ದಾಖಲಾತಿ ಶುಲ್ಕ ಪಾವತಿಸಲಾಗದ ದಲಿತ ಸಮುದಾಯಕ್ಕೆ ಸೇರಿದ್ದ ಯುವಕನಿಗೆ ಪ್ರವೇಶಾವಕಾಶ ನೀಡುವಂತೆ ಧನ್‌ಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ) ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ [ಅತುಲ್ ಕುಮಾರ್ ಮತ್ತು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ ನಡುವಣ ಪ್ರಕರಣ].
ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಪರಮಾಧಿಕಾರ ಬಳಿಸಿದ ಸಿಜೆಐ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ವಿದ್ಯಾರ್ಥಿಗೆ ಸೀಟು ನೀಡುವಂತೆ ಐಐಟಿಗೆ ಸೂಚಿಸಿತು.
"ಇಂತಹ ಯುವ ಪ್ರತಿಭಾವಂತ ಹುಡುಗ ಅವಕಾಶ ವಂಚಿತನಾಗಲು ಬಿಡೆವು. ದಲಿತ ಹುಡುಗನನ್ನು ಅಲೆದಾಡಿಸಿ ಕಂಬ ಸುತ್ತುವಂತೆ ಮಾಡಲಾಗಿದೆ. ಆತ ದಿನಗೂಲಿ ನೌಕರನೊಬ್ಬನ ಮಗ. ಸಂವಿಧಾನದ 142ನೇ ವಿಧಿಯಡಿ ನಾವು ಕಾನೂನನ್ನು ಪಕ್ಕಕ್ಕೆ ಇರಿಸಬಹುದಾದಂತಹ ಪ್ರಕರಣಗಳಿರುತ್ತವೆ" ಎಂದು ಸಿಜೆಐ ಹೇಳಿದರು.
ಯುವಕನ ತಂದೆಯ ದಿನಗೂಲಿಯು ಕೇವಲ ₹ 450 ಆಗಿದೆ. ಅವರಿಗೆ ₹ 17,500 ವ್ಯವಸ್ಥೆ ಮಾಡುವುದು ಕಷ್ಟಕರವಾಗುತ್ತದೆ ಮತ್ತು ಅಷ್ಟು ಹಣ ಹೊಂದಿಸಲು ಸಮಯ ಹಿಡಿಯುತ್ತದೆ ಎಂದು ಯುವಕನ ತಂದೆ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಆಗ ನ್ಯಾಯಾಲಯ ಸಮಾಜದಂಚಿನ ವರ್ಗಕ್ಕೆ ಸೇರಿರುವ ಅರ್ಜಿದಾರರಂತಹ ಪ್ರತಿಭಾವಂತ ಮತ್ತು ಪ್ರವೇಶಾತಿ ಪಡೆಯಲು ಸಕಲ ಯತ್ನ ಮಾಡಿದ ವಿದ್ಯಾರ್ಥಿಯನ್ನು ಬಿಟ್ಟುಕೊಡಲಾಗದು. ಇಂತಹ ತೀರ್ಪುಗಳನ್ನು ನೀಡಲೆಂದೇ 142ನೇ ವಿಧಿ ಇದೆ. ಪ್ರಸ್ತುತ ದಾಖಲಾಗಿರುವ ಯಾವ ವಿದ್ಯಾರ್ಥಿಗೂ ತೊಂದರೆಯಾಗದಂತೆ ಈ ವಿದ್ಯಾರ್ಥಿಗೆಂದೇ ವಿಶೇಷ ಸೀಟು (ಸೂಪರ್‌ನ್ಯೂಮರಿ) ಸೃಜಿಸಬೇಕು ಎಂದು ನ್ಯಾಯಾಲಯ ನುಡಿಯಿತು.
ಶುಲ್ಕ ಪಾವತಿಸಲು ಮುಂದಾದ ಹಿರಿಯ ವಕೀಲ ಆನಂದ ಪದ್ಮನಾಭನ್ ಮತ್ತಿತರ ವಕೀಲರಿಗೆ ಪೀಠ ಕೃತಜ್ಞತೆ ಸಲ್ಲಿಸಿತು. ಇದೇ ವೇಳೆ, ಸಿಜೆಐ ಅವರು ಅಭ್ಯರ್ಥಿಯನ್ನುದ್ದೇಶಿಸಿ “ಆಲ್ ದ ಬೆಸ್ಟ್, ಚೆನ್ನಾಗಿ ವ್ಯಾಸಂಗ ಮಾಡಿ” ಎಂದು ಹಾರೈಸಿದರು.