ಸುಪ್ರೀಂ ಕೋರ್ಟ್ ಪ್ರಕರಣಗಳನ್ನು ಮುಂದೂಡುವ ನ್ಯಾಯಾಲಯವಾಗಬಾರದು, ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ: ಸಿಜೆಐ ಎಚ್ಚರಿಕೆ

ಸೆಪ್ಟೆಂಬರ್‌ನಿಂದ ಅಕ್ಟೋಬರ್‌ನವರೆಗೆ ಒಟ್ಟು 3,688 ಪ್ರಕರಣಗಳನ್ನು ಮುಂದೂಡುವಂತೆ ಕೋರಲಾಗಿದೆ ಎಂದು ಸಿಜೆಐ ತಿಳಿಸಿದರು.
Supreme Court, Justice DY Chandrachud
Supreme Court, Justice DY Chandrachud

ಪದೇಪದೇ ಪ್ರಕರಣಗಳನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರು ಮಂಡಿಸುತ್ತಿರುವ ಕೋರಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಸರ್ವೋಚ್ಚ ನ್ಯಾಯಾಲಯವನ್ನು 'ತಾರೀಖ್ ಪೆ ತಾರೀಖ್' (ಮುಂದೂಡಿಕೆ) ನ್ಯಾಯಾಲಯದ ಮಟ್ಟಕ್ಕೆ ಇಳಿಸಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ವಿವರಿಸುತ್ತಾ, ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಒಟ್ಟು 3,688 ಪ್ರಕರಣಗಳನ್ನು ಮುಂದೂಡುವಂತೆ ಕೋರಲಾಗಿದೆ ಎಂದು ಸಿಜೆಐ ಅಸಮಾಧಾನ ಸೂಚಿಸಿದರು.

“ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಕೋರಲಾಗುತ್ತದೆ ಅದೇ ವೇಳೆ ಮುಂದೂಡುವಂತೆಯೂ ಮನವಿ ಮಾಡಲಾಗುತ್ತದೆ. ಇದು ಮುಂದೂಡಿಕೆ ನ್ಯಾಯಾಲಯವಾಗುವಂತಿಲ್ಲ. ಇದರಿಂದ ಪ್ರಜೆಗಳ ವಿಶ್ವಾಸಕ್ಕೆ ಸೋಲಾಗುತ್ತದೆ. ಹೀಗಾಗಿ ಇದು ನಮ್ಮ ನೈತಿಕ ಹೊಣೆಯಾಗಿದೆ. ಹೀಗೆ ಮುಂದೂಡುವುದು ದೇಶಕ್ಕೆ ನ್ಯಾಯಾಲಯದ ಕುರಿತಾಗಿ ಉತ್ತಮ ಚಿತ್ರಣ ಕಟ್ಟಿಕೊಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

 ಪ್ರಕರಣವನ್ನು ನೊಂದಾಯಿಸುವ ಮತ್ತು ವಿಚಾರಣೆಗೆ ಪಟ್ಟಿ ಮಾಡುವಿನ ನಡುವೆ ಸಮಯದ ಅಂತರ ಕಡಿಮೆ ಆಗಿದೆ ಎನ್ನುವುದನ್ನು ಸಿಜೆಐ ಒಪ್ಪಿದರು. ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲರ ಸಂಘ (SCBA) ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘದ (SCAORA)  ಪ್ರಯತ್ನಗಳಿಗೆ ಮೆಚ್ಚುಗೆ ಸೂಚಿಸಿದರು. ಆದರೆ ವಕೀಲರು ಮುಂದೂಡಿಕೆ ಕೋರಿ ಮಾಡುತ್ತಿರುವ ಮನವಿಯಲ್ಲಿ ಹೆಚ್ಚಳವಾಗುತ್ತಿರುವ ಕುರಿತು ಅವರು ಗಮನ ಸೆಳೆದರು.

"ನವೆಂಬರ್ 3ರವರೆಗೆ,  178 ಪ್ರಕರಣಗಳ ಮುಂದೂಡಿಕೆ ಕೋರಲಾಗಿದೆ. ಅಕ್ಟೋಬರ್‌ನಲ್ಲಿ ಮಿಸಲೇನಿಯಸ್‌ ಪ್ರಕರಣಗಳನ್ನು ಅಲಿಸುತ್ತಿದ್ದ ಪ್ರತಿ ದಿನವೂ 150 ಮುಂದೂಡಿಕೆ ಕೋರಿಕೆಗಳಿದ್ದವು. ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ 3,688 ಮುಂದೂಡಿಕೆ ಮನವಿ ಸಲ್ಲಿಸಲಾಗಿದೆ. ಇದು ಪ್ರಕರಣವನ್ನು ತ್ವರಿತಗೊಳಿಸುವ ಉದ್ದೇಶಕ್ಕೆ ಕಂಟಕ" ಎಂದು ಅವರು ಹೇಳಿದರು.

"ಸೆಪ್ಟೆಂಬರ್‌ನಿಂದ ನವೆಂಬರ್ 1 ರವರೆಗೆ, ಪ್ರತಿದಿನ ಐವತ್ತೆಂಟು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರಸ್ತಾಪಿಸಿದರೂ ಮತ್ತೊಂದೆಡೆ ಮುಂದೂಡುವಂತೆ ಕೋರಲಾಗುತ್ತದೆ” ಎಂದು ಅವರು ಬೇಸರಿಸಿದರು.

Kannada Bar & Bench
kannada.barandbench.com