
ವಿಕಿಪೀಡಿಯಾದಲ್ಲಿರುವ 'ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ ವರ್ಸಸ್ ವಿಕಿಮೀಡಿಯ ಫೌಂಡೇಶನ್' ಎಂಬ ಶೀರ್ಷಿಕೆಯ ಪುಟವನ್ನು ತೆಗೆದುಹಾಕುವಂತೆ ವಿಕಿಮೀಡಿಯ ಫೌಂಡೇಶನ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ದೆಹಲಿ ಹೈಕೋರ್ಟ್‌ನಲ್ಲಿ ವಿಕಿಪೀಡಿಯಾ ವಿರುದ್ಧ ಎಎನ್‌ಐ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಕುರಿತಾದ ವಿಚಾರಣೆಯ ವಿವರಗಳನ್ನು ಆಕ್ಷೇಪಿಸಲಾದ ಪುಟವು ಹೊಂದಿದೆ. ಕಳೆದ ವರ್ಷ ಹೈಕೋರ್ಟ್ ಈ ಪುಟಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ನ್ಯಾಯಾಲಯದ ಅವಲೋಕನಗಳ ಕುರಿತು ಚರ್ಚೆಯು ನ್ಯಾಯಾಲಯದ ತಿರಸ್ಕಾರಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿತ್ತು.
ಅದರೆ, ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು ಪುಟ ತೆಗೆದುಹಾಕುವಂತೆ ಹೈಕೋರ್ಟ್ ಹೊರಡಿಸಿದ ಆದೇಶದ ವಿರುದ್ಧ ವಿಕಿಪೀಡಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿತು. ಇದೇ ವೇಳೆ, ಕೆಲವೊಂದು ಪ್ರಮುಖ ಅವಲೋಕನಗಳನ್ನು ತನ್ನ ಆದೇಶದಲ್ಲಿ ಮಾಡಿತು.
ಹೈಕೋರ್ಟ್ ಹೊರಡಿಸಿದ ನಿರ್ದೇಶನವನ್ನು ಹೊರಡಿಸಬಾರದಿತ್ತು ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದು ಪೀಠವು ಹೇಳಿತು.
"ಅಂತಹ ಆದೇಶವು (ಹೈಕೋರ್ಟ್ ಆದೇಶವು) ಅಗತ್ಯತೆ ಮತ್ತು ಪ್ರಮಾಣಾನುಗುಣತೆ ಎನ್ನುವ ಎರಡು ಅವಳಿ ಪರೀಕ್ಷೆಗಳಿಗೆ ಒಳಪಟ್ಟಿರಬೇಕು. ನ್ಯಾಯದಾನಕ್ಕೆ ಗಂಭೀರವಾದ ಪೂರ್ವಾಗ್ರಹ ಉಂಟು ಮಾಡುವಂತಹ ಅಥವಾ ವಿಚಾರಣೆಯ ನ್ಯಾಯಸಮ್ಮತತೆಗೆ ಪೂರ್ವಾಗ್ರಹ ಉಂಟು ಮಾಡುವಂತಹ ಪ್ರಕರಣಗಳಲ್ಲಿ ಮಾತ್ರವೇ ಅದನ್ನು ಅನ್ವಯಿಸಬೇಕು," ಎಂದು ಪೀಠವು ಹೇಳಿತು.
ಇದೇ ವೇಳೆ ನ್ಯಾಯಾಲಯವು, "ನರೇಶ್ ಶ್ರೀಧರ್ ಮಿರಾಜ್ಕರ್ ಪ್ರಕರಣದಲ್ಲಿ ಒಂಬತ್ತು ನ್ಯಾಯಾಧೀಶರ ಪೀಠದ ತೀರ್ಪಿನ ಮೂಲಕ ಈ ನ್ಯಾಯಾಲಯವು ವ್ಯಕ್ತಪಡಿಸಿದ ಅರ್ಥಪೂರ್ಣ ಮಾತುಗಳನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬಹುದು. ಸಾರ್ವಜನಿಕ ಪರಿಶೀಲನೆ ಮತ್ತು ನೋಟಕ್ಕೆ ಒಳಪಟ್ಟು ನಡೆಯುವ ವಿಚಾರಣೆಯು ಸ್ವಾಭಾವಿಕವಾಗಿ ನ್ಯಾಯಾಂಗದ ವಿಕ್ಷಿಪ್ತತೆಯ ವಿರುದ್ಧದ ತಡೆಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ನ್ಯಾಯದಾನದಲ್ಲಿನ ನ್ಯಾಯಸಮ್ಮತತೆ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕ ಮತ್ತು ಮುಕ್ತ ಸಂಸ್ಥೆಗಳಾಗಿ ನ್ಯಾಯಾಲಯಗಳು ಯಾವಾಗಲೂ ಸಾರ್ವಜನಿಕ ಅವಲೋಕನಗಳು, ಚರ್ಚೆಗಳು ಮತ್ತು ಟೀಕೆಗಳಿಗೆ ಮುಕ್ತವಾಗಿರಬೇಕು. ವಾಸ್ತವವಾಗಿ, ನ್ಯಾಯಾಲಯಗಳು ಚರ್ಚೆಗಳು ಮತ್ತು ರಚನಾತ್ಮಕ ಟೀಕೆಗಳನ್ನು ಸ್ವಾಗತಿಸಬೇಕು. ಚರ್ಚೆಯ ವಿಷಯವು ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದ್ದರೂ ಸಹ, ಪ್ರತಿಯೊಂದು ಪ್ರಮುಖ ವಿಷಯವನ್ನು ಜನರು ಮತ್ತು ಪತ್ರಿಕೆಗಳು ಕಟ್ಟುನಿಟ್ಟಾಗಿ ಚರ್ಚಿಸಬೇಕಾಗುತ್ತದೆ" ಎಂದು ತಿಳಿಸಿತು.
ಮುಂದುವರೆದು, "ಆದಾಗ್ಯೂ, ಟೀಕೆ ಮಾಡುವವರು ನ್ಯಾಯಾಧೀಶರು ಅಂತಹ ಟೀಕೆಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಒಂದೊಮ್ಮೆ ಯಾವುದೇ ವರದಿ ನ್ಯಾಯಾಲಯ ಅಥವಾ ನ್ಯಾಯಾಧೀಶರನ್ನು ವಿವಾದಕ್ಕೆಳೆಸಿದರೆ ಅಗ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಆರನೇ ತತ್ವದಲ್ಲಿ ಎತ್ತಿ ತೋರಿಸಿದಂತೆ ನ್ಯಾಯಾಂಗ ನಿಂದನೆಯ ಪ್ರಕರಣವು ಹೂಡಲ್ಪಟ್ಟರೆ, ಖಂಡಿತವಾಗಿಯೂ ನ್ಯಾಯಾಲಯಗಳು ಕ್ರಮ ಕೈಗೊಳ್ಳಬೇಕು. ಇದರ ಹೊರತಾಗಿ ಮಾಧ್ಯಮಗಳಿಗೆ, ಇದನ್ನು ತೆಗೆದುಹಾಕಿ, ಅದನ್ನು ತೆಗೆದುಹಾಕಿ ಎಂದೆಲ್ಲಾ ಹೇಳುವುದು ನ್ಯಾಯಾಲಯದ ಕರ್ತವ್ಯವಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಉದಾರವಾದಿ ಪ್ರಜಾಪ್ರಭುತ್ವವು ಏಳಿಗೆ ಹೊಂದಲು, ನ್ಯಾಯಾಂಗ ಮತ್ತು ಮಾಧ್ಯಮಗಳೆರಡೂ ಪರಸ್ಪರ ಪೂರಕವಾಗಿರಬೇಕು.
ಸುಪ್ರೀಂ ಕೋರ್ಟ್
ಮಾಧ್ಯಮಗಳು ಸೂಕ್ತ ವಿಚಾರಣೆಗಳಡಿ ಅಂತಹ ಆದೇಶಗಳನ್ನು ಪ್ರಶ್ನಿಸಲು ಮುಕ್ತವಾಗಿರುತ್ತವೆ ಎಂದು ನ್ಯಾಯಾಲಯವು ತಿಳಿಸಿತು.
ಇದೇ ವೇಳೆ, ಉದಾರವಾದಿ ಪ್ರಜಾಪ್ರಭುತ್ವದಲ್ಲಿ, ನ್ಯಾಯಾಂಗ ಮತ್ತು ಮಾಧ್ಯಮಗಳು ಪರಸ್ಪರ ಬೆಂಬಲಪೂರ್ವಕವಾಗಿರಬೇಕು ಎಂದು ನ್ಯಾಯಾಲಯವು ಒತ್ತಿಹೇಳಿತು.
"ನ್ಯಾಯಾಂಗ ಸೇರಿದಂತೆ ಯಾವುದೇ ವ್ಯವಸ್ಥೆಯ ಸುಧಾರಣೆಗೆ ಆತ್ಮಾವಲೋಕನ ಮುಖ್ಯ. ನ್ಯಾಯಾಲಯದ ಮುಂದಿರುವ ವಿಷಯಗಳ ಬಗ್ಗೆಯೂ ಸಹ ಬಲವಾದ ಚರ್ಚೆ ನಡೆದರೆ ಮಾತ್ರ ಅದು ಸಾಧ್ಯ. ನ್ಯಾಯಾಂಗ ಮತ್ತು ಮಾಧ್ಯಮ ಎರಡೂ ಪ್ರಜಾಪ್ರಭುತ್ವದ ಅಡಿಪಾಯ ಸ್ತಂಭಗಳಾಗಿವೆ, ಇದು ನಮ್ಮ ಸಂವಿಧಾನದ ಮೂಲ ಲಕ್ಷಣವಾಗಿದೆ. ಉದಾರವಾದಿ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದಲು, ಎರಡೂ ಪರಸ್ಪರ ಪೂರಕವಾಗಿರಬೇಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಖಿಲ್ ಸಿಬಲ್ ಮತ್ತು ಟ್ರೈಲೀಗಲ್ ಕಾನೂನು ಸಂಸ್ಥೆಯ ವಕೀಲರಾದ ನಿಖಿಲ್ ನರೇಂದ್ರನ್ ಮತ್ತು ಟೀನಾ ಅಬ್ರಹಾಂ ವಿಕಿಪೀಡಿಯಾ ಪ್ರತಿನಿಧಿಸಿದರು. ವಕೀಲ ಸಿದ್ಧಾಂತ್ ಕುಮಾರ್ ಎಎನ್‌ಐ ಪರವಾಗಿ ಹಾಜರಾದರು.