ಉದ್ಯೋಗಿಗಳಲ್ಲಿ ಮಹಿಳೆಯರು ಸಮಾನವಾಗಿ ಭಾಗಿಯಾಗುವಂತೆ ನೋಡಿಕೊಳ್ಳುವುದು ಸಾಂವಿಧಾನಿಕ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು ಅಂಗವೈಕಲ್ಯತೆಯುಳ್ಳ ಮಕ್ಕಳ ತಾಯಂದಿರಿಗೆ ಶಿಶುಪಾಲನಾ ರಜೆ ನೀಡುವುದರ ಮಹತ್ವವನ್ನು ಒತ್ತಿಹೇಳಿದೆ.
ವಿಕಲಚೇತನ ಮಕ್ಕಳ ತಾಯಂದಿರಿಗೆ ಶಿಶುಪಾಲನಾ ರಜೆ ನಿರಾಕರಿಸುವುದು ಉದ್ಯೋಗಿಗಳಲ್ಲಿ ಮಹಿಳೆಯರಿಗೆ ಸಮಾನ ರಕ್ಷಣೆ ಒದಗಿಸುವ ಸಾಂವಿಧಾನಿಕ ಕರ್ತವ್ಯ ಉಲ್ಲಂಘಿಸುತ್ತದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.
ಮಕ್ಕಳ ಆರೈಕೆ ರಜೆ ಪ್ರಮುಖ ಸಾಂವಿಧಾನಿಕ ಉದ್ದೇಶವನ್ನು ಸಾಕಾರಗೊಳಿಸಲಿದ್ದು ಈ ವಿಚಾರದಲ್ಲಿ ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶ ನಿರಾಕರಿಸುವಂತಿಲ್ಲ. ಹಾಗೆ ಮಾಡಿದರೆ ತಾಯಿ ಉದ್ಯೋಗ ತೊರೆಯುವಂತಾಗಬಹುದು. ಇಂತಹ ರಜೆ ವಿಶೇಷ ಅಗತ್ಯವುಳ್ಳ ಮಗುವನ್ನು ಹೊಂದಿರುವ ತಾಯಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಹುಟ್ಟಿನಿಂದಲೇ ಕೆಲವು ಆನುವಂಶಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದ ಮಗನ ಪಾಲನೆಗಾಗಿ ಮಂಜೂರಾದ ಎಲ್ಲಾ ರಜೆಗಳನ್ನು ಖಾಲಿ ಮಾಡಿಕೊಂಡಿದ್ದ ಹಿಮಾಚಲ ಪ್ರದೇಶದ ನಲಗಢ್‌ನಲ್ಲಿರುವ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಪ್ರಾಧ್ಯಾಪಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಅರ್ಜಿಯು ಗಂಭೀರ ಕಳವಳಕಾರಿ ವಿಷಯವನ್ನು ಪ್ರಸ್ತಾಪಿಸಿದೆ... ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಸವಲತ್ತಿನ ವಿಚಾರವಾಗಿರದೆ ಸಾಂವಿಧಾನಿಕ ಅವಶ್ಯಕತೆಯಾಗಿದ್ದು ಮಾದರಿ ಉದ್ಯೋಗದಾತನಾಗಿ ಸರ್ಕಾರ ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಅಲ್ಲದೆ ಅದು ಅಂಗವಿಕಲರ ಹಕ್ಕುಗಳ ಕಾಯಿದೆ- 2016ರ ಸೆಕ್ಷನ್‌ಗಳಿಗೆ ಅನುಗುಣವಾಗಿ ಹಿಮಾಚಲ ಪ್ರದೇಶ ಸರ್ಕಾರ ತನ್ನ ಸಿಸಿಎಲ್ (ಶಿಶುಪಾಲನಾ ರಜೆ) ನೀತಿಯನ್ನು ಪರಿಷ್ಕರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಈ ಸಂಬಂಧ ಸೂಕ್ತ ಸುಧಾರಣೆ ತರಲು ಹಿರಿಯ ಅಧಿಕಾರಿಗಳ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು. ಈ ಸಮಿತಿಯು ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಯೊಂದಿಗೆ ಸಮಾಲೋಚಿಸಿ ಜುಲೈ 31, 2024 ರೊಳಗೆ ವರದಿ ಸಿದ್ಧಪಡಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನೂ ಕೇಳಿದೆ. ಅಲ್ಲದೆ ಪ್ರಕರಣದಲ್ಲಿ ಎಎಸ್‌ಜಿ ಐಶ್ವರ್ಯಾ ಭಾಟಿ ಅವರು ನ್ಯಾಯಾಲಯಕ್ಕೆ ಸಹಾಯ ಮಾಡಬೇಕು ಎಂದು ಪೀಠ ಕೇಳಿದೆ.