ಗಣಿ ಕಂಪೆನಿ ವೇದಾಂತ ಸ್ಥಾಪಿಸಲು ಉದ್ದೇಶಿಸಿದ್ದ ವಿಶ್ವವಿದ್ಯಾಲಯಕ್ಕಾಗಿ 6,000 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ 2010ರ ಒರಿಸ್ಸಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಅಗರ್‌ವಾಲ್ ಪ್ರತಿಷ್ಠಾನ ಇತರರು ಹಾಗೂ ಒಡಿಶಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಲ್ಲದೆ ವೇದಾಂತದ ಅನಿಲ್ ಅಗರ್ವಾಲ್ ಪ್ರತಿಷ್ಠಾನಕ್ಕೆ ₹ 5 ಲಕ್ಷ ದಂಡ ವಿಧಿಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ 6 ವಾರಗಳಲ್ಲಿ ಒಡಿಶಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದಂಡದ ಮೊತ್ತ ಠೇವಣಿ ಇಡುವಂತೆ ಸೂಚಿಸಿತು.
ಆಕ್ಷೇಪಾರ್ಹ ಭೂಮಿಯಲ್ಲಿ ಎರಡು ನದಿಗಳು ಹರಿಯುತ್ತಿದ್ದು ಭೂಸ್ವಾಧೀನಕ್ಕೆ ಅವಕಾಶ ನೀಡುವಾಗ ನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದ ನಡೆ ಬಗ್ಗೆ ನ್ಯಾಯಾಲಯ ಕಟುಪದಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿತು. 'ನುವಾನೈ' ಮತ್ತು 'ನಾಲಾ' ನದಿಗಳು ಹರಿಯುತ್ತಿರುವ ಪ್ರದೇಶವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ನದಿಗಳ ನಿರ್ವಹಣೆ ಇತ್ಯಾದಿಗಳನ್ನು ಫಲಾನುಭವಿ ಕಂಪನಿಗೆ ಹಸ್ತಾಂತರಿಸಲು ಸಾಧ್ಯವೇ? ಎಂದು ನ್ಯಾಯಾಲಯ ಪ್ರಶ್ನಿಸಿತು.
ಇಂತಹ ಕ್ರಮ ಸಾರ್ವಜನಿಕ ವಿಶ್ವಾಸದ ಸಿದ್ಧಾಂತವನ್ನು ಉಲ್ಲಂಘಿಸಲಿದ್ದು ಹತ್ತಿರದ ಅಭಯಾರಣ್ಯದ ನಿವಾಸಿಗಳು ಮತ್ತು ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಉಚ್ಛ ನ್ಯಾಯಾಲಯ ಗಮನಿಸಿದಂತೆ ಉದ್ದೇಶಿತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ದೊಡ್ಡ ಪ್ರಮಾಣದ ಕಾಮಗಾರಿಗಳು ನಡೆಯಲಿದ್ದು ವನ್ಯಜೀವಿ ಅಭಯಾರಣ್ಯ, ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಪ್ರದೇಶದ ನಿಸರ್ಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವನ್ಯಜೀವಿ ಅಭಯಾರಣ್ಯವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಾಲಯ ಒತ್ತಿಹೇಳಿತು.
ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಇತರೆ ಟ್ರಸ್ಟ್‌ಗಳಿಂದ ಬಂದ ಇದೇ ರೀತಿ ಪ್ರಸ್ತಾವನೆಗಳನ್ನು ಪರಿಶೀಲಿಸದೆ ಮೇಲ್ಮನವಿದಾರರಿಗೆ ಅನಗತ್ಯ ಪ್ರಯೋಜನ ನೀಡಲು ಮುಂದಾದಂತೆ ತೋರುತ್ತದೆ ಎಂಬುದಾಗಿ ಪೀಠ ಅಭಿಪ್ರಾಯಪಟ್ಟಿತು. ಭೂಸ್ವಾಧೀನದ ಫಲಾನುಭವಿಯಾಗಿದ್ದ ಅನಿಲ್ ಅಗರ್ವಾಲ್ ಪ್ರತಿಷ್ಠಾನ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ಬಂದಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]