ದೆಹಲಿ ಹಾಗೂ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯ ತಡೆಯಲು ಕೇಂದ್ರ ಸರ್ಕಾರ ಯಾವುದೇ ದಂಡ ವಿಧಿಸುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].
ಗೋಧಿ ಮತ್ತು ಭತ್ತದಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಹೊಲಗಳಲ್ಲಿ ಉಳಿಯುವ ಒಣಹುಲ್ಲಿನ ಕಡ್ಡಿಗಳನ್ನು (ಕೂಳೆ) ದಹಿಸುವುದು ಕೃಷಿ ತ್ಯಾಜ್ಯವನ್ನು ಸುಲಭವಾಗಿ ಮತ್ತು ಅಗ್ಗವಾಗಿ ವಿಲೇವಾರಿ ಮಾಡುವ ವಿಧಾನವಾದರೂ ಅದು ಗಾಳಿಯ ಗುಣಮಟ್ಟದ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ.
ನಾಗರಿಕರು ಶುದ್ಧ ಪರಿಸರದಲ್ಲಿ ವಾಸಿಸುವುದು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದರೂ ನಾಮಮಾತ್ರದ ದಂಡ ಮಾತ್ರ ಸಂಗ್ರಹಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ , ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಅಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿದೆ.
ದಂಡದ ನಿಯಮಾವಳಿಗಳನ್ನು ಸ್ಪಷ್ಟವಾಗಿ ಅನುಸರಿಸಿಲ್ಲ ಎಂದು ತೋರುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಬೇಕಿತ್ತಾದರೂ ಕೇಂದ್ರ ಸರ್ಕಾರ ಕೇವಲ ನೋಟಿಸ್ ನೀಡಿದೆ ಎಂದು ಅದು ಖಂಡಿಸಿದೆ.
ಕೇಂದ್ರ ಸರ್ಕಾರದ ನಿಷ್ಕ್ರಿಯಿತೆಯಿಂದಾಗಿ ಪರಿಸರ ಸಂರಕ್ಷಣಾ ಕಾಯಿದೆ, 1986 ರ ಸೆಕ್ಷನ್ 15 ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಕೂಡ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸಿಎಕ್ಯೂಎಂ ಮತ್ತು ಕೇಂದ್ರ ಸರ್ಕಾರದ ಪರವಾಗಿವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ , ಸೆಕ್ಷನ್ 15ನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರಲು 10 ದಿನಗಳಲ್ಲಿ ನಿಯಮಾವಳಿ ಅನ್ವಯಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಹಿಂದಿನ ವಿಚಾರಣೆ ವೇಳೆ ನಿಷ್ಕ್ರಿಯತೆಯ ಕಾರಣಕ್ಕಾಗಿ ಪೀಠ ಸಿಎಕ್ಯೂಎಂ ಅನ್ನು ತರಾಟೆಗೆ ತೆಗೆದುಕೊಂಡಿತ್ತು. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ವಿರುದ್ಧವೂ ಕಿಡಿಕಾರಿದ್ದ ಅದು ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಿತ್ತು. ನ್ಯಾಯಾಲಯದ ಸೂಚನೆಯಂತೆ ಇಂದು ಮುಖ್ಯ ಕಾರ್ಯದರ್ಶಿಗಳು ಹಾಜರಿದ್ದರಾದರೂ ಅವರ ವಾದದಿಂದ ನ್ಯಾಯಾಲಯ ತೃಪ್ತವಾಗಲಿಲ್ಲ. ಬದಲಿಗೆ ರಾಜ್ಯಗಳ ಕಾರ್ಯ ವೈಖರಿ ಬಗ್ಗೆ ಸಿಡಿಮಿಡಿಗೊಂಡಿತು. ದೀಪಾವಳಿ ರಜೆ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.