಕೀಲ ಗಂಗಾಧರಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಸ್ವಾಮೀಜಿಯನ್ನು 2022ರ ಸೆಪ್ಟೆಂಬರ್‌ 1ರಂದು ಬಂಧಿಸಲಾಗಿತ್ತು.

ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ, ಬಾಲ ನ್ಯಾಯ ಕಾಯಿದೆ, ಪೋಕ್ಸೊ ಕಾಯಿದೆ ಮತ್ತು ಧಾರ್ಮಿ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದೆ. ಇವುಗಳಲ್ಲಿ ಕೆಲವು ಕಾಯಿದೆ ಮತ್ತು ಸೆಕ್ಷನ್‌ಗಳನ್ನು ತಪ್ಪಾಗಿ ಅನ್ವಯಿಸಲಾಗಿದೆ ಎಂದು ಹೈಕೋರ್ಟ್‌ ಅವುಗಳನ್ನು ಕೈಬಿಟ್ಟಿದೆ. ಇದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com