[ಒಳಮೀಸಲಾತಿ ವಿಚಾರ] ರಾಜ್ಯಗಳು ಎಸ್‌ಸಿ/ಎಸ್‌ಟಿಗಳ ಉಪ ವಿಂಗಡಣೆ ಮಾಡಲು ಕ್ರಮ ಕೈಗೊಳ್ಳಬಹುದು: ಸುಪ್ರೀಂ

ಎಸ್‌ಸಿ ಮತ್ತು ಎಸ್‌ಟಿಯಂತಹ ಮೀಸಲಾತಿ ಪಡೆದ ಸಮುದಾಯಗಳನ್ನು ಉಪ-ವರ್ಗೀಕರಿಸುವ ಕಾನೂನುಬದ್ಧತೆ ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ಪೀಠ ಗುರುವಾರ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.
ಭಾರತದ ಸರ್ವೋಚ್ಚ ನ್ಯಾಯಾಲಯ
ಭಾರತದ ಸರ್ವೋಚ್ಚ ನ್ಯಾಯಾಲಯ
Published on

ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಉಪ ವರ್ಗೀಕರಣ ಮಾಡುವುದರ ಕಾನೂನುಬದ್ಧತೆ ಪ್ರಶ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪು ಕಾಯ್ದಿರಿಸಿದೆ.

ಪ್ರಕರಣ ಕುರಿತಂತೆ ಮೂರು ದಿನಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿವಿಕ್ರಮ್ ನಾಥ್ಬೇಲಾ ಎಂ ತ್ರಿವೇದಿಪಂಕಜ್ ಮಿತ್ತಲ್‌ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿತು.

ಈ ಸಂದರ್ಭದಲ್ಲಿ, ಸಿಜೆಐ ಅವರು ಪರಿಶಿಷ್ಟ ಸಮುದಾಯಗಳ ʼಉಪ-ವರ್ಗೀಕರಣʼ (Sub-classification) ಮತ್ತು "ಉಪ- ವಿಂಗಡೀಕರಣ" (Sub-categorization) ನಡುವಿನ ವ್ಯತ್ಯಾಸ ತಿಳಿಸಿದರು.

ಮೀಸಲಾತಿ ಪ್ರಯೋಜನಗಳು ಹೆಚ್ಚು ಹಿಂದುಳಿದ ಗುಂಪುಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮೀಸಲಾತಿ ವರ್ಗದ ಸಮುದಾಯಗಳನ್ನು ಉಪ- ವಿಂಗಡಣೆ (Sub-categorization) ಮಾಡಬೇಕಾಗಬಹುದು ಎಂದು ಸಿಜೆಐ ಹೇಳಿದರು.

"(ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿರುವ) ವಿಧಿ 342 ಎ ಉಪ -ವರ್ಗೀಕರಣದ ಬಗ್ಗೆ ವ್ಯವಹರಿಸುತ್ತದೆಯೇ ಹೊರತು ಉಪ - ವಿಂಗಡೀಕರಣದ ಬಗ್ಗೆ ಅಲ್ಲ. 342 ಎಯಲ್ಲಿ ಉಪ ವಿಂಗಡೀಕರಣದ ಬಗ್ಗೆ ಏನೂ ಇಲ್ಲ ಎಂಬುದು ಊಹೆ. ಅದರ ಹೊರತಾಗಿಯೂ, ಇಂದ್ರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಹಿಂದುಳಿದ ಮತ್ತು ಹೆಚ್ಚು ಹಿಂದುಳಿದವರ ವಿಂಗಡೀಕರಣವನ್ನು ಗುರುತಿಸಲಾಯಿತು. ತಿದ್ದುಪಡಿಗಿಂತಲೂ (ವಿಧಿ 342 ಎಯನ್ನು ಜಾರಿಗೆ ತಂದ ತಿದ್ದುಪಡಿ) ಹೆಚ್ಚಾಗಿ ಈ ನ್ಯಾಯಾಲಯವು ಉಪ -ವರ್ಗೀಕರಣದ ಅಧಿಕಾರವನ್ನು ಅನುಚ್ಛೇದ 16 (4)ರಲ್ಲಿ ಕಂಡುಕೊಂಡಿತು. ಹಾಗೆ ಮಾಡದೆ ಹೋದರೆ ಏನಾಗುತ್ತದೆ ಎಂದರೆ ಪರಿಶಿಷ್ಟ ಜಾತಿಗಳಲ್ಲಿ ಹೆಚ್ಚು ಮುಂದುವರಿದವರೇ ಎಲ್ಲಾ ಪ್ರಯೋಜನ ಪಡೆಯುತ್ತಾರೆ" ಎಂದು ಅವರು ಹೇಳಿದರು.

ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು ಎಸ್ಸಿ ಎಸ್ಟಿ ಉಪ ವರ್ಗದ ಪ್ರಕರಣದ ವಿಚಾರಣೆ ನಡೆಸಿತು
ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು ಎಸ್ಸಿ ಎಸ್ಟಿ ಉಪ ವರ್ಗದ ಪ್ರಕರಣದ ವಿಚಾರಣೆ ನಡೆಸಿತು

ಅನುಚ್ಛೇದ 341 (ಪರಿಶಿಷ್ಟ ಜಾತಿಗಳನ್ನು ಅಧಿಸೂಚಿಸುವ ರಾಷ್ಟ್ರಪತಿಗಳ ಅಧಿಕಾರ; ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಸೇರಿಸುವ ಅಥವಾ ಹೊರಗಿಡುವ ಸಂಸತ್ತಿನ ಅಧಿಕಾರ) ರಾಜ್ಯಗಳು ಪರಿಶಿಷ್ಟ ಜಾತಿಗಳಲ್ಲಿ ಉಪ ಗುಂಪುಗಳನ್ನು ರಚಿಸುವುದನ್ನು ನಿರ್ಬಂಧಿಸುತ್ತದೆ ಎಂದು ವಾದಿಸಿದ ಹಿರಿಯ ವಕೀಲ ಮನೋಜ್ ಸ್ವರೂಪ್ ಅವರ ವಾದಗಳಿಗೆ ಪ್ರತಿಕ್ರಿಯೆಯಾಗಿ ಈ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಪರಿಶಿಷ್ಟ ಜಾತಿ ಎಂಬುದು ಅಧಿಸೂಚಿತವಾದ ಗುಂಪಾಗಿದ್ದು ಮೀಸಲಾತಿ ಪ್ರಯೋಜನಗಳಿಗಾಗಿ ಅಧಿಸೂಚನೆ ಹೊರಡಿಸಿದ ನಂತರ ಏಕರೂಪದ ಗುಂಪಾಗುತ್ತದೆ ಎಂದು ಸ್ವರೂಪ್ ವಾದಿಸಿದರು.

ಈ ಅಭಿಪ್ರಾಯದ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. ಪರಿಶಿಷ್ಟ ಜಾತಿಯನ್ನು ಒಂದು ಜಾತಿಯಾಗಿ ನೋಡಲಾಗದು ಎಂದು ಸಿಜೆಐ ಅಭಿಪ್ರಾಯಪಟ್ಟರು.

"ಸಂವಿಧಾನವು ಏನು ಮಾಡಿತು ಎಂದರೆ ಅದು ಕೆಲವು ಜಾತಿಗಳನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸುವ ಮೂಲಕ ಅನೇಕ ಜಾತಿಗಳನ್ನು ಈ ಕೃತಕ ಅಚ್ಚಿನೊಳಗೆ ಇರಿಸಿದೆ. ಸಮಾಜಶಾಸ್ತ್ರೀಯ ದೃಷ್ಟಿಕೋನಕ್ಕೆ ವ್ಯತಿರಿಕ್ತವಾದ ಮತ್ತೊಂದು ಜಾತಿಯನ್ನು ಸಂವಿಧಾನ ಸೃಷ್ಟಿಸಲಿಲ್ಲ. ಹೀಗೆ ಪರಿಗಣಿಸುವುದು ಬೇರೆ ಯಾವುದೇ ಕಾರಣಕ್ಕಲ್ಲದೆ ಅವುಗಳನ್ನು ಪರಿಶಿಷ್ಟ ಜಾತಿಯೆಂದು ಗುರುತಿಸಲು ಮಾತ್ರ ಆಗಿರುತ್ತದೆ ... ಇಲ್ಲಿರುವ ಸಾಮಾನ್ಯ ವಿಷಯವೆಂದರೆ ಅವರೆಲ್ಲರೂ (ಪರಿಶಿಷ್ಟ ಸಮುದಾಯದ ಎಲ್ಲರೂ) ಸಾಮಾಜಿಕ ತಾರತಮ್ಯ ಎದುರಿಸಿದ್ದಾರೆ. ಇದಲ್ಲದೆ (ಪರಿಶಿಷ್ಟ ಸಮುದಾಯಗಳ) ಇನ್ನಿತರ ಸಾಮಾನ್ಯ ಗುಣಲಕ್ಷಣಗಳೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ, ಮಹಿಳೆಯರ ವಿವಾಹದ ವಯಸ್ಸು, ಮರಣ ಪ್ರಮಾಣ, ಜೀವಿತಾವಧಿ" ಎಂದು ಸಿಜೆಐ ಅಭಿಪ್ರಾಯಪಟ್ಟರು.

ವಿಧಿ 341 ಪರಿಶಿಷ್ಟ ಜಾತಿಗಳ ಪದನಾಮವನ್ನು ಮೀಸಲಾತಿಗೆ ತರುವ ವಿಚಾರವನ್ನು ಸಂಸತ್ತಿಗೆ (ಕೇಂದ್ರಕ್ಕೆ) ಬಿಟ್ಟಿದ್ದರೂ, (ರಾಜ್ಯಗಳು ಯಾವುದೇ ಹಿಂದುಳಿದ ವರ್ಗದ ನಾಗರಿಕರಿಗೆ ರಾಜ್ಯಗಳು ಉದ್ಯೋಗದಲ್ಲಿ ಮೀಸಲಾತಿ ನೀಡುವ) ವಿಧಿ 16 ಈಗಲೂ ರಾಜ್ಯಗಳಿಗೆ ಅನುವು ಮಾಡಿಕೊಡುವ ಪಾತ್ರ ನೀಡಿದೆ ಎಂದು ನ್ಯಾಯಾಲಯು ಗಮನಸೆಳೆಯಿತು.

ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಸಮುದಯಾಗಳ ಒಳ ವಿಂಗಡಣೆ ಮಾಡದಂತೆ ರಾಜ್ಯಗಳನ್ನು ನಿರ್ಬಂಧಿಸಿದರೆ ಅದು ಅಸಮಾನತೆಗೆ ಕಾರಣವಾಗಬಹುದು ಎಂದು ನ್ಯಾ. ಗವಾಯಿ ಈ ಸಂದರ್ಭದಲ್ಲಿ ತಿಳಿಸಿದರು.

ಅಲ್ಲದೆ ನ್ಯಾಯಮೂರ್ತಿ ವಿಕ್ರಮ್ ನಾಥ್ "ಇದನ್ನು ವಿರೋಧ ಮಾಡುತ್ತಿರುವುದಾದರೂ ಏಕೆ? ಒಳ- ವಿಂಗಡೀಕರಣ ಆ ಜಾತಿಯೊಳಗಿನ ಇತರರಿಗೂ ಸಹಾಯ ಮಾಡುತ್ತದೆ, ಇಲ್ಲದಿದ್ದರೆ ಕೇವಲ ಒಂದು ವರ್ಗಕ್ಕೆ ಮಾತ್ರ ಪ್ರಯೋಜನಗಳು ಸಿಗುತ್ತವೆ" ಎಂದು ಅಭಿಪ್ರಾಯಪಟ್ಟರು.

ಪರಿಶಿಷ್ಟ ವರ್ಗದೊಳಗೂ ಒಂದು ವರ್ಗ ಇರಬಹುದು. ಹಾಗಿದ್ದ ಮಾತ್ರಕ್ಕೆ ಅದು ಕೃತಕ ವರ್ಗವೇನೂ ಅಲ್ಲ. ವಸ್ತುನಿಷ್ಠ ಮಾನದಂಡಗಳಿಂದ ಅದು ಒಂದು ವರ್ಗ ಎಂಬುದನ್ನು ಆ ಸಮುದಾಯ ಸಾಬೀತುಪಡಿಸಿದರೆ ಆಗ ತನ್ನ ಸಮುದಾಯದ ಪ್ರಬಲ ಜಾತಿಗಳ ಸೌಲಭ್ಯವನ್ನು ಅದು ಪಡೆಯುತ್ತದೆ ಎಂದು ಸಿಜೆಐ ತಿಳಿಸಿದರು.

ಪರಿಶಿಷ್ಟ ಸಮುದಾಯಗಳ ಒಳ ವರ್ಗೀಕರಣಕ್ಕಾಗಿ  2006ರಲ್ಲಿ ಪಂಜಾಬ್ ವಿಧಾನಸಭೆ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ ಯನ್ನು ಜಾರಿಗೆ ತಂದಿತ್ತು. ಆದರೆ ಅದನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

Kannada Bar & Bench
kannada.barandbench.com