ಮೇಘಾಲಯ, ಒಡಿಶಾ, ಉತ್ತರಾಖಂಡಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ಶಿಫಾರಸು ಮಾಡಿದೆ.
ಸುಪ್ರೀಂ ಕೋರ್ಟ್ ಜಾಲತಾಣದ ಮಾಹಿತಿ ಪ್ರಕಾರ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್ ವೈದ್ಯನಾಥನ್ ಅವರನ್ನು ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ, ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಚಕ್ರಧಾರಿ ಶರಣ್ ಸಿಂಗ್ ಅವರನ್ನು ಒಡಿಶಾ ಹೈಕೋರ್ಟ್ ಸಿಜೆ ಸ್ಥಾನಕ್ಕೆ ಹಾಗೂ ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ರಿತು ಬಾಹ್ರಿ ಅವರನ್ನು ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪದೋನ್ನತಿ ನೀಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ.
ನ್ಯಾ. ರಿತು ಬಾಹ್ರಿ ಅವರ ನೇಮಕಾತಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದರೆ ಅವರು ದೇಶದ ಹೈಕೋರ್ಟ್‌ಗಳಲ್ಲಿಯೇ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ಎರಡನೆಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಗುಜರಾತ್ ಹೈಕೋರ್ಟ್‌ನ ಸಿಜೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುನಿತಾ ಅಗರ್‌ವಾಲ್ ಅವರು ಉಚ್ಚ ನ್ಯಾಯಾಲಯದ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಈ ವಿಚಾರವನ್ನು ಕೊಲಿಜಿಯಂ ಕೂಡ ಪ್ರಸ್ತಾಪಿಸಿದ್ದು ಅವರ ನೇಮಕಾತಿ ಮಹಿಳಾ ಪ್ರಾತಿನಿಧ್ಯಕ್ಕೆ ಇಂಬು ನೀಡಲಿದೆ ಎಂದಿದೆ. ನ್ಯಾ. ವಿಪಿನ್ ಸಾಂಘಿ ಅವರ ನಿವೃತ್ತಿ ಬಳಿಕ ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ತೆರವಾಗಿತ್ತು.
ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ಎಸ್ ವೈದ್ಯನಾಥನ್ ಅವರ ಸೇವೆಯನ್ನು ಪರಿಗಣಿಸಿ ಅವರ ಪದೋನ್ನತಿಗೆ ಕೊಲಿಜಿಯಂ ಶಿಫಾರಸು ಮಾಡಿದೆ. ಅವರು ತಮ್ಮ ಮಾತೃ ಹೈಕೋರ್ಟ್‌ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ ಎಂಬ ಅಂಶವನ್ನು ಕೊಲಿಜಿಯಂ ಉಲ್ಲೇಖಿಸಿದೆ.
ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರನ್ನೂ ಒಳಗೊಂಡಿದ್ದ ಕೊಲಿಜಿಯಂ “ದೇಶದ ಅತಿದೊಡ್ಡ ಹೈಕೋರ್ಟ್‌ಗಳಲ್ಲಿ ಒಂದಾದ ಮದ್ರಾಸ್ ಹೈಕೋರ್ಟ್‌ನಿಂದ ಬಂದವರಲ್ಲಿ ಪ್ರಸ್ತುತ ಒಬ್ಬರು ಮಾತ್ರ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದೆ.
ಪ್ರಸ್ತುತ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಂಬಂಧಿಸಿದಂತೆ ಪಾಟ್ನಾ ಹೈಕೋರ್ಟ್ ಪ್ರಾತಿನಿಧ್ಯದ ಕೊರತೆ ಇದೆ ಎಂಬುದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಅಲ್ಲಿನ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಕ್ರಧಾರಿ ಶರಣ್ ಸಿಂಗ್ ಅವರ ಹೆಸರನ್ನು ಒಡಿಶಾ ಹೈಕೋರ್ಟ್‌ಗೆ ಶಿಫಾರಸು ಮಾಡಿದೆ. ಅಕ್ಟೋಬರ್ 3ರಂದು ನ್ಯಾ. ಸುಭಾಷಿಸ್ ತಾಳಪತ್ರ ಅವರು ಅವರ ನಿವೃತ್ತರಾಗುವ ಮೂಲಕ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನ ಖಾಲಿ ಇತ್ತು.