ಹಿರಿಯ ನ್ಯಾಯಾಂಗ ಅಧಿಕಾರಿಯೊಬ್ಬರ ಪತ್ನಿಯ ಸಾವಿನ ಕುರಿತಂತೆ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ [ಮಂದಾಕಿನಿ ದಿವಾನ್ ಇನ್ನಿತರರು ಮತ್ತು ಛತ್ತೀಸ್‌ಗಢ ಹೈಕೋರ್ಟ್ ಮತ್ತಿತರರ ನಡುವಣ ಪ್ರಕರಣ].
ಸಹಾಯಕ ಜಿಲ್ಲಾ ಪ್ರಾಸಿಕ್ಯೂಷನ್ ಅಧಿಕಾರಿಯಾಗಿದ್ದ ರಂಜನಾ ದಿವಾನ್ ಅವರ ತಾಯಿ ಮಂದಾಕಿನಿ ದಿವಾನ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಮದುವೆಯಾದ ಎರಡು ವರ್ಷಕ್ಕೆ ಅಂದರೆ 2016ರಲ್ಲಿ ರಂಜನಾ ಮೃತಪಟ್ಟಿದ್ದರು. ಬಳಿಕ ಆಕೆಯ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ಪತಿ ನ್ಯಾಯಾಂಗ ಅಧಿಕಾರಿಯಾಗಿರುವುದರಿಂದ, ಮೃತ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಕೋರಿದ್ದರು. ವಾದ ಆಲಿಸಿದ ಸುಪ್ರೀಂ ಕೋರ್ಟ್ ಮನವಿ ಪುರಸ್ಕರಿಸಿ ಸಿಬಿಐ ತನಿಖೆಗೆ ಆದೇಶಿಸಿದೆ.
ಛತ್ತೀಸ್‌ಗಢ ಪೊಲೀಸ್ ವ್ಯವಸ್ಥೆ ಪಕ್ಷಪಾತದಿಂದ ವರ್ತಿಸಿದ್ದು ಅನಗತ್ಯ ಪ್ರಭಾವಕ್ಕೊಳಗಾಗಿದೆ ಎಂದು ಸಂತ್ರಸ್ತೆ ಪರ ಅರ್ಜಿದಾರರು ದೂರಿದ್ದಾರೆ. ಹೀಗಾಗಿ ಸತ್ಯ ಅರಿಯಲು ಸಂಪೂರ್ಣ, ನ್ಯಾಯಯುತ ಮತ್ತು ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಇಡೀ ಘಟನೆ ಮತ್ತು ಮರಣದ ಸಂದರ್ಭದಲ್ಲಿ ಮೃತರಿಗೆ ಉಂಟಾದ ಗಾಯಗಳಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಆದೇಶದ ವೇಳೆ ತಿಳಿಸಿದೆ.
2016ರಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ನ್ಯಾಯಾಲಯ ಸೂಚಿಸಿದೆ. ತನಿಖೆಗೆ ಛತ್ತೀಸ್‌ಗಢ ಸರ್ಕಾರ ಸಹಕರಿಸಬೇಕು ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು, ತನಿಖೆಗೆ ಅಗತ್ಯವಾದ ನೆರವನ್ನು ನೀಡಬೇಕೆಂದು ಅದು ಹೇಳಿದೆ.
ರಂಜನಾ ಅವರದ್ದು ಆತ್ಮಹತ್ಯೆ ಎಂದು ತಿಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿ ಛತ್ತೀಸ್‌ಗಢ ಪೊಲೀಸರು ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬ ಛತ್ತೀಸ್‌ಗಢ ಹೈಕೋರ್ಟ್ ಮೊರೆ ಹೋಗಿತ್ತು.
ಅರ್ಜಿ ಇತ್ಯರ್ಥಪಡಿಸಿದ್ದ ಹೈಕೋರ್ಟ್ ಮೇಲ್ಮನವಿದಾರರು ಸಿಆರ್‌ಪಿಸಿ ಸೆಕ್ಷನ್ 156(3) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ದೂರು ಸಲ್ಲಿಸುವಂತೆ ಸೂಚಿಸಿತ್ತು. ಆದೇಶವನ್ನು ಕಡೆಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ರಂಜನಾ ಅವರ ಪತಿ ಅಧಿಕಾರದಲ್ಲಿರುವ ನ್ಯಾಯಾಧೀಶರಾಗಿರುವುದರಿಂದ ನ್ಯಾಯಯುತ ತನಿಖೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಮೃತಳ ಮೇಲೆ ಆರು ಗಾಯಗಳಾಗಿದ್ದನ್ನು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ ಎಂದು ರಂಜನಾ ತಾಯಿ ಕಳವಳ ವ್ಯಕ್ತಪಡಿಸಿದ್ದರು.
ಆದರೆ ಉನ್ನಮಟ್ಟದಲ್ಲಿ ನ್ಯಾಯಯುತವಾಗಿ ತನಿಖೆ ನಡೆದಿದ್ದು ಮೇಲ್ಮನವಿದಾರರು ಅನಗತ್ಯವಾಗಿ ಲೋಪ ಹುಡುಕುತ್ತಿದ್ದಾರೆ ಎಂದು ಛತ್ತೀಸ್‌ಗಢ ಸರ್ಕಾರ ಪ್ರತಿಪಾದಿಸಿತ್ತು.
ಸಿಬಿಐ ಪರವಾಗಿ ವಾದ ಮಂಡಿಸಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ನ್ಯಾಯಾಲಯ ಉನ್ನತ ಮಟ್ಟದ ವಿಶೇಷ ತನಿಖಾ ತಂಡವ ನೇಮಿಸಬಹುದು ಅಥವಾ ಪರ್ಯಾಯವಾಗಿ, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಿ, ನೊಂದ ವ್ಯಕ್ತಿಗಳು ಮತ್ತು ಸಮಾಜಕ್ಕೆ ವಿಶ್ವಾಸಾರ್ಹತೆ ತುಂಬುವಂತೆ ಸಲಹೆ ನೀಡಿದ್ದರು.
ಪ್ರಕರಣದ ಸಂಪೂರ್ಣ ಸನ್ನಿವೇಶ ಪರಿಗಣಿಸಿ, ಮೃತ ಮಹಿಳೆಯ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ನ್ಯಾಯಾಲಯ ಸೂಚಿಸಿತು.