ಚುನಾವಣಾ ಬಾಂಡ್: ಅ. 31ರಿಂದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಅಕ್ಟೋಬರ್ 16ರಂದು ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು. ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಇದೀಗ ಪ್ರಕರಣದ ವಿಚಾರಣೆ ನಡೆಸಲಿದೆ.
Supreme Court, Electoral Bonds
Supreme Court, Electoral Bonds

ರಾಜಕೀಯ ಪಕ್ಷಗಳಿಗೆ ಅನಾಮಧೇಯ ರೀತಿಯಲ್ಲಿ ದೇಣಿಗೆ ನೀಡಲು ಅನುಕೂಲ ಕಲ್ಪಿಸುವ ಚುನಾವಣಾ ಬಾಂಡ್‌ಗಳ ಸಿಂಧತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಮುಂದಿನ ವಾರ ವಿಚಾರಣೆ ನಡೆಸಲಿದೆ.

ಸಿಜೆಐ ಚಂದ್ರಚೂಡ್ ಅವರೊಂದಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅಕ್ಟೋಬರ್ 31ರಿಂದ (ಮಂಗಳವಾರ) ವಿಚಾರಣೆ ಆರಂಭಿಸಲಿದೆ.

Also Read
ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಬಾಂಡ್‌ ಮಾರಾಟ ನಿಷೇಧ ಕೋರಿದ್ದ ಎಡಿಆರ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಹಣಕಾಸು ಮಸೂದೆಗಳಾಗಿ ಕಾಯಿದೆ ಅಂಗೀಕಾರಕ್ಕೆ ಸಂಬಂಧಿಸಿದ ಕಾನೂನು ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ವಿವಾದಾತ್ಮಕ ಯೋಜನೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನಡೆಸಬೇಕೆಂದು ಅಕ್ಟೋಬರ್ 16 ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಇದಕ್ಕೂ ಮುನ್ನ ಅಕ್ಟೋಬರ್ 10 ರಂದು ನಡೆದ ವಿಚಾರಣೆ ವೇಳೆ ಅಕ್ಟೋಬರ್ 31ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತ್ತು. ಆಗ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಉಲ್ಲೇಸಬೇಕೆ ಎಂಬ ಬಗ್ಗೆ ಚರ್ಚಿಸಿತ್ತಾದರೂ ಅಂತಿಮವಾಗಿ ಅದರ ವಿರುದ್ಧ ನಿರ್ಣಯ ತೆಗೆದುಕೊಂಡಿತ್ತು. ಕೆಲ ದಿನಗಳ ಬಳಿಕ ಔಪಚಾರಿಕವಾಗಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಪ್ರಕರಣ ಉಲ್ಲೇಖಿಸಲಾಗಿತ್ತು.  

ಚುನಾವಣಾ ಬಾಂಡ್‌ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ಬಹು ವರ್ಗಗಳಲ್ಲಿರುವ ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಚುನಾವಣಾ ಬಾಂಡ್‌ಗಳನ್ನು ನೀಡಲಾಗುತ್ತದೆ.

ಚುನಾವಣಾ ಬಾಂಡ್‌ಗಳನ್ನು ಹಣಕಾಸು ಕಾಯಿದೆ, 2017 ರ ಮೂಲಕ ಜಾರಿಗೆ ತರಲಾಯಿತು. ಅಂತಹ ಬಾಂಡ್‌ ಯೋಜನೆ ಜಾರಿಗೆ ತರುವುದಕ್ಕಾಗಿ ಆರ್‌ಬಿಐ ಕಾಯಿದೆ, ಆದಾಯ ತೆರಿಗೆ ಕಾಯಿದೆ ಹಾಗೂ ಜನಪ್ರತಿನಿಧಿ ಕಾಯಿದೆಗಳಿಗೆ ಕೂಡ ತಿದ್ದುಪಡಿ ಮಾಡಲಾಯಿತು.

2017ರ ಹಣಕಾಸು ಕಾಯಿದೆಯು ಚುನಾವಣಾ ನಿಧಿ ಸಂಗ್ರಹಿಸುವ ಉದ್ದೇಶಕ್ಕಾಗಿ ಯಾವುದೇ  ಶೆಡ್ಯುಲ್ಡ್‌ ಬ್ಯಾಂಕ್‌ನಿಂದ ಚುನಾವಣಾ ಬಾಂಡ್‌ಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತಂದಿತು. ಹಣಕಾಸು ಕಾಯಿದೆಯನ್ನು ಹಣಕಾಸು ಮಸೂದೆಯ ರೂಪದಲ್ಲಿ ಅಂಗೀಕರಿಸಿದರೆ ರಾಜ್ಯಸಭೆಯ ಒಪ್ಪಿಗೆ ಅಗತ್ಯ ಇರುವುದಿಲ್ಲ.

ರಾಜಕೀಯ ಪಕ್ಷಗಳು ಅನಿಯಮಿತವಾಗಿ ಮನಸೋ ಇಚ್ಛೆಯಿಂದ ಹಣ ಸಂಗ್ರಹಿಸುವ ಅವಕಾಶ ಮಾಡಿಕೊಡುವ ಕಾರಣಕ್ಕೆ ಹಣಕಾಸು ಕಾಯಿದೆ, 2017ರ ಮೂಲಕ ವಿವಿಧ ಕಾನೂನುಗಳಿಗೆ ಮಾಡಿದ ಕನಿಷ್ಠ ಐದು ತಿದ್ದುಪಡಿಗಳನ್ನು ಪ್ರಶ್ನಿಸಿ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ. ಹಣಕಾಸು ಕಾಯ್ದೆಯನ್ನು ಹಣದ ಮಸೂದೆಯಾಗಿ ಅಂಗೀಕರಿಸುವಂತಿಲ್ಲ ಎಂದು ಅರ್ಜಿಗಳು ಒತ್ತಿ ಹೇಳಿವೆ.

ಆದರೆ ಚುನಾವಣಾ ಬಾಂಡ್‌ ಯೋಜನೆ ಪಾರದರ್ಶಕವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರತಿ- ಅಫಿಡವಿಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಯೋಜನೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2021ರ ಮಾರ್ಚ್‌ನಲ್ಲಿ  ವಜಾಗೊಳಿಸಿತ್ತು.

Kannada Bar & Bench
kannada.barandbench.com