ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ, ಆ ಬಣಕ್ಕೆ 'ಶಿವಸೇನೆ' ಮತ್ತು ಬಿಲ್ಲು ಬಾಣದ ಚಿಹ್ನೆ ಬಳಸಲು ಅನುಮತಿ ನೀಡಿದ ಭಾರತೀಯ ಚುನಾವಣಾ ಆಯೋಗದ (ಇಸಿಐ) ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ [ಉದ್ಧವ್ ಠಾಕ್ರೆ ಮತ್ತು ಏಕನಾಥರಾವ್ ಸಂಭಾಜಿ ಶಿಂಧೆ ಮತ್ತಿತರರ ನಡುವಣ ಪ್ರಕರಣ].
ಚಿಂಚವಾಡ್ ಮತ್ತು ಕಸಬಾ ಪೇಟ್ ಉಪಚುನಾವಣೆಗಳಲ್ಲಿ ಉದ್ಧವ್ ಬಣ 'ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)' ಹೆಸರು ಮತ್ತು ʼಉರಿವ ಪಂಜುʼ ಚಿಹ್ನೆ ಬಳಸಲು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸ್ವಾತಂತ್ರ್ಯ ಕಲ್ಪಿಸಿತು.
"ಇಸಿಐ ಆದೇಶವು ಚಿಹ್ನೆಗೆ ಸೀಮಿತವಾಗಿದೆ. ಈಗ ನಾವು ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಿ ಆದೇಶ ರವಾನಿಸಲು ಸಾಧ್ಯವಿಲ್ಲ. ನಾವು ವಿಶೇಷ ಅನುಮತಿ ಅರ್ಜಿಯನ್ನು ಪುರಸ್ಕರಿಸಿದ್ದೇವೆ. ಇಂದು ಇಸಿಐ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನ್ಯಾಯಾಲಯ ಎರಡು ವಾರಗಳ ಬಳಿಕ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು. ಶಿಂಧೆ ಬಣದ ಪರವಾಗಿ ಇಸಿಐ ಫೆಬ್ರವರಿ 17ರಂದು ನೀಡಿದ್ದ ಆದೇಶ ಪ್ರಶ್ನಿಸಿ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಕಳೆದ ವರ್ಷ ಎರಡು ಬಣಗಳಾಗಿ ಶಿವಸೇನೆ ಇಬ್ಭಾಗವಾಗಿತ್ತು. ಒಂದು ಬಣದ ನೇತೃತ್ವವನ್ನು ಉದ್ಧವ್ ಠಾಕ್ರೆ ಮುನ್ನಡೆಸಿದರೆ ಮತ್ತೊಂದು ಬಣದ ನೇತೃತ್ವವನ್ನು ಏಕನಾಥ್ ಶಿಂಧೆ ವಹಿಸಿದ್ದರು. ಜೂನ್ 2022 ರಲ್ಲಿ ಠಾಕ್ರೆ ಬದಲಿಗೆ ಶಿಂಧೆ ಅವರು ಮುಖ್ಯಮಂತ್ರಿ ಗಾದಿಗೇರಿದ್ದರು.