
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಕೀಲರ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿಗಳ ವರ್ಗಾವಣೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದೆ.
ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನು ಒಡಿಶಾ, ನ್ಯಾ. ಕೆ ನಟರಾಜನ್ ಅವರನ್ನು ಕೇರಳ, ನ್ಯಾ. ಎನ್ ಎಸ್ ಸಂಜಯ್ ಗೌಡ ಅವರನ್ನು ಗುಜರಾತ್ ಮತ್ತು ನ್ಯಾ. ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಿಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ತೆಲಂಗಾಣದ ನ್ಯಾ. ಪೆರುಗು ಶ್ರೀ ಸುಧಾ ಮತ್ತು ಆಂಧ್ರ ಪ್ರದೇಶದ ಡಾ. ಕುಂಭಜದಲ ಮನ್ಮಧ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಹಾಗೂ ತೆಲಂಗಾಣದ ನ್ಯಾ. ಕಸುಜು ಸುರೇಂದರ್ ಅಲಿತಾಸ್ ಕೆ ಸುರೇಂದರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸ್ಸು ಮಾಡಲಾಗಿದೆ.
ಒಳಗೊಳ್ಳುವಿಕೆ ಮತ್ತು ವೈವಿಧ್ಯತೆ ಕಾಪಾಡಲು ಮತ್ತು ನ್ಯಾಯದಾನದ ಗುಣಮಟ್ಟವನ್ನು ಎತ್ತರಿಸುವ ನಿಟ್ಟಿನಲ್ಲಿ ಏಪ್ರಿಲ್ 15 ಮತ್ತು 19 ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ವರ್ಗಾವಣೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈಚೆಗೆ ಧಾರವಾಡ ಮತ್ತು ಬೆಂಗಳೂರು ವಕೀಲರ ಸಂಘಗಳು ನ್ಯಾಯಮೂರ್ತಿಗಳ ವರ್ಗಾವಣೆಗೆ ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದವು. ಬೆಂಗಳೂರು ವಕೀಲರ ಸಂಘವು ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರ ಚರ್ಚಿಸಲು ಸಮಯ ನೀಡುವಂತೆ ಸಿಜೆಐಗೆ ಕೋರಿತ್ತು.
ಇದೆಲ್ಲದರ ನಡುವೆ, ನ್ಯಾ. ದೀಕ್ಷಿತ್ ಅವರು ಹಿಮಾಲಯದಲ್ಲಿ ಹೈಕೋರ್ಟ್ ಪೀಠ ಆರಂಭಿಸಿ ಅಲ್ಲಿಗೆ ತೆರಳಿ ಕೆಲಸ ಮಾಡಲು ಹೇಳಿದರೂ ಹೋಗುತ್ತೇನೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.