ಖಲಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ನೀಡಲಾದ ಜಾಮೀನನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳಬಾರದಿತ್ತು ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಹೇಳಿದೆ.
"ಪರಿಗಣಿಸಬೇಕಾದ ಮತ್ತೊಂದು ಅಂಶವೆಂದರೆ ಭಯೋತ್ಪಾದಕ ಚಟುವಟಿಕೆಗಳನ್ನು ಒಳಗೊಂಡಿರುವ ಅಪರಾಧದ ಸ್ವರೂಪವು ದೇಶಾದ್ಯಂತದ ಮಾತ್ರವಲ್ಲದೆ ಶತ್ರು ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ. ಪ್ರಕರಣವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದಿತ್ತು" ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
ಜೂನ್ 18, 2020 ರಂದು ಬಂಧಿತನಾಗಿದ್ದ ರಾಜ್ ಕುಮಾರ್ ಅಲಿಯಾಸ್ ಲವಪ್ರೀತ್‌ಗೆ ದೆಹಲಿ ಹೈಕೋರ್ಟ್ 2021ರ ಫೆಬ್ರವರಿಯಲ್ಲಿ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಆರೋಪಿ ಒಟ್ಟು 150 ದಿನಗಳನ್ನು ಕಸ್ಟಡಿಯಲ್ಲಿ ಕಳೆದಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಆತನಿಗೆ ಡಿಫಾಲ್ಟ್ ಜಾಮೀನು ನೀಡಿತು. ಇದಲ್ಲದೆ ತನಿಖಾ ಸಂಸ್ಥೆ ತನಿಖಾವಧಿಯನ್ನು ವಿಸ್ತರಿಸಲು ಸೂಕ್ತ ಆಧಾರಗಳನ್ನು ನೀಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಆದರೆ, ಯುಎಪಿಎ ಸೆಕ್ಷನ್ 43 ಡಿ (2) (ಬಿ) ಪ್ರಕಾರ, ತನಿಖಾವಧಿಯನ್ನು ಗರಿಷ್ಠ 180 ದಿನಗಳವರೆಗೆ ವಿಸ್ತರಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸಮಯದಲ್ಲಿ ಉಳಿದ ಅನುಮತಿಗಳು ಮತ್ತು ವಿಧಿವಿಜ್ಞಾನ ವರದಿಗಳ ಕೊರತೆ ಇದ್ದುದರಿಂದ ಪೊಲೀಸರು ತನಿಖಾವಧಿ ವಿಸ್ತರಿಸುವಂತೆ ಕೋರಿದ್ದಾರೆ ಎಂದು ಅದು ಹೇಳಿದೆ.
"ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಸಿಆರ್‌ಪಿಸಿ ಸೆಕ್ಷನ್ 173 (2)ರ ಅಡಿಯಲ್ಲಿ ಪೊಲೀಸ್ ವರದಿಯನ್ನು ಈಗಾಗಲೇ 30.11.2020ಕ್ಕೆ ಮುನ್ನ ಸಲ್ಲಿಸಲಾಗಿದೆ ಎಂದು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ" ಎಂಬುದಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದ್ದರಿಂದ ಮೇಲ್ಮನವಿಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ನಿರ್ದೇಶಿಸಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು , ವಕೀಲರಾದ ಮುಖೇಶ್ ಕುಮಾರ್ ಮರೋರಿಯಾ, ಸೈರಿಕಾ ರಾಜು, ಅಶುತೋಷ್ ಘಡೆ ಹಾಗೂ ಗುಂಟೂರು ಪ್ರಮೋದ್ ಕುಮಾರ್ ದೆಹಲಿ ಪೊಲೀಸರನ್ನು ಪ್ರತಿನಿಧಿಸಿದರು. ಆರೋಪಿ ಪರವಾಗಿ ವಕೀಲೆ ಸುಪ್ರಿಯಾ ಜುನೇಜಾ ಹಾಜರಿದ್ದರು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]