ಬಿಜೆಪಿ ಕಾರ್ಯಕರ್ತನ ಕೊಲೆ: ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ವಿಚಾರಣೆ ನಡೆಯುತ್ತಿರುವಾಗ ಆರೋಪಿ ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದ ಪೀಠ.
Congress MLA Vinay Kulkarni
Congress MLA Vinay Kulkarni Facebook
Published on

ಬಿಜೆಪಿ ಕಾರ್ಯಕರ್ತ ಯೋಗೇಶ್ ಗೌಡ ಅವರನ್ನು 2016ರಲ್ಲಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಜೂನ್ 5ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ವಿಚಾರಣೆ ನಡೆಯುತ್ತಿರುವಾಗ ಆರೋಪಿ ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದಿದೆ.

ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ "ಪ್ರತಿವಾದಿ (ವಿನಯ್‌) ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪರೋಕ್ಷವಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ" ಎಂದಿತು.

Also Read
ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಇ ಡಿಗೆ ಹೈಕೋರ್ಟ್‌ ನಿರ್ದೇಶನ

ಈ ಹಿನ್ನೆಲೆಯಲ್ಲಿ ವಿನಯ್‌ ಜಾಮೀನು ರದ್ದತಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿತು. ಸಿಬಿಐ ಮಂಡಿಸಿದ ಸಾಕ್ಷ್ಯಗಳ ಬಗ್ಗೆ ವಿವರವಾದ ಅವಲೋಕನಕ್ಕೆ ಒಪ್ಪದ ನ್ಯಾಯಾಲಯ  ಹಿಂದೆ ನೀಡಲಾದ ಜಾಮೀನು ಇನ್ನು ಮುಂದೆ ಸಮರ್ಥನೀಯವಲ್ಲ ಎಂದಿತು. ಕುಲಕರ್ಣಿ ಅವರು ಒಂದು ವಾರದೊಳಗೆ ಶರಣಾಗಬೇಕು ಎಂದು ಸೂಚಿಸಿತು.

ವಿಚಾರಣೆಯನ್ನು ನ್ಯಾಯಯುತವಾಗಿ ತ್ವರಿತವಾಗಿ ನಡೆಸಬೇಕು ಮತ್ತು ಸುಪ್ರೀಂ ಕೋರ್ಟ್‌ನ ಪ್ರಸ್ತುತ ಅವಲೋಕನಗಳಿಂದ ಪ್ರಭಾವಿತವಾಗಿ ವಿಚಾರಣೆ ನಡೆಸಬಾರದು ಎಂದು ಪೀಠ ಇದೇ ವೇಳೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು.

ಕುಲಕರ್ಣಿ ತಮ್ಮ ಪತ್ನಿ, ಚಾಲಕ ಮತ್ತು ಗನ್ ಮ್ಯಾನ್ ಮೊಬೈಲ್ ಫೋನ್ ಬಳಸಿ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಸಂಪರ್ಕಿಸಿದ್ದಾರೆ ಎಂದು ಸರ್ಕಾರ ಮತ್ತು ಸಿಬಿಐ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದಿಸಿದರು. ಆರೋಪಿಗಳು ಮತ್ತು ಪ್ರಕರಣದ ಪ್ರಮುಖ ವ್ಯಕ್ತಿಗಳ ನಂಟನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಅವರು ಪೀಠಕ್ಕೆ ತೋರಿಸಿದರು.

ಮೃತರ ಪತ್ನಿ ಪ್ರಮುಖ ಸಾಕ್ಷಿಯಲ್ಲ ಮತ್ತು ಅವರನ್ನು ಪ್ರಾಸಿಕ್ಯೂಷನ್ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ರಾಜು ಸ್ಪಷ್ಟಪಡಿಸಿದರು.

Also Read
ಯೋಗೀಶ್‌ ಗೌಡ ಕೊಲೆ: ಆರೋಪ ನಿಗದಿ, ವಿಚಾರಣೆ ರದ್ದತಿ ಕೋರಿದ್ದ ಶಾಸಕ ವಿನಯ್‌ ಕುಲಕರ್ಣಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಕುಲಕರ್ಣಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್ , ಪ್ರತಿಕ್ರಿಯೆ ಸಲ್ಲಿಸಲು ಸೋಮವಾರದವರೆಗೆ ಸಮಯಾವಕಾಶ ಕೋರಿದರು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನ ನಡೆಸಿರುವ ಬಗ್ಗೆ ಪುರಾವೆಗಳಿಲ್ಲ ಎಂದು ಅವರು ವಾದಿಸಿದರು. ಅಲ್ಲದೆ ತಮ್ಮ ಕಕ್ಷಿದಾರರು ಪ್ರಾಸಿಕ್ಯೂಷನ್‌ಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದರು.

ತಮ್ಮ ಕಕ್ಷಿದಾರ ವಿನಯ್‌ ಅವರ ರಾಜಕೀಯ ಜೀವನ ಮುಗಿದುಹೋಗಿದೆ. ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಹ ಕೃತ್ಯ ಎಸಗಿದ್ದರೆ ಕಾನೂನು ಅವರಿಗೆ ಶಿಕ್ಷಿಸಲಿ ಎಂದ ಸಿಂಗ್‌ ಜಾಮೀನು ಷರತ್ತುಗಳನ್ನು ವಿನಯ್‌ ಉಲ್ಲಂಘಿಸಿಲ್ಲ ಎಂಬುದಾಗಿ ಸಮರ್ಥಿಸಿಕೊಂಡರು. ಆದರೆ, ಈ ವಾದಗಳನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

Kannada Bar & Bench
kannada.barandbench.com