ಆರ್‌ಜೆಡಿ ನಾಯಕ ಸಿಂಗ್ ದೋಷಿ ಎಂದ ಸುಪ್ರೀಂ: ಪೊಲೀಸರು, ಪಾಟ್ನಾ ಹೈಕೋರ್ಟ್ ಹಾಗೂ ಪಿ ಪಿ ವಿರುದ್ಧ ಸಿಡಿಮಿಡಿ

ಎಲ್ಲಾ ಸಾಕ್ಷಿಗಳ ವಿರುದ್ಧ ಗೆಲುವು ಸಾಧಿಸುವಲ್ಲಿ ಸಿಂಗ್ ಯಶಸ್ವಿಯಾಗಿದ್ದರು. ತನಿಖಾ ಸಂಸ್ಥೆ ಸೇರಿದಂತೆ ಇಡೀ ಸರ್ಕಾರದ ಆಡಳಿತ ಯಂತ್ರ ಅವರ ಪರವಾಗಿ ಇತ್ತು ಎಂದು ತಿಳಿಸಿದ ನ್ಯಾಯಾಲಯ, ಸಿಂಗ್ ಕೊಲೆ ಪ್ರಕರಣದ ತಪ್ಪಿತಸ್ಥ ಎಂದು ಪರಿಗಣಿಸಿತು.
ಆರ್‌ಜೆಡಿ ನಾಯಕ ಸಿಂಗ್ ದೋಷಿ ಎಂದ ಸುಪ್ರೀಂ: ಪೊಲೀಸರು, ಪಾಟ್ನಾ ಹೈಕೋರ್ಟ್ ಹಾಗೂ ಪಿ ಪಿ ವಿರುದ್ಧ ಸಿಡಿಮಿಡಿ
A1
Published on

ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಆರ್‌ಜೆಡಿ ನಾಯಕ ಮತ್ತು ಮಾಜಿ ಸಂಸದ ಪ್ರಭುನಾಥ್ ಸಿಂಗ್ ಪ್ರಕರಣವನ್ನು ಪೊಲೀಸರು, ಪಾಟ್ನಾ ಹೈಕೋರ್ಟ್‌ ಹಾಗೂ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಪಿ ಪಿ) ನಿರ್ವಹಿಸಿರುವ ರೀತಿಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ಹರೇಂದ್ರ ರೈ ಮತ್ತು ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ದರೋಗಾ ರಾಯ್‌ ಮತ್ತು ರಾಜೇಂದ್ರ ರಾಯ್‌ ಅವರನ್ನು 1995ರಲ್ಲಿ ಹತ್ಯೆ ಮಾಡಲಾಗಿತ್ತು ನಂತರ ನ್ಯಾಯಾಲಯದ ಸಾಕ್ಷಿ ಲಾಲ್‌ಮುನಿ ದೇವಿ ಅವರನ್ನು ಕೂಡ ಕೊಲೆಗೈಯಲಾಗಿತ್ತು. ಈ ಕೊಲೆ ಪ್ರಕರಣಗಳಲ್ಲಿ ಪ್ರಭುನಾಥ್‌ ಸಿಂಗ್‌ ಅಪರಾಧಿ ಎಂದು ಸುಪ್ರೀಂ ಕೋರ್ಟ್‌ ಪರಿಗಣಿಸಿದ್ದು "ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಅಸಾಧಾರಣ ನೋವಿನ ಅಧ್ಯಾಯ" ಎಂದು ಪ್ರಕರಣ ನಿರ್ವಹಿಸಿದ ರೀತಿಯನ್ನು ಖಂಡಿಸಿದೆ.

ಪೊಲೀಸರು ಮತ್ತು ಪ್ರಾಸಿಕ್ಯೂಷನ್ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿಭಾಯಿಸುವಲ್ಲಿ 'ಸಂಪೂರ್ಣ ವಿಫಲವಾಗಿದ್ದಾರೆ' ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿದೆ.

ಪ್ರಾಸಿಕ್ಯೂಷನ್‌ನಿಂದ ತನಿಖೆ ಮತ್ತು ವಿಚಾರಣೆ ನಡೆಸಿದ ರೀತಿ ಬಗ್ಗೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳು ಕಣ್ಣು ಮುಚ್ಚಿ ಇದ್ದದ್ದು ಕೂಡ ನ್ಯಾಯಾಲಯವನ್ನು ಕೆರಳಿಸಿತು.

“ಪ್ರಕರಣದ ಸೂಕ್ಷ್ಮತೆ ಮತ್ತು ಜಟಿಲತೆಗಳನ್ನು ಗಮನಿಸುವಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ ದಯನೀಯವಾಗಿ ಸೋತಿವೆ. ತನಿಖೆ, ಪ್ರಾಸಿಕ್ಯೂಟರ್‌ ಪಾತ್ರ , ಆರೋಪಿಯ ಬಲವಾದ ಹಸ್ತಕ್ಷೇಪ ಹಾಗೂ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ನಡೆ ಬಗ್ಗೆ ಎರಡೂ ನ್ಯಾಯಾಲಯಗಳು ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದ್ದವು. ನ್ಯಾಯಾಧೀಶರು ಸಾಮಾನ್ಯ ವಿಚಾರಣೆಯ ರೀತಿ ಶಾಸ್ತ್ರಕ್ಕೆಂಬಂತೆ ಸಾಕ್ಷ್ಯಗಳನ್ನು ಪರಿಶೀಲಿಸಿದರು. ಔಪಚಾರಿಕ ಸಾಕ್ಷಿಗಳನ್ನು ಕೂಡ ಪ್ರಶ್ನೆಗೊಳಪಡಿಸದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಡೆಯನ್ನು ಗಮನಿಸಲು ಅವರು ವಿಫಲರಾದರು. . ಆರೋಪಿಗಳನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಸೂಕ್ತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ವಿಚಾರಣೆ ಮಾಡುವ ಬದಲು ಆರೋಪಿಗಳಿಗೆ ಅನುಕೂಲವಾಗುವಂತೆ ವರ್ತಿಸಿದರು" ಎಂದು ನ್ಯಾಯಾಲಯ ವಿವರಿಸಿತು.

ಪ್ರಕರಣದ ತನಿಖೆ ಕಳಂಕಿತವಾಗಿದ್ದು ಸಂಸತ್‌ ಸದಸ್ಯ ಸಿಂಗ್‌ ಅವರ ಬಲವಾದ ಹಸ್ತಕ್ಷೇಪ ಇರುವುದನ್ನು ಇದು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.  ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಪ್ರಕರಣದಲ್ಲಿ ಆರ್‌ಜೆಡಿ ನಾಯಕ ಸಿಂಗ್‌ ಹಾಗೂ ಇನ್ನೊಬ್ಬ ಆರೋಪಿ ದೋಷಿಗಳು ಎಂದು ಪ್ರಕಟಿಸಿತು.

[ತೀರ್ಪನ್ನು ಓದಿ]

Attachment
PDF
Harendra_Rai_vs_State_of_Bihar_and_ors.pdf
Preview
Kannada Bar & Bench
kannada.barandbench.com