ಪೌರತ್ವ ಪಡೆದ ವಲಸಿಗರ ಸಂಖ್ಯೆ, ಅಕ್ರಮ ವಲಸೆ ತಡೆಗೆ ಕೈಗೊಂಡ ಕ್ರಮದ ವಿವರ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಅಸ್ಸಾಂ ಸೇರಿದಂತೆ ಭಾರತದೊಳಗೆ ನುಸುಳುತ್ತಿರುವ ಅಕ್ರಮ ವಲಸಿಗರ ಅಂದಾಜು ಪ್ರಮಾಣ ಮತ್ತು ಅಕ್ರಮ ವಲಸೆ ತಡೆಯಲು ಕೈಗೊಂಡ ಕ್ರಮಗಳ ವಿವರ ನೀಡುವಂತೆ ನ್ಯಾಯಾಲಯ ಕೇಳಿದೆ.
ಸುಪ್ರೀಂ ಕೋರ್ಟ್, ಅಸ್ಸಾಂ
ಸುಪ್ರೀಂ ಕೋರ್ಟ್, ಅಸ್ಸಾಂ

ಪೌರತ್ವ ಕಾಯಿದೆ 1955ರ ಸೆಕ್ಷನ್ 6 ಎ (2) ಮೂಲಕ ಭಾರತೀಯ ಪೌರತ್ವ ಪಡೆದ ವಲಸಿಗರ ಸಂಖ್ಯೆಯ ವಿವರ ನೀಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ದೇಶಕ್ಕೆ ಅಕ್ರಮವಾಗಿ ವಲಸೆ ಬರುವುದನ್ನು ತಡೆಯಲು ಇದುವರೆಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೂಡ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.

ಪೌರತ್ವ ಕಾಯಿದೆಯ ಸೆಕ್ಷನ್ 6 ಎಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿದೆ.

ಅಸ್ಸಾಂ ಒಪ್ಪಂದದ ವ್ಯಾಪ್ತಿಗೆ ಬರುವ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸೆಕ್ಷನ್ 6ಎ ಸಂಬಂಧಿಸಿದೆ. ಸೆಕ್ಷನ್ 6ಎ ಪ್ರಕಾರ, ಜನವರಿ 1, 1966 ಮತ್ತು ಮಾರ್ಚ್ 25, 1971ರ ನಡುವೆ ಭಾರತಕ್ಕೆ ಪ್ರವೇಶಿಸಿ ಅಸ್ಸಾಂನಲ್ಲಿ ವಾಸಿಸುತ್ತಿರುವ ಜನರು ತಮ್ಮನ್ನು ಭಾರತದ ಪ್ರಜೆಗಳಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ಪ್ರಕರಣದಲ್ಲಿ ಹೊರಬರುವ ತೀರ್ಪು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್‌ಸಿ) ಪಟ್ಟಿಯ ಮೇಲೆ ಪರಿಣಾಮ ಬೀರುತ್ತದೆ.

ಸೆಕ್ಷನ್‌ ಸೆಕ್ಷನ್ 6ಎ ಸಾಂವಿಧಾನಿಕತೆ ಪ್ರಶ್ನಿಸಿ ಮತ್ತು ಇದರಿಂದ ಅಸ್ಸಾಂನಲ್ಲಿ ಅಕ್ರಮ ವಲಸೆಯ ಸಮಸ್ಯೆ ಇನ್ನಷ್ಟು ಹದಗೆಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಅರ್ಜಿಗಳನ್ನು ಇನ್ನಷ್ಟು ಪರಿಶೀಲಿಸಲು ಅನುವಾಗುವಂತೆ ವಿವಿಧ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದರೇಶ್,  ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಕೇಂದ್ರಕ್ಕೆ ಸೂಚಿಸಿದೆ. ಈ ಕೆಳಗಿನ ವಿಚಾರಗಳಿಗೆ ಸಂಬಂಧಿಸಿದಂತೆ ಅದು ಮಾಹಿತಿ ಬಯಸಿದೆ:

1. ಪೌರತ್ವ ಕಾಯಿದೆಯ ಸೆಕ್ಷನ್ 6 ಎ(2)ರ ಅಡಿಯಲ್ಲಿ ಪೌರತ್ವ ಪಡೆದ ವ್ಯಕ್ತಿಗಳ ಸಂಖ್ಯೆ, ಅಂದರೆ ಜನವರಿ 1, 1966ರಿಂದ ಮಾರ್ಚ್ 25, 1971ರ ನಡುವೆ ವಲಸೆ ಬಂದವರ ಪ್ರಮಾಣ.

2. ಮೇಲಿನ ಅವಧಿಗೆ ಸಂಬಂಧಿಸಿದಂತೆ ವಿದೇಶಿಗರ ನ್ಯಾಯ ಮಂಡಳಿಗಳು ನೀಡಿರುವ ಆದೇಶಗಳ ಪ್ರಕಾರ ಎಷ್ಟು ವಿದೇಶಿಯರನ್ನು ಪತ್ತೆಹಚ್ಚಲಾಗಿದೆ?

3. ಅಸ್ಸಾಂ ಸೇರಿದಂತೆ ಭಾರತದೊಳಗೆ ನುಸುಳುತ್ತಿರುವ ಅಕ್ರಮ ವಲಸಿಗರ ಅಂದಾಜು ಪ್ರಮಾಣ.

4. ಮಾರ್ಚ್ 25, 1971ರ ನಂತರ ಭಾರತಕ್ಕೆ ಪ್ರವೇಶಿಸಿದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ, (ಎ) ಕೇಂದ್ರ ಸರ್ಕಾರ ಸ್ಥಾಪಿಸಿದ ಒಟ್ಟು ವಿದೇಶಿಯರ ನ್ಯಾಯ ಮಂಡಳಿಗಳ ಸಂಖ್ಯೆ, (ಬಿ) ವಿಲೇವಾರಿ ಮಾಡಿದ ಒಟ್ಟು ಪ್ರಕರಣಗಳ ಸಂಖ್ಯೆ, (ಸಿ) ಇಲ್ಲಿಯವರೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ, (ಡಿ) ಪ್ರಕರಣಗಳ ವಿಲೇವಾರಿಗೆ ತೆಗೆದುಕೊಂಡ ಸರಾಸರಿ ಸಮಯ ಮತ್ತು (ಇ) ಈ ಬಗ್ಗೆ ಗುವಾಹಟಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ.

5. ಭಾರತದ ಭೂಪ್ರದೇಶಕ್ಕೆ, ವಿಶೇಷವಾಗಿ ಈಶಾನ್ಯ ರಾಜ್ಯಗಳಿಗೆ ಅಕ್ರಮ ವಲಸೆಯನ್ನು ಎದುರಿಸಲು ಆಡಳಿತಾತ್ಮಕ ಮಟ್ಟದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು.

ಈ ಅಂಶಗಳ ಬಗ್ಗೆ ಕೇಂದ್ರ ಮತ್ತು ಅಸ್ಸಾಂ ಸರ್ಕಾರ ಪ್ರತಿಕ್ರಿಯೆ ನೀಡಿರುವುದರ ಸಾಮಾನ್ಯ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪೌರತ್ವ ಕಾಯಿದೆಯ ಸೆಕ್ಷನ್ 6 ಎ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ.

[ವಿಚಾರಣೆಯ ನೇರ ಪ್ರಸಾರದ ಮಾಹಿತಿಯನ್ನು ಇಲ್ಲಿ ಓದಿ]

Related Stories

No stories found.
Kannada Bar & Bench
kannada.barandbench.com