ತಬ್ಲೀಘಿ ಜಮಾತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಪಾತ ಮತ್ತು ಕೋಮು ದ್ವೇಷ ಉಂಟುಮಾಡುವ ವರದಿಗಾರಿಕೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮಾಧ್ಯಮಗಳ ವಿರುದ್ಧದ ದೂರುಗಳನ್ನು ಪರಿಹರಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆ ರೂಪಿಸುವಂತೆ ಮಂಗಳವಾರ ಸೂಚಿಸಿದೆ.
ಕೇಬಲ್ ಟಿವಿ ನೆಟ್‌ವರ್ಕ್ಸ್ ನಿಯಂತ್ರಣ ಕಾಯಿದೆ ಅನ್ವಯಿಸುವುದು ಮತ್ತು ಅಂಥ ಅಹವಾಲುಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಅಳವಡಿಸಿಕೊಡಿರುವ ವಿಧಾನ ಮತ್ತು ಮಾಧ್ಯಮಗಳ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಮೌನವಹಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
ತಬ್ಲೀಘಿ ಜಮಾತ್ ಪ್ರಕರಣದ ಕುರಿತು ಕೋಮು ದ್ವೇಷದ ವರದಿಗಾರಿಕೆ ಮಾಡಲಾಗಿದೆ ಎಂದು ಸಲ್ಲಿಸಿರುವ ಮನವಿಯು ಅಸ್ಪಷ್ಟ ಪ್ರತಿಪಾದನೆಗಳು ಮತ್ತು ಕೆಲವು ಫ್ಯಾಕ್ಟ್ ಚೆಕ್ ವೆಬ್‌ಸೈಟ್‌ಗಳು ಪ್ರಕಟಿಸಿರುವ ವರದಿಯನ್ನು ಆಧರಿಸಿದೆ. ಇದರ ಮೇಲೆ ಹೆಚ್ಚು ಅವಲಂಬಿತವಾಗಬಾರದು ಎಂದಿದ್ದು, ಇಡೀ ಮಾಧ್ಯಮ ಕೋಮು ದ್ವೇಷ ಹರಡಲಾಗುತ್ತಿದೆ ಎಂಬುದಕ್ಕೆ ತಗಾದೆ ಎತ್ತಿ ಸುಪ್ರೀಂ ಕೋರ್ಟ್‌ಗೆ ನವೆಂಬರ್ 13ರಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯು ಅಫಿಡವಿಟ್ ಸಲ್ಲಿಸಿದೆ.
ಮಾಧ್ಯಮಗಳ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯಾದ ಸುದ್ದಿ ಪ್ರಸಾರ ಪ್ರಮಾಣ ಪ್ರಾಧಿಕಾರ (ಎನ್‌ಬಿಎಸ್‌ಎ) ಏಕೆ ಗಮನಹರಿಸಬೇಕು ಎಂದು ಪೀಠ ಪ್ರಶ್ನಿಸಿದೆ.
ಇದೇ ವೇಳೆ, ಎನ್‌ಎಸ್‌ಬಿಎ ಸ್ವನಿಯಂತ್ರಣಾ ಸಂಸ್ಥೆ ಎನ್ನುವ ತಮ್ಮ ವಾದಕ್ಕೆ ಸಾಲಿಸಿಟರ್ ಜನರಲ್ ಅಂಟಿಕೊಂಡರು.
ಸರ್ವೋಚ್ಚ ನ್ಯಾಯಾಲಯ ಎತ್ತಿರುವ ಎಲ್ಲಾ ವಿಚಾರಗಳನ್ನು ಒಳಗೊಂಡು ಪ್ರತಿಕ್ರಿಯೆ ದಾಖಲಿಸುವಂತೆ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ಬಾಲಸುಬ್ರಮಣಿಯನ್ ಅವರಿದ್ದ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದು, ಪ್ರಕರಣವನ್ನು ಮೂರು ವಾರಗಳಿಗೆ ಮುಂದೂಡಿದೆ.
ಜಮೈತ್ ಉಲಾಮಾ-ಇ-ಹಿಂದ್ ಮತ್ತು ಅದರ ಕಾನೂನು ಕೋಶದ ಕಾರ್ಯದರ್ಶಿಯು ವಕೀಲ ಏಜಾಜ್ ಮಕ್ಬೂಲ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದು, ತಬ್ಲೀಘಿ ಜಮಾತ್‌ನಂಥ ದುರದೃಷ್ಟಕರ ಪ್ರಕರಣದ ಮೂಲಕ ಇಡೀ ಮುಸ್ಲಿಂ ಸಮುದಾಯವನ್ನು ದೂರುವ ಪ್ರಯತ್ನ ಮಾಡಲಾಗಿದೆ ಎಂದು ತಗಾದೆ ಎತ್ತಲಾಗಿದೆ.
ಸುಳ್ಳು ಸುದ್ದಿ ತಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮತ್ತು ತಬ್ಲೀಘಿ ಜಮಾತ್ ಪ್ರಕರಣವನ್ನು ಬಳಿಸಿಕೊಂಡು ಕೋಮು ದ್ವೇಷ ಮತ್ತು ಮತಾಂಧತೆ ಬಿತ್ತುತ್ತಿರುವ ನಿರ್ದಿಷ್ಟ ಮಾಧ್ಯಮ ವಲಯದ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮನವಿಯಲ್ಲಿ ಕೋರಲಾಗಿದೆ.
ಕೆಳಹಂತದ ಅಧಿಕಾರಿ ಅಫಿಡವಿಟ್ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ತಕರಾರು ಎತ್ತಿದ್ದ ನ್ಯಾಯಾಲಯವು ಸರ್ಕಾರ ಸಲ್ಲಿಸಿರುವ ಅಫಿಡವಿಟ್ ತೃಪ್ತಿಕರವಾಗಿಲ್ಲ ಎಂದು ಈ ಹಿಂದೆ ಹೇಳಿತ್ತು. ಇದರ ಜೊತೆಗೆ ಟಿವಿ ಚಾನೆಲ್ ನಿಷೇಧ ಮಾಡುವ ಅಧಿಕಾರವಿದೆಯೇ ಎಂಬುದೂ ಸೇರಿದಂತೆ ಹೊಸ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತ್ತು.