ಮೊಹರಂ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್

“ನಾವು ಇದಕ್ಕೆ ಅನುಮತಿಸಿದರೆ ಅವ್ಯವಸ್ಥೆ ಸೃಷ್ಟಿಯಾಗಲಿದೆ ಮತ್ತು ಅದಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಕೋವಿಡ್ ಹರಡಲಾಗುತ್ತಿದೆ ಎಂದು ಗುರಿಯಾಗಿಸಲಾಗುತ್ತದೆ. ಅದು ನಮಗೆ ಬೇಕಾಗಿಲ್ಲ” ಎಂದ ನ್ಯಾಯಾಲಯ.
ಮೊಹರಂ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್

ಕೋವಿಡ್ ಸಾಂಕ್ರಾಮಿಕತೆ ಹಾಗೂ ಪರಿಣಾಮಕಾರಿ ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮೊಹರಂ ಮೆರವಣಿಗೆ ನಡೆಸಲು ಕೋರಿದ್ದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿತು.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠವು ಇಡೀ ದೇಶಕ್ಕೆ ಇಂಥದೊಂದು ಸಾಮಾನ್ಯ ಆದೇಶವನ್ನು ಹೊರಡಿಸಲಾಗದು ಎಂದು ಅಭಿಪ್ರಾಯಪಟ್ಟಿತು.

“ನಾವು ಇದಕ್ಕೆ ಅನುಮತಿಸಿದರೆ ಅವ್ಯವಸ್ಥೆ ಸೃಷ್ಟಿಯಾಗಲಿದೆ ಮತ್ತು ಅದಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಕೋವಿಡ್ ಹರಡಲಾಗುತ್ತಿದೆ ಎಂದು ಗುರಿಯಾಗಿಸಲಾಗುತ್ತದೆ. ಅದು ನಮಗೆ ಬೇಕಾಗಿಲ್ಲ”.
ಎಸ್‌ ಎ ಬೊಬ್ಡೆ, ಮುಖ್ಯ ನ್ಯಾಯಮೂರ್ತಿ

ಸದರಿ ಅರ್ಜಿಯಲ್ಲಿ ರಾಜ್ಯ ಸರ್ಕಾರಗಳನ್ನು ಪ್ರತಿವಾದಿಗಳನ್ನಾಗಿಸಲಾಗಿಲ್ಲ ಎನ್ನುವ ಮೂಲಕ ಅರ್ಜಿದಾರರನ್ನು ಎಚ್ಚರಿಸಿದ ನ್ಯಾಯಪೀಠವು ಈ ಪ್ರಕರಣದಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಸಾಮಾನ್ಯ ಆದೇಶ ಹೊರಡಿಸಲಾಗದು ಎಂದಿತು.

ಜಗನ್ನಾಥ ಪೂರಿ ರಥಯಾತ್ರೆ ಮತ್ತು ಮುಂಬೈನ ಜೈನ ದೇವಾಲಯಗಳಲ್ಲಿ ಪರ್ಸೂಯನ್ ನಡೆಸಲು ಅನುಮತಿಸಿದ್ದ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿದ ಅರ್ಜಿದಾರರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಿಜೆಐ ಬೊಬ್ಡೆ ಅವರು ಎರಡೂ ವಿಚಾರಗಳ ನಡುವಿನ ವ್ಯತ್ಯಾಸವನ್ನು ಹೀಗೆ ವಿವರಿಸಿದರು:

“ನೀವು ಜಗನ್ನಾಥ ಪುರಿ ಉದಾಹರಣೆ ನೀಡುತ್ತಿದ್ದೀರಿ. ಅಲ್ಲಿ ಒಂದು ಸ್ಥಳದಲ್ಲಿ ನಿರ್ದಿಷ್ಟ ಮಾರ್ಗದಲ್ಲಿ ರಥ ಎಳೆಯಲಾಗಿತ್ತು. ಅಲ್ಲಿನ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಪುರಿ ಕೇಂದ್ರೀಕರಿಸಿ ನಿರ್ದಿಷ್ಟ ಆದೇಶಗಳನ್ನು ಹೊರಡಿಸಲಾಗಿತ್ತು. ಜೈನ ಮಂದಿರ ವಿಚಾರವು ಮೂರು ದೇವಾಲಯಗಳಿಗೆ ಸಂಬಂಧಿಸಿದ್ದಾಗಿದ್ದು, ಏಕಕಾಲಕ್ಕೆ ಐದು ಮಂದಿ ಮಾತ್ರ ದೇವಾಲಯ ಪ್ರವೇಶಿಸುವುದಾಗಿತ್ತು…”

Also Read
ಬೆಂಗಳೂರು ಗಲಭೆ: ಆಸ್ತಿ ಹಾನಿ ಪ್ರಮಾಣ ಅರಿಯಲು ‘ಕ್ಲೇಮ್ಸ್‌ ಕಮಿಷನರ್’ ನೇಮಿಸುವಂತೆ ಸರ್ಕಾರದಿಂದ ಹೈಕೋರ್ಟ್‌ ಗೆ ಮನವಿ

ಒಂದೇ ಸ್ಥಳದಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಅರ್ಜಿಯಲ್ಲಿ ಕೋರಿದ್ದರೆ ಸಾಂಕ್ರಾಮಿಕತೆ ವ್ಯಾಪಿಸುವ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಬಹುದಿತ್ತು. ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶದಲ್ಲಿರುವುದರಿಂದ ಸಾಮಾನ್ಯ ಆದೇಶವನ್ನು ದೇಶಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಲಾಗದು ಎಂದ ನ್ಯಾಯಾಲಯವು ಹೀಗೆ ಹೇಳಿತು.

“ನಾವು, ನ್ಯಾಯಾಲಯದವರು ಜನರ ಆರೋಗ್ಯವನ್ನು ಅಪಾಯಕ್ಕೆ ನೂಕಲಾಗದು”.

ಲಖನೌ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಯಾ ಸಮುದಾಯದವರು ಇರುವುದರಿಂದ ಅಲ್ಲಿ ಮೆರವಣಿಗೆ ನಡೆಸಲು ಅನುವು ಮಾಡಿಕೊಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದಾಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಪೀಠವು ಸೂಚಿಸಿತು. ಅರ್ಜಿಯಲ್ಲಿ ಎಲ್ಲಾ ರಾಜ್ಯಗಳನ್ನು ಪ್ರತಿವಾದಿಗಳನ್ನಾಗಿಸುವಂತೆ ವಾರದ ಆರಂಭದಲ್ಲಿ ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com