
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಹಾಗೂ ಇತರ ಐವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ "ಹೈಕೋರ್ಟ್ ಆದೇಶ ಬದಿಗೆ ಸರಿಸಲಾಗಿದೆ. ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲಾಗಿದೆ" ಎಂದು ತಿಳಿಸಿತು.
ಹೈಕೋರ್ಟ್ ಆದೇಶ ವಿಕ್ಷಿಪ್ತ ದೋಷಗಳಿಂದ ಕೂಡಿದೆ ಎಂದ ನ್ಯಾಯಾಲಯ "ಹೈಕೋರ್ಟ್ ಆದೇಶ ಅಧಿಕಾರದ ಯಾಂತ್ರಿಕ ಪ್ರಯೋಗವನ್ನು ಬಿಂಬಿಸುತ್ತದೆ... ಜಾಮೀನು ಮಂಜೂರು ಮಾಡಿದರೆ ಅದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಉಂಟಾಗಬಹುದು" ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ.
"ನ್ಯಾಯಮೂರ್ತಿ ಮಹಾದೇವನ್ ಅವರು ಬಹಳ ಪ್ರೌಢಿಮೆಯ ತೀರ್ಪನ್ನು ನೀಡಿದ್ದಾರೆ. ಇದು ಅಮೋಘವಾದಂತಹ ತೀರ್ಪಾಗಿದೆ. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಹಂತದಲ್ಲಿ ಯಾವುದೇ ಬೆಲೆ ತೆತ್ತಾದರೂ ಕಾನೂನಾತ್ಮ ಆಡಳಿತವನ್ನು ಎತ್ತಿಹಿಡಿಯಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮಿಗಿಲಲ್ಲ ಅಥವಾ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಾತ್ಮಕ ಆಡಳಿತವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ" ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಅವರು ಆದೇಶದ ಕುರಿತಾಗಿ ಹೇಳಿದರು.
ಜೈಲಿನಲ್ಲಿ ಆರೋಪಿಗಳನ್ನು ವಿಶೇಷವಾಗಿ ನಡೆಸಿಕೊಳ್ಳುವುದರ ವಿರುದ್ಧವೂ ನ್ಯಾಯಾಲಯ ಎಚ್ಚರಿಕೆ ನೀಡಿತು.
"ಆರೋಪಿಗಳಿಗೆ ಪಂಚತಾರಾ ಉಪಚಾರ ನೀಡಲಾಗುತ್ತಿದೆ ಎಂದು ನಮಗೆ ತಿಳಿದರೆ, ಮೊದಲ ಹೆಜ್ಜೆಯಾಗಿ ಸೂಪರಿಂಟೆಂಡೆಂಟ್ ಆದಿಯಾಗಿ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು" ಎಂದು ಪೀಠ ಕಟುಶಬ್ದಗಳಲ್ಲಿ ನುಡಿಯಿತು.
ಚಿತ್ರದುರ್ಗ ಮೂಲದ 33 ವರ್ಷದ ರೇಣುಕಸ್ವಾಮಿ ಅವರ ಮೃತದೇಹ ̄2024ರ ಜೂನ್ 9 ರಂದು ಪತ್ತೆಯಾಗಿತ್ತು. ದರ್ಶನ್ ಸೂಚನೆ ಮೇರೆಗೆ ನಡೆದ ಹಲ್ಲೆಯಲ್ಲಿ ಉಂಟಾದ ಗಾಯಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು.
ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ ಹಿನ್ನೆಲೆಯಲ್ಲಿ ದರ್ಶನ್ ಸೂಚನೆ ಮೇರೆಗೆ ಆತನನ್ನು ದರ್ಶನ್ ಸಹಚರರು ಅಪಹರಿಸಿ ಬೆಂಗಳೂರಿನ ಶೆಡ್ ಒಂದರಲ್ಲಿ ಹಲ್ಲೆ ನಡೆಸಿ ಹತ್ಯೆಗೈಯಲಾಗಿತ್ತು. ಖುದ್ದು ದರ್ಶನ್ ಸಹ ಹಲ್ಲೆ ನಡೆಸಿದ್ದರು ಎಂದು ಅರೋಪಿಸಲಾಗಿತ್ತು.
ಕಳೆದ ವರ್ಷ ಜೂನ್ 11 ರಂದು ದರ್ಶನ್ ಅವರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 30ರಂದು, ವೈದ್ಯಕೀಯ ಆಧಾರದ ಮೇಲೆ ಹೈಕೋರ್ಟ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ತರುವಾಯ, ಡಿಸೆಂಬರ್ 13, 2024 ರಂದು ದರ್ಶನ್, ಪವಿತ್ರಾ ಮತ್ತು ಇತರ ಐದು ಆರೋಪಿಗಳಿಗೆ ನಿಯಮಿತ ಜಾಮೀನು ದೊರೆತಿತ್ತು.
ದರ್ಶನ್ ಮತ್ತು ಇತರರಿಗೆ ಜಾಮೀನು ಮಂಜೂರು ಮಾಡುವ ವೇಳೆ ಆರೋಪಿಗಳ ಬಂಧನಕ್ಕೆ ಆಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಕಾರಣ ನೀಡಿತ್ತು.
ಬಂಧನಕ್ಕೆ ಆಧಾರವಾದ ಅಂಶಗಳು ಬಂಧನದ ಕಾರಣಗಳಿಗಿಂತ ಭಿನ್ನವಾಗಿವೆ ಮತ್ತು ಪೊಲೀಸರು ಎಲ್ಲಾ ಬಂಧಿತ ವ್ಯಕ್ತಿಗಳಿಗೆ ತಮ್ಮ ಪ್ರಕರಣಗಳಿಗೆ ನಿರ್ದಿಷ್ಟವಾದ ಬಂಧನದ ಆಧಾರಗಳನ್ನು ಒದಗಿಸುವುದು ಅವಶ್ಯಕವಾಗಿದೆ ಎಂದು ಪತ್ರಕರ್ತ ಮತ್ತು ಸಂಪಾದಕ ಪ್ರಬೀರ್ ಪುರಕಾಯಸ್ಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವರು ಉಲ್ಲೇಖಿಸಿದ್ದರು.
ಈ ಪ್ರಕರಣದಲ್ಲಿ, ಪ್ರಾಸಿಕ್ಯೂಷನ್ ಆರೋಪಿಗಳಿಗೆ ಬಂಧನದ ಕಾರಣಗಳನ್ನು ತಡವಾಗಿ ಒದಗಿಸಿದೆ ಎಂದು ಹೈಕೋರ್ಟ್ ತಿಳಿಸಿತ್ತು. ಇದಲ್ಲದೆ, ಪ್ರತಿಯೊಬ್ಬ ಆರೋಪಿಗೆ ನಿರ್ದಿಷ್ಟವಾದ ವಿವರಗಳನ್ನು ಒಳಗೊಂಡಿರುವ ಬದಲು ಎಲ್ಲರಿಗೂ ಬಂಧನದ ಕಾರಣಗಳನ್ನು ಒಂದೇ ನೀಡಲಾಗಿದೆ ಎಂದು ಅದು ಹೇಳಿತ್ತು.
ರಾಜ್ಯ ಸರ್ಕಾರ ಜಾಮೀನು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಜನವರಿ 6 ರಂದು ಅರ್ಜಿ ಸಲ್ಲಿಸಿತ್ತು. ಅರ್ಜಿಯು ಕೃಷ್ಣ ಮತ್ತು ನಿಶಾನಿ ಲಾ ಚೇಂಬರ್ಸ್ ಮೂಲಕ ಸಲ್ಲಿಕೆಯಾಗಿತ್ತು.
ರಾಜ್ಯ ಸರ್ಕಾರದ ಪರ ಲಿಖಿತ ವಾದ ಸಲ್ಲಿಸಿದ್ದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರ ಅವರು ರೇಣುಕಾ ಸ್ವಾಮಿಗೆ ಆದ ಗಾಯಗಳು ಕೊಲೆಯ ಉದ್ದೇಶವನ್ನು ಸ್ಪಷ್ಟವಾಗಿ ಹೇಳುತ್ತವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸ್ಥಿರವಾಗಿದ್ದು ವಿಧಿವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಪುರಾವೆಗಳಿಂದ ದೃಢೀಕರಿಸಲ್ಪಟ್ಟಿವೆ. ಹೇಳಿಕೆಗಳಲ್ಲಿನ ವಿಳಂಬವನ್ನು ಪುರಾವೆಗಳೊಂದಿಗೆ ಸಮರ್ಥಿಸಲಾಗಿದೆ. ಸಾಕಷ್ಟು ವಿಧಿವಿಜ್ಞಾನ, ಸಿಡಿಆರ್ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳು ಆರೋಪಿಗಳಿಗೆ ಕೊಲೆಯೊಂದಿಗೆ ನಂಟು ಇರುವುದನ್ನು ಹೇಳುತ್ತವೆ. ಜಾಮೀನು ಹಂತದಲ್ಲಿ ಹೈಕೋರ್ಟ್ ತಪ್ಪಾಗಿ "ಮಿನಿ-ವಿಚಾರಣೆ" ನಡೆಸಿದೆ ಎಂದು ವಾದಿಸಿದ್ದರು.