ನಿವೃತ್ತ ಸಿಜೆಐ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪಡೆಯುವುದು ಅಸಂಭವ ಎಂಬ ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.
ನಿವೃತ್ತ ಸಿಜೆಐ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ವಿರುದ್ಧ ಪಿತೂರಿ ನಡೆದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್‌ ಗುರುವಾರ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್‌ ಸಾಕ್ಷ್ಯಗಳನ್ನು ಪಡೆಯುವುದು ಅಸಂಭವ ಎಂಬ ನೆಲೆಯಲ್ಲಿ ʼನ್ಯಾಯಾಂಗ ಸ್ವಾತಂತ್ರ್ಯದ ಕುರಿತಾದ ಮಹಾನ್‌ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿದ ಪ್ರಕರಣʼ ಎಂದು ಹೆಸರಿಸಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ವಿಚಾರಣೆಯಿಂದ ಕೈಬಿಟ್ಟಿತು.

“ಎರಡು ವರ್ಷಗಳು ಕಳೆದಿದ್ದು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಮರುಪಡೆಯುವ ಸಾಧ್ಯತೆ ಈಗ ಅಸಂಭವವಾಗಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂವರು ಸದಸ್ಯರ ಸಮಿತಿ ಈಗಾಗಲೇ ವರದಿ ಸಲ್ಲಿಸಿದೆ. ಸ್ವಯಂಪ್ರೇರಿತವಾಗಿ ದಾಖಲಿಸಿಕೊಳ್ಳಲಾಗಿದ್ದ ಪ್ರಕರಣವನ್ನು ಮುಚ್ಚಲಾಗಿದ್ದು ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. ಪ್ರಕರಣವನ್ನು ಮುಂದವರೆಸುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಗೊಗೊಯ್‌ ಅವರ ವಿರುದ್ಧ ಪಿತೂರಿ ನಡೆದಿರುವ ಸಾಧ್ಯತೆಯನ್ನು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಎ ಕೆ ಪಟ್ನಾಯಕ್‌ ಅವರಿದ್ದ ಏಕಸದಸ್ಯ ನ್ಯಾಯಾಂಗ ಸಮಿತಿ ಸಲ್ಲಿಸಿದ ವರದಿ ಅಂತಹ ಸಾಧ್ಯತೆಗಳನ್ನು ಅಲ್ಲಗಳೆದಿಲ್ಲ ಎಂದು ಪೀಠ ತಿಳಿಸಿದೆ.

ಎನ್‌ಆರ್‌ಸಿ ಸಿದ್ಧತೆ ಕುರಿತಂತೆ ನ್ಯಾ. ಗೊಗೊಯ್‌ ಕೈಗೊಂಡ ನಿರ್ಧಾರಗಳಿಂದಾಗಿ ಅವರ ವಿರುದ್ಧ ಪಿತೂರಿ ನಡೆದಿರಬಹುದು ಎಂದು ಗುಪ್ತಚರ ದಳದ ನಿರ್ದೇಶಕರು ಪತ್ರ ಬರೆದಿರುವುದನ್ನು ಕೂಡ ನ್ಯಾಯಾಲಯ ಬಹಿರಂಗಪಡಿಸಿತು. "ಸಿಜೆಐ ವಿರುದ್ಧ ಕೆಲ ಬಗೆಯ ಪಿತೂರಿ ನಡೆದಿರಬಹುದು ಎಂದು ನಂಬಲು ಬಲವಾದ ಕಾರಣಗಳಿವೆ." ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

"ದಾಖಲೆಗಳು ಮತ್ತಿತರ ಪೂರಕ ಅಂಶಗಳ ಸೀಮಿತ ಲಭ್ಯತೆಯಿಂದಾಗಿ ವಕೀಲ ಉತ್ಸವ ಸಿಂಗ್ ಬೈನ್ಸ್ ಅವರು ಮಾಡಿದ ಆರೋಪಗಳ ಸತ್ಯಾಸತ್ಯತೆಯನ್ನು ಸಂಪೂರ್ಣ ಪರಿಶೀಲಿಸಲಾಗಲಿಲ್ಲ" ಎಂದು ನ್ಯಾಯಮೂರ್ತಿ ಪಟ್ನಾಯಕ್ ಅವರ ವರದಿಯನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ಸಮಿತಿಯು ವಾಟ್ಸಾಪ್ ಸಂದೇಶಗಳು ಮತ್ತು ಚುನಾವಣಾ ದಾಖಲೆಗಳಂತಹ ವಿವಿಧ ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಅದು ಹೇಳಿದೆ. ಅಲ್ಲದೆ ಆಂತರಿಕ ಸಮಿತಿ ಈಗಾಗಲೇ ನ್ಯಾಯಮೂರ್ತಿಗಳಿಗೆ ಕ್ಲೀನ್‌ ಚಿಟ್‌ ನೀಡಿತ್ತು.

ಸುಪ್ರೀಂಕೋರ್ಟ್‌ನ ಮಹಿಳಾ ಸಿಬ್ಬಂದಿಯೊಬ್ಬರು ನ್ಯಾ. ಗೊಗೊಯ್‌ ಅವರ ವಿರುದ್ಧ ಮಾಡಿದ ಆರೋಪಗಳನ್ನು ನಾಲ್ಕು ಸುದ್ದಿ ಮಾಧ್ಯಮಗಳು ಪ್ರಕಟಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. 2018ರ ಅಕ್ಟೋಬರ್‌ನಲ್ಲಿ ಕಿರಿಯ ನ್ಯಾಯಾಲಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾಗ ನ್ಯಾ. ಗೊಗೊಯ್‌ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಗೊಗೊಯ್‌ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಆಕೆ ತಿಳಿಸಿದ್ದರು. ಆರೋಪಗಳು ಬಹಿರಂಗಗೊಂಡ ದಿನವೇ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸೂಚಿಸಿತ್ತು.

ಪೀಠದಲ್ಲಿದ್ದ ನ್ಯಾ. ಗೊಗೊಯ್‌ ವರದಿಗಳನ್ನು ಬಲವಾಗಿ ಖಂಡಿಸಿ ತಮ್ಮ ವಿರುದ್ಧ ಆರೋಪಗಳನ್ನು ನಿರಾಕರಿಸಿದ್ದರು. ವಕೀಲ ಉತ್ಸವ್‌ ಬೈನ್ಸ್‌ ಅವರು ಪ್ರಕರಣದ ಹಿಂದೆ ಪಿತೂರಿ ಇರುವುದನ್ನು ತಿಳಿಸಿದ ಬಳಿಕ ಅರುಣ್ ಮಿಶ್ರಾ ನೇತೃತ್ವದ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಈ ಮಧ್ಯೆ ನ್ಯಾಯಾಲಯದಿಂದ ನೇಮಕವಾದ ಸಮಿತಿಯೊಂದು ಪ್ರಕರಣದಲ್ಲಿ ನ್ಯಾ. ಗೊಗೊಯ್‌ ಅವರ ಪಾತ್ರವಿಲ್ಲ ಎಂದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com