ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧಕಾಲದ ಪರಿಸ್ಥಿತಿಗಳಿಂದಾಗಿ ಜಾರಿಗೆ ಬಂದ ತಾತ್ಕಾಲಿಕ ನಿಬಂಧನೆಯಾಗಿದೆ ಮತ್ತು ಇದು ಸ್ಥಿತ್ಯಂತರ ಪ್ರಕ್ರಿಯೆಯನ್ನು ಪೂರೈಸುವ ಉದ್ದೇಶವನ್ನು ಮಾತ್ರವೇ ಹೊಂದಿತ್ತು ಎಂದ ನ್ಯಾಯಾಲಯ.
ಸುಪ್ರೀಂ ಕೋರ್ಟ್, 370 ನೇ ವಿಧಿ
ಸುಪ್ರೀಂ ಕೋರ್ಟ್, 370 ನೇ ವಿಧಿ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಂವಿಧಾನ ಪೀಠವು 370 ನೇ ವಿಧಿಯನ್ನು ತೆಗೆದುಹಾಕುವ ಸರ್ಕಾರದ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿಯಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಕೇಂದ್ರ ಸರ್ಕಾರದ 2019 ರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಸಮೂಹದ ವಿಚಾರಣೆಯ ನಡೆಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ಪ್ರಕಟಿಸಿದೆ.

ಕೇಂದ್ರದ ನಿರ್ಧಾರದ ನಂತರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯನ್ನು ಸಂಸತ್ತು ಅಂಗೀಕರಿಸಿತ್ತು. ಇದು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಸುಪ್ರೀಂ ಕೋರ್ಟ್‌ನ ಇಂದು ಒಟ್ಟು ಮೂರು ತೀರ್ಪುಗಳನ್ನು ಪ್ರಕಟಿಸಿತು. ಒಂದು ತೀರ್ಪು ಸಿಜೆಐ ಚಂದ್ರಚೂಡ್ ಅವರದ್ದಾದರೆ, ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾಯಮೂರ್ತಿ ಕಾಂತ್ ಅವರ ಮತ್ತೊಂದು ತೀರ್ಪು ಹಾಗೂ ನ್ಯಾಯಮೂರ್ತಿ ಕೌಲ್ ಮತ್ತು ಖನ್ನಾ ಅವರ ಮೂರನೆಯ ತೀರ್ಪು ಪ್ರಕಟವಾದವು. ಈ ಮೂರು ಪ್ರತ್ಯೇಕ ತೀರ್ಪುಗಳಾದರೂ ಸಹಮತ ಹೊಂದಿವೆ.

370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧಕಾಲದ ಪರಿಸ್ಥಿತಿಗಳಿಂದಾಗಿ ಜಾರಿಗೆ ಬಂದ ತಾತ್ಕಾಲಿಕ ನಿಬಂಧನೆಯಾಗಿತ್ತು ಮತ್ತು ಇದು ಸ್ಥಿತ್ಯಂತರ ಪ್ರಕ್ರಿಯೆಯನ್ನು ಪೂರೈಸುವ ಉದ್ದೇಶವನ್ನು ಮಾತ್ರವೇ ಹೊಂದಿತ್ತು.

"ರಾಜ್ಯದಲ್ಲಿನ ಯುದ್ಧ ಪರಿಸ್ಥಿತಿಗಳಿಂದಾಗಿ ಇದು ತಾತ್ಕಾಲಿಕ ಉದ್ದೇಶ ಹೊಂದಿತ್ತು. ಇದರ ಓದುವಿಕೆಯು ಇದು ತಾತ್ಕಾಲಿಕ ನಿಬಂಧನೆ ಎಂದು ತೋರಿಸುತ್ತದೆ ಮತ್ತು ಆದ್ದರಿಂದ ಇದನ್ನು ಸಂವಿಧಾನದ ಭಾಗ 21 ರಲ್ಲಿ ಸೇರಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

370 ನೇ ವಿಧಿಯನ್ನು ತೆಗೆದುಹಾಕಲು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದ್ದ ಸಂವಿಧಾನ ಸಭೆಯು ಅಸ್ತಿತ್ವದಲ್ಲಿಲ್ಲ ಎಂಬ ಅಂಶವು 370 ನೇ ವಿಧಿ ಶಾಶ್ವತವಾಗಿ ಮುಂದುವರಿಯುತ್ತದೆ ಎಂದು ಅರ್ಥವಲ್ಲ ಎಂದು ಅದು ನುಡಿದಿದೆ.

"370 (3) ನೇ ವಿಧಿಯನ್ನು ಸಾಂವಿಧಾನಿಕ ಏಕೀಕರಣಕ್ಕಾಗಿ ಪರಿಚಯಿಸಲಾಗಿದೆಯೇ ಹೊರತು ಸಾಂವಿಧಾನಿಕ ವಿಘಟನೆಗಾಗಿ ಅಲ್ಲ. ಸಂವಿಧಾನ ರಚನಾ ಸಭೆಯನ್ನು ವಿಸರ್ಜಿಸಿದ ನಂತರ 370 (3) ಅನ್ನು ಬಳಸಲಾಗದು ಎಂದು ಹೇಳುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅದು ಸಾಂವಿಧಾನಿಕ ಏಕೀಕರಣದ ನಿಬಂಧನೆಯನ್ನು ಸ್ಥಗಿತಗೊಳಿಸುತ್ತದೆ" ಎಂದು ಪೀಠ ಹೇಳಿದೆ.

370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧಕಾಲದ ಪರಿಸ್ಥಿತಿಗಳಿಂದಾಗಿ ಜಾರಿಗೆ ಬಂದ ತಾತ್ಕಾಲಿಕ ನಿಬಂಧನೆಯಾಗಿದೆ.
ಸುಪ್ರೀಂ ಕೋರ್ಟ್‌

ಆದ್ದರಿಂದ, ರಾಷ್ಟ್ರಪತಿಗಳು ಭಾರತದ ಸಂವಿಧಾನದ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ ಮಟ್ಟಿಗೆ ನ್ಯಾಯಾಲಯವು ಸಾಂವಿಧಾನಿಕ ಆದೇಶ 272 (ಸಿಒ 272) ಅನ್ನು ಎತ್ತಿಹಿಡಿದಿದೆ.

"370 (1) (ಡಿ) ವಿಧಿಯಡಿ ಸಿಒ 272 ಅನ್ನು ಹೊರಡಿಸಲು ರಾಷ್ಟ್ರಪತಿಗಳು ಅಧಿಕಾರವನ್ನು ಚಲಾಯಿಸುವುದು ದುರುದ್ದೇಶಪೂರಿತವಲ್ಲ. 370 (3) ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ರಾಷ್ಟ್ರಪತಿಗಳು ಏಕಪಕ್ಷೀಯವಾಗಿ 370 ನೇ ವಿಧಿ ಅಸ್ತಿತ್ವದಲ್ಲಿಲ್ಲ ಎಂದು ಅಧಿಸೂಚನೆ ಹೊರಡಿಸಬಹುದು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಅನ್ವಯಿಸುವಾಗ 370 (1) (ಡಿ) ವಿಧಿಯ ಎರಡನೇ ನಿಬಂಧನೆಯ ಅಡಿಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುವ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ರಾಷ್ಟ್ರಪತಿಗಳು ಪಡೆಯಬೇಕಾದ ಅಗತ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಭಾರತದ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಅನ್ವಯಿಸುವ 370 (1) (ಡಿ) ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಲು ರಾಷ್ಟ್ರಪತಿಗಳು ಹೊರಡಿಸಿದ ಸಿಒ 272 ರ ಪ್ಯಾರಾ 2 ಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

1949 ರಲ್ಲಿ ಭಾರತದೊಂದಿಗೆ ವಿಲೀನಗೊಂಡ ನಂತರ ಜಮ್ಮು ಮತ್ತು ಕಾಶ್ಮೀರವು ಯಾವುದೇ ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಪ್ರಮುಖ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

"ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿಲ್ಲ ಎಂದು ನಾವು ಹೇಳುತ್ತೇವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿದೆ ಎಂದು ಯಾವುದೇ ಸಾಂವಿಧಾನಿಕ ಪಠ್ಯ ಹೇಳುವುದಿಲ್ಲ. 1949 ರಲ್ಲಿ ಯುವರಾಜ್ ಕರಣ್ ಸಿಂಗ್ ಅವರ ಘೋಷಣೆ ಹಾಗೂ ನಂತರದ ಸಂವಿಧಾನವು ಅದನ್ನು ಬಲಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಅವಿಭಾಜ್ಯ ಅಂಗ ಎಂಬುದು ಭಾರತದ ಸಂವಿಧಾನದ 1 ನೇ ವಿಧಿಯಿಂದ ವಿಧಿತವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿಲ್ಲ ಎಂದು ನಾವು ಹೇಳುತ್ತೇವೆ.
ಸುಪ್ರೀಂ ಕೋರ್ಟ್‌

ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಸಿಂಧುತ್ವದ ಬಗ್ಗೆ ನ್ಯಾಯಾಲಯವು ತೀರ್ಪು ನೀಡಿಲ್ಲ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂಬ ಸಾಲಿಸಿಟರ್ ಜನರಲ್ ಅವರ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸಿದೆ.

"ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂದು ಎಸ್‌ಜಿ ಹೇಳಿದ್ದಾರೆ. ಸೆಪ್ಟೆಂಬರ್ 2024 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಚುನಾವಣೆಗಳು ನಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಬೇಗ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ" ಎಂದು ನ್ಯಾಯಾಲಯ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com