
ಪುರಸಭೆಗಳು ಮತ್ತು ಪಂಚಾಯತ್‌ಗಳಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಶೇಕಡಾ 42ಕ್ಕೆ ಹೆಚ್ಚಿಸಿ ಸ್ಥಳೀಯ ಸಂಸ್ಥೆಗಳ ಒಟ್ಟು ಮೀಸಲಾತಿಯನ್ನು ಶೇಕಡಾ 67ಕ್ಕೆ ಇಳಿಸುವ ತೆಲಂಗಾಣ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ [ವಂಗಾ ಗೋಪಾಲ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರ ನಡುವಣ ಪ್ರಕರಣ].
ಅರ್ಜಿದಾರರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಅವಕಾಶ ಮಾಡಿಕೊಟ್ಟಿತು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿಗಳಿಗೆ ಶೇ. 42 ರಷ್ಟು ಮೀಸಲಾತಿ ನೀಡುವ ತೆಲಂಗಾಣ ಸರ್ಕಾರದ ಇತ್ತೀಚಿನ ಆದೇಶ ಪ್ರಶ್ನಿಸಿ ವಂಗ ಗೋಪಾಲ್ ರೆಡ್ಡಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಆದೇಶ ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಶೇ. 50ರ ಮೀಸಲಾತಿ ಮಿತಿಗೆ ವಿರುದ್ಧ ಎಂಬುದು ಅವರ ವಾದವಾಗಿತ್ತು.
ಈ ಆದೇಶದ ನಂತರ, ರಾಜ್ಯ ಚುನಾವಣಾ ಆಯೋಗ ಸೆಪ್ಟೆಂಬರ್ 29ರಂದು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿದ್ದು ಅಕ್ಟೋಬರ್ 9ರಿಂದ ನವೆಂಬರ್ 11ರವರೆಗೆ ಐದು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, ಪ್ರಕರಣವನ್ನು ನೇರವಾಗಿ 32ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ತಂದಿರುವುದು ಏಕೆ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು. ಹಿಂದಿನ ಕೆಲವು ಪ್ರಕರಣಗಳಲ್ಲಿ ಇದೇ ರೀತಿಯ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ ಎಂದು ದಾವೆದಾರರ ಪರ ವಕೀಲರು ತಿಳಿಸಿದರು. ಆದರೆ ಈ ಹಿಂದೆ ಇಂಥದ್ದೇ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿರುವುದನ್ನು ನ್ಯಾಯಮೂರ್ತಿಗಳು ಪ್ರಸ್ತಾಪಿಸಿದರು.
ಹೈಕೋರ್ಟ್ ಈಗಾಗಲೇ ಅಕ್ಟೋಬರ್ 8ರಂದು ವಿಚಾರಣೆ ನಿಗದಿಪಡಿಸಿದ್ದು ಬೇರೆ ಅರ್ಜಿದಾರರಿಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ ಎಂಬ ಕಾರಣಕೆ 32ನೇ ವಿಧಿಯಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎನ್ನಲಾಗದು ಎಂದು ನ್ಯಾಯಮೂರ್ತಿ ಸಂದೀಪ್ ಮೇಹ್ತಾ ಹೇಳಿದರು.
ನಂತರ ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯಲು ಸ್ವಾತಂತ್ರ್ಯ ಕೋರಿದರು. ಅದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿತು.