ಮಲಿಕ್, ದೇಶಮುಖ್ ಮತದಾನಕ್ಕೆ ನಕಾರ: ಆದರೆ ಬಂಧಿತ ಶಾಸಕರ ಮತದಾನ ಹಕ್ಕುಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ ಸುಪ್ರೀಂ

ರಾಜ್ಯಸಭೆ ಹಾಗೂ ಎಂಎಲ್‌ಸಿ ಚುನಾವಣೆಗೆ ಮತದಾನ ಮಾಡಲು ಇವರಿಬ್ಬರೂ ಕೋರಿದ್ದ ಅನುಮತಿಯನ್ನು ಬಾಂಬೆ ಹೈಕೋರ್ಟ್‌ ಈ ಹಿಂದೆ ತಿರಸ್ಕರಿಸಿತ್ತು.
Nawab Malik, Anil Deshmukh and Supreme Court
Nawab Malik, Anil Deshmukh and Supreme Court

ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ಜೈಲಿನಿಂದ ತಾತ್ಕಾಲಿಕ ಬಿಡುಗಡೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಸಚಿವ ನವಾಬ್‌ ಮಲಿಕ್‌ ಮತ್ತು ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರಿಗೆ ಮಧ್ಯಂತರ ಪರಿಹಾರ ಒದಗಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಆದರೂ ತನ್ನ ಕ್ಷೇತ್ರದ ಪರವಾಗಿ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮತ ಚಲಾಯಿಸುವ ಶಾಸಕರ (ಎಂಎಲ್‌ಎ) ಹಕ್ಕಿಗೆ ಸಂಬಂಧಿಸಿದಂತೆ ಈ ಪ್ರಕರಣ ಪ್ರಮುಖ ಪ್ರಶ್ನೆ ಎತ್ತುತ್ತದೆ ಎಂದು ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿದೆ.

ಕೈದಿಗಳು ಮತದಾನ ಮಾಡುವುದನ್ನು ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 62(5) ನಿರ್ಬಂಧಿಸುತ್ತದೆ.

Also Read
ಎಂಎಲ್‌ಸಿ ಚುನಾವಣೆ: ಮತದಾನಕ್ಕಾಗಿ ನವಾಬ್‌ ಮಲಿಕ್, ದೇಶಮುಖ್ ಮಾಡಿದ್ದ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್ [ಚುಟುಕು]

ಬೇರೆಯವರಿಂದ ಆಯ್ಕೆಯಾಗಿರುವ ತಾನು ಇನ್ನೊಬ್ಬರನ್ನು ಆಯ್ಕೆ ಮಾಡುವ ಚುನಾಯಿತ ಪ್ರತಿನಿಧಿ ಎಂಬ ವಾದವಿದೆ. ಹಾಗಾಗಿ ಈ ಪ್ರಾತಿನಿಧ್ಯ ಲಕ್ಷಾಂತರ ಮಂದಿಗೆ ಸಂಬಂಧಿಸಿದ್ದು. ಇಂತಹ ಭಿನ್ನತೆಯ ಬಗ್ಗೆ ನಿರ್ಧರಿಸಿಲ್ಲವಾದ್ದರಿಂದ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ನ್ಯಾ. ಧುಲಿಯಾ ಹೇಳಿದರು.

ಈ ಪ್ರಮುಖ ಪ್ರಶ್ನೆಯ ಸಲುವಾಗಿ ನಾವಿದನ್ನು ಆಳವಾಗಿ ಪರಿಗಣಿಸುವ ಅಗತ್ಯವಿದೆ ಎಂದು ನ್ಯಾ. ರವಿಕುಮಾರ್‌ ತಿಳಿಸಿದರು.

Also Read
ರಾಜ್ಯಸಭಾ ಚುನಾವಣೆ: ಮತದಾನಕ್ಕೆ ಕೋರಿದ ಮಲಿಕ್‌ ಮನವಿ ನಿರ್ವಹಣೆಗೆ ಅರ್ಹವಲ್ಲ ಎಂದ ಬಾಂಬೆ ಹೈಕೋರ್ಟ್‌

"ಒಬ್ಬ ವ್ಯಕ್ತಿ ಚುನಾಯಿತನಾಗಿದ್ದಾನೆ ಆದರೆ ಅವನು ಮತ ಚಲಾಯಿಸಲು ಸಾಧ್ಯವಿಲ್ಲ. ಈ ಅಂಶ ಕೊಂಚ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ನಾವು ಈ ಬಗ್ಗೆ ನಾವು ಈಗಲೇ ತೀರ್ಮಾನಿಸಿಲ್ಲ. ಆದರೆ ಇದು ಸ್ವಲ್ಪಮಟ್ಟಿಗೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ" ಎಂದು ನ್ಯಾಯಮೂರ್ತಿ ಧುಲಿಯಾ ವಿವರಿಸಿದರು.

ಹೀಗಾಗಿ, ನೋಟಿಸ್ ನೀಡಲು ಮುಂದಾದ ನ್ಯಾಯಾಲಯ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು.

ಮೇಲ್ಮನವಿದಾರರ ಪರವಾಗಿ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ, ಜಾರಿ ನಿರ್ದೇಶನಾಲಯದ ಪರವಾಗಿ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಆದರೆ ತುರ್ತಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಕಾನೂನು ಪರಿಶೀಲಿಸಲು ಸಮ್ಮತಿಸಿತು.

“ಮೇಲ್ನೋಟಕ್ಕೆ ಪೊಲೀಸ್‌ ವಶದಲ್ಲಿದ್ದಾಗ ನಿಮಗೆ ಅರ್ಹತೆ ಇರುವುದಿಲ್ಲ ನೀವೀಗ ನ್ಯಾಯಾಂಗ ಬಂಧನದಲ್ಲಿದ್ದೀರಿ” ಎಂದು ನ್ಯಾ. ರವಿಕುಮಾರ್‌ ತಿಳಿಸಿದರು.

ಆಗ ನ್ಯಾ. ಧುಲಿಯಾ, ಸೆಕ್ಷನ್ 62ನ್ನು ಓದಿ. ಶಾಸನ ಯಾವುದೇ ತಾರತಮ್ಯ ಮಾಡುವುದಿಲ್ಲ, ನಾವು ಈ ರೀತಿಯ ವಿಷಯಗಳಿಗೆ ನೆಪ ಹೇಳಲು ಸಾಧ್ಯವಿಲ್ಲ. ನೀವು ನಮಗೆ ಸ್ವಲ್ಪ ಹೆಚ್ಚು ಸಮಯ ನೀಡಿದರೆ ಸೂಕ್ತ ಎಂದು ಹೇಳಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವಾಬ್ ಮಲಿಕ್ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಅನಿಲ್ ದೇಶಮುಖ್ ಪ್ರಸ್ತುತ ಸೆರೆವಾಸ ಅನುಭವಿಸುತ್ತಿದ್ದಾರೆ. ರಾಜ್ಯಸಭೆ ಹಾಗೂ ಎಂಎಲ್‌ಸಿ ಚುನಾವಣೆಗೆ ಮತದಾನ ಮಾಡಲು ಇವರಿಬ್ಬರೂ ಕೋರಿದ್ದ ಅನುಮತಿಯನ್ನು ಬಾಂಬೆ ಹೈಕೋರ್ಟ್‌ ಈ ಹಿಂದೆ ತಿರಸ್ಕರಿಸಿತ್ತು.

Kannada Bar & Bench
kannada.barandbench.com