ಮಂಗಳೂರಿನಲ್ಲಿ ಕೇರಳ ವೈದ್ಯಕೀಯ ವಿದ್ಯಾರ್ಥಿಯೊಬ್ಬರ ಸಾವಿನ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಆದೇಶಿಸಿದೆ [ ಎಂ ಎಸ್ ರಾಧಾಕೃಷ್ಣನ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಕರ್ನಾಟಕದ ಅಪರಾಧ ತನಿಖಾ ದಳ ಸಿಐಡಿಯಿಂದ ಸಿಬಿಐಗೆ ತನಿಖೆ ವರ್ಗಾಯಿಸುವಂತೆ ಸೂಚಿಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎಂ ಎಂ ಸುಂದ್ರೇಶ್ ನೇತೃತ್ವದ ಪೀಠ ಮೃತ ವಿದ್ಯಾರ್ಥಿಯ ತಂದೆಗೆ ದಂಡದ ರೂಪದಲ್ಲಿ ₹ 1 ಲಕ್ಷ ಪಾವತಿಸಬೇಕು ಎಂದು ಸಿಐಡಿಗೆ ಆದೇಶಿಸಿದೆ.
ಈ ಹಿಂದೆ ನ್ಯಾಯಾಲಯ ವಿವಿಧ ಆದೇಶಗಳನ್ನು ನೀಡಿದ್ದರೂ ಮೃತ ವಿದ್ಯಾರ್ಥಿ ವಿರುದ್ಧ ಅತಿವೇಗದ ವಾಹನ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ದೋಷಾರೋಪ ಪಟ್ಟಿ ಸಲ್ಲಿಸಿದ್ದನ್ನು ಹೊರತುಪಡಿಸಿದರೆ ತನಿಖೆ ಪ್ರಗತಿ ಕಂಡಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.
ತನಿಖಾ ಸಂಸ್ಥೆ ಅಭಿಪ್ರಾಯಪಟ್ಟಿರುವಂತೆ ಇದು ಸರಳ ಅಪಘಾತ ಪ್ರಕರಣವಲ್ಲ ಎಂಬುದು “ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖಾ ಸಂಸ್ಥೆಯಾಗಿರುವ ಬೆಂಗಳೂರಿನ ಸಿಐಡಿ ನಡೆಸಿದ ತನಿಖೆ ಬಗ್ಗೆ ನಮಗೆ ಯಾವುದೇ ತೃಪ್ತಿ ಇಲ್ಲ. ಸತ್ಯ ಹೊರಬರಬೇಕು” ಎಂದ ನ್ಯಾಯಾಲಯ ಮೃತ ವಿದ್ಯಾರ್ಥಿ ವಿರುದ್ಧದ ಆರೋಪ ಪಟ್ಟಿಯನ್ನು ರದ್ದುಗೊಳಿಸಿತು.
ಮಂಗಳೂರಿನ ಎ ಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಕೇರಳ ಮೂಲದ ರೋಹಿತ್ ಅವರ ರುಂಡವಿಲ್ಲದ ದೇಹ ಮಾರ್ಚ್ 23, 2014 ರಂದು ತಣ್ಣೀರಭಾವಿ ಬಳಿ ಪತ್ತೆಯಾಗಿತ್ತು.
ಅಪಘಾತದಿಂದ ಸಾವು ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೃತ ವಿದ್ಯಾರ್ಥಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಮತ್ತು ಸಿಬಿಐ ತನಿಖೆ ಕೋರಿ ವಿದ್ಯಾರ್ಥಿಯ ತಂದೆ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಛಾಯಾಚಿತ್ರ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಇದು ಮೇಲ್ನೋಟಕ್ಕೆ ಸರಳ ಅಪಘಾತ ಪ್ರಕರಣವಲ್ಲ. ಸಿಐಡಿ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದ ಕಾರಣ ಸಂಪೂರ್ಣ ಮತ್ತು ಸರಿಯಾದ ತನಿಖೆ ಕೈಗೊಳ್ಳಬೇಕು. "ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸಿ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಸಿಬಿಐಗೆ ವರ್ಗಾಯಿಸಲು ಇದು ಸೂಕ್ತವಾದ ಪ್ರಕರಣವಾಗಿದೆ" ಎಂದು ಆದೇಶಿಸಿತು.
ಪ್ರತಿ ಎರಡು ತಿಂಗಳಿಗೊಮ್ಮೆ ಕರ್ನಾಟಕ ಹೈಕೋರ್ಟ್‌ಗೆ ತನಿಖೆಯ ಪ್ರಗತಿಯ ಸ್ಥಿತಿಗತಿ ವರದಿಯನ್ನು ಸಿಬಿಐ ಸಲ್ಲಿಸಬೇಕು. ತಂದೆ ನ್ಯಾಯಕ್ಕಾಗಿ ಕಾಯುತ್ತಿರುವ ಕಾರಣ ಸಿಬಿಐ ತನ್ನ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಪೀಠ ಸೂಚಿಸಿದೆ.
ವಕೀಲರಾದ ಜೋಗಿ ಸ್ಕಾರಿಯಾ, ಬೀನಾ ವಿಕ್ಟರ್, ರವಿ ಲೋಮೋದ್, ಕೀರ್ತಿಪ್ರಿಯನ್ ಇ, ಎಂ ಪ್ರಿಯಾ, ವರ್ಷಾ ಅವಾನಾ ಮತ್ತು ವಿನೋತ್ ಯಾದವ್ ಅರ್ಜಿದಾರರ ಪರ ವಾದ ಮಂಡಿಸಿದರು. ಪ್ರತಿವಾದಿಗಳನ್ನು ವಕೀಲರಾದ ಶುಭ್ರಾಂಶು ಪಾಧಿ, ವಿಶಾಲ್ ಬನ್ಸಾಲ್, ರಾಜೇಶ್ವರಿ ಶಂಕರ್, ನಿರೂಪ್ ಸುಕೀರ್ತಿ ಮತ್ತು ಮೊಹಮ್ಮದ್ ಓವೈಸ್ ಪ್ರತಿನಿಧಿಸಿದ್ದರು.
ಭಯಾನಕ ಘಟನೆ
ಮಂಗಳೂರಿನ ಕಡಲ ಕಿನಾರೆ ತಣ್ಣೀರಬಾವಿ ರಸ್ತೆಯಲ್ಲಿ ಮಾರ್ಚ್ 23, 2014ರಂದು ರಾತ್ರಿ ಕೇರಳದ ಪಟ್ಟಣಂತಿಟ್ಟ ನಿವಾಸಿ ರೋಹಿತ್ ರಾಧಾಕೃಷ್ಣನ್ (22) ಅವರ ಶಿರವಿಲ್ಲದ ದೇಹ ಅಪಘಾತಗೊಂಡ ಸ್ಥಿತಿಯಲ್ಲಿ ದೊರೆತಿತ್ತು.
ತಡರಾತ್ರಿ ಗೆಳೆಯರೊಂದಿಗೆ ರೋಹಿತ್ ಬೀಚ್‌ಗೆ ಹೊರಟಿದ್ದರು. ಗೆಳೆಯರು ನಗರದ ಹೋಟೆಲ್ ಒಂದರಲ್ಲಿ ಬಿರಿಯಾನಿ ಮತ್ತಿತರ ವಸ್ತುಗಳನ್ನು ಖರೀದಿಸಿದ್ದರು. ಸ್ನೇಹಿತರಿಬ್ಬರು ಬೇರೆ ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ಆದರೆ ಮುಂದೆ ಸಾಗಿದ್ದ. ರೋಹಿತ್ ಮೊಬೈಲ್ ತೆಗೆದುಕೊಂಡು ಹೋಗದ ಕಾರಣ ಗೆಳೆಯರ ಸಂಪರ್ಕಕ್ಕೆ ಬಂದಿರಲಿಲ್ಲ. ಮರುದಿನ ಬೆಳಿಗ್ಗೆ ದುರ್ಘಟನೆ ಬೆಳಕಿಗೆ ಬಂದಿತ್ತು.
ಅಪಘಾತವಾದ ಸ್ಥಳದಿಂದ ಬೈಕ್ ಮತ್ತು ದೇಹ ಹಲವು ಮೀಟರ್ ದೂರಕ್ಕೆ ಹಾರಿದ್ದವು. ಎರಡು ಮರಗಳಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ದೇಹ ಮರಕ್ಕೆ ತಾಗಿ ಜರ್ಝರಿತವಾಗಿತ್ತು. ಶಿರ ದೇಹದಿಂದ ಬೇರ್ಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದರು. ಅಂದಿನ ನಗರ ಪೊಲೀಸ್ ಕಮಿಷನರ್ ಆರ್ ಹಿತೇಂದ್ರ ತನಿಖೆಗೆ ಮಾರ್ಗದರ್ಶನ ನೀಡಿದ್ದರು. ಅತಿವೇಗದ ಹೊರತಾಗಿ ದುರ್ಘಟನೆಗೆ ಬೇರೆ ಕಾರಣಗಳಿಲ್ಲ ಎಂದು ಸ್ಥಳೀಯ ಪೊಲೀಸರು ಅಭಿಪ್ರಾಯಪಟ್ಟಿದ್ದರು.
ರೋಹಿತ್ ಅವರ ತಂದೆ ಎಂ ಎಸ್ ರಾಧಾಕೃಷ್ಣನ್ ವೃತ್ತಿಯಿಂದ ವಕೀಲರಾಗಿದ್ದು ಅವರ ತಾಯಿ ಬಹ್ರೈನ್‌ನಲ್ಲಿ ವೈದ್ಯೆ. ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ರಾಧಾಕೃಷ್ಣನ್ ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಸಿಐಡಿ ತನಿಖೆಯ ನೇತೃತ್ವ ವಹಿಸಿತ್ತು. ಆದರೆ ಸಿಐಡಿ ತನಿಖಾ ವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಧಾಕೃಷ್ಣನ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಸಲ್ಲಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]