ತೀರ್ಪು ಬಾಕಿ ಇರುವ ಪ್ರಕರಣಗಳ ಕುರಿತು ಹೇಳಿಕೆ ನೀಡಲು ಸಾಮಾಜಿಕ ಮಾಧ್ಯಮಗಳ ದುರ್ಬಳಕೆ: ಸುಪ್ರೀಂ ಕೋರ್ಟ್ ಕಳವಳ

ಎಐಯುಡಿಎಫ್ ನಾಯಕ ಮತ್ತು ಶಾಸಕ ಕರೀಂ ಉದ್ದೀನ್ ಬರ್ಭುಯಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ಸಾಮಾಜಿಕ ಮಾಧ್ಯಮದಲ್ಲಿ ಸತ್ಯವನ್ನು ತಿರುಚಿ ಹೇಳಿಕೆ ನೀಡುವ ಹಕ್ಕು ಯಾರಿಗೂ ಇಲ್ಲ ಎಂದಿತು.
Social Media
Social Media
Published on

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಸತ್ಯ ತಿರುಚಿ ಹೇಳಿಕೆ ನೀಡಲು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ [ಅಮೀನುಲ್‌ ಹಕ್‌ ಲಸ್ಕರ್‌ ಮತ್ತು ಕರೀಮುದ್ದೀನ್‌ ಬರ್ಭುಯಾ ಹಾಗೂ ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಲಯದ ಭುಜಗಳು ಟೀಕೆಗಳನ್ನು ಭರಿಸುವಷ್ಟು ದೊಡ್ಡವಾದರೂ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿ ಸತ್ಯ ತಿರುಚುವುದನ್ನು ಸಹಿಸಲಾಗದು ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ (ತಮ್ಮ ನಿವೃತ್ತಿಯ ದಿನ ಅವರು ನೀಡಿದ ಆದೇಶ ಇದಾಗಿದೆ) ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಹೇಳಿದೆ.

ನ್ಯಾಯಾಲಯದಲ್ಲಿ ಬಾಕಿ ಇರುವ ವಿಷಯಗಳಿಗೆ ಸಂಬಂಧಿಸಿದಂತೆ ಈಚಿನ ದಿನಗಳಲ್ಲಿ ಸಂದೇಶ, ಹೇಳಿಕೆ, ಲೇಖನ ಇತ್ಯಾದಿಗಳನ್ನು ಪ್ರಕಟಿಸುತ್ತಾ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಂಭೀರ ಕಳವಳಕಾರಿ ಸಂಗತಿಯಾಗಿದೆ. ನ್ಯಾಯಾಲಯದ ಭುಜಗಳು ಯಾವುದೇ ಆರೋಪ, ಟೀಕೆಗಳನ್ನು ಹೊರುವಷ್ಟು ವಿಶಾಲವಾಗಿವೆ. ಆದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನೆಪದಲ್ಲಿ ನ್ಯಾಯಾಲಯದ ಅಧಿಕಾರವನ್ನು ದುರ್ಬಲಗೊಳಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕಟವಾದ ಯಾವುದೇ ಆಪಾದನೆ ಅಥವಾ ಟೀಕಾತ್ಮಕ ಹೇಳಿಕೆ ಇಲ್ಲವೇ ಪೋಸ್ಟ್‌ಗಳನ್ನು ಹಾಕುವುದು ಅಥವಾ ನ್ಯಾಯದ ಹಾದಿಯಲ್ಲಿ ಹಸ್ತಕ್ಷೇಪ ಮಾಡುವುದು ಗಂಭೀರ ಸಂಗತಿಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ (ಎಐಯುಡಿಎಫ್) ನಾಯಕ ಮತ್ತು ಅಸ್ಸಾಂ ಶಾಸಕ ಕರೀಂ ಉದ್ದೀನ್ ಬರ್ಭುಯಾ ಅವರ ವಿರುದ್ಧ ಪ್ರಸ್ತುತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಭಾಗವಾಗಿರುವ ಅಮಿನ್‌ಉಲ್‌ ಹಕ್ ಲಸ್ಕರ್ ಅವರು  ನ್ಯಾಯಾಂಗ ನಿಂದನೆ ಪ್ರಕರಣ ಹೂಡಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕರೀಂ ಅವರಿಗೆ ಸೂಚಿಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು. ಆದರೆ ತನಗೇ ಪ್ರಕರಣದಲ್ಲಿ ಗೆಲುವು ದೊರೆತಿದೆ ಎಂದು ಬಭುರ್ಯಾ ಹೇಳಿಕೊಂಡಿದ್ದರು. ಕಡೆಗೆ ಬಭುರ್ಯಾ ಅವರ ಪರವಾಗಿ ಏಪ್ರಿಲ್ 8 ರಂದು  ತೀರ್ಪು ಪ್ರಕಟವಾಗಿತ್ತು. ಆದರೆ ಅದಕ್ಕೂ ಮುನ್ನವೇ ಅವರು ಸಾಮಾಜಿಕ ಮಾಧ್ಯಮದಲ್ಲಿ ತಾನು ಪ್ರಕರಣ ಗೆದ್ದಿರುವುದಾಗಿ ಹೇಳಿಕೊಂಡಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.

ಈ ಸಂಬಂಧ ಎಐಯುಡಿಎಫ್ ನಾಯಕ ಮತ್ತು ಶಾಸಕ ಕರೀಂ ಉದ್ದೀನ್ ಬರ್ಭುಯಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ಸಾಮಾಜಿಕ ಮಾಧ್ಯಮದಲ್ಲಿ  ಸತ್ಯವನ್ನು ತಿರುಚಿ ಹೇಳಿಕೆ ನೀಡುವ ಹಕ್ಕು ಯಾರಿಗೂ ಇಲ್ಲ ಎಂದಿತು.   

Kannada Bar & Bench
kannada.barandbench.com