ಗೃಹಬಂಧನಕ್ಕೆ ಸಂಬಂಧಿಸಿದ ಭದ್ರತಾ ವೆಚ್ಚ: ₹8 ಲಕ್ಷ ನೀಡುವಂತೆ ನವಲಖಾಗೆ ಸುಪ್ರೀಂ ಸೂಚನೆ

ನವಲಖಾ ಅವರನ್ನು ಕಳೆದ ವರ್ಷ ಜೈಲಿನಿಂದ ಒಂದು ತಿಂಗಳ ಅವಧಿಗೆ ಗೃಹಬಂಧನಕ್ಕೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಅನುಮತಿಸಿತ್ತು. ಭದ್ರತಾ ವೆಚ್ಚಕ್ಕಾಗಿ ₹ 2.4 ಲಕ್ಷ ಠೇವಣಿ ಇರಿಸಲು ಸೂಚಿಸಿತ್ತು.
Gautam Navlakha and Supreme Court
Gautam Navlakha and Supreme Court

ಗೃಹಬಂಧನದ ಅವಧಿಯ ಭದ್ರತಾ ವೆಚ್ಚವಾಗಿ ಮಹಾರಾಷ್ಟ್ರ ಪೊಲೀಸರಿಗೆ ಹೆಚ್ಚುವರಿಯಾಗಿ ₹8 ಲಕ್ಷ ನೀಡುವಂತೆ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ [ಗೌತಮ್ ನವಲಾಖಾ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತಿತರರ ನಡುವಣ ಪ್ರಕರಣ].

ಜೊತೆಗೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಪ್ರತಿ ಅಫಿಡವಿಟ್ ಸಲ್ಲಿಸಲು ತನಿಖಾ ಸಂಸ್ಥೆ ಎನ್‌ಐಎಗೆ  ಎರಡು ವಾರಗಳ ಕಾಲಾವಕಾಶ ನೀಡಿದೆ.

ಜೈಲಿನಿಂದ ತಮ್ಮನ್ನು ಒಂದು ತಿಂಗಳ ಅವಧಿಗೆ ಗೃಹಬಂಧನಕ್ಕೆ ಸ್ಥಳಾಂತರಿಸಲು ನವಲಖಾ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 10ರಂದು ಅನುಮತಿಸಿತ್ತು. ಅಂದಿನ ಆದೇಶದಲ್ಲಿ, ಭದ್ರತಾ ವೆಚ್ಚಕ್ಕಾಗಿ ₹ 2.4 ಲಕ್ಷ ಠೇವಣಿ ಇರಿಸಲು ನ್ಯಾಯಾಲಯವು ನವಲಖಾ ಅವರಿಗೆ ಸೂಚಿಸಿತ್ತು.

ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ ಸಂಘಟನೆಯ ಮಾಜಿ ಕಾರ್ಯದರ್ಶಿ ನವಲಖಾ ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. ಆರಂಭದಲ್ಲಿ ಗೃಹಬಂಧನದಲ್ಲಿರಿಸಿದ್ದ ಅವರನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಏಪ್ರಿಲ್ 2020ರಲ್ಲಿ ಮಹಾರಾಷ್ಟ್ರದ ತಲೋಜಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಡಿಫಾಲ್ಟ್‌ ಜಾಮೀನಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಅವಲಂಬಿಸಿ ನವಲಖಾ ಅವರು ತಲೋಜಾ ಕಾರಾಗೃಹದಲ್ಲಿ ಮೂಲಭೂತ ವೈದ್ಯಕೀಯ ನೆರವು ಮತ್ತಿತರ ಅಗತ್ಯತೆಗಳನ್ನು ನಿರಾಕರಿಸುತ್ತಿದ್ದು ತಮಗೆ ವಯಸ್ಸಾಗಿರುವುದರಿಂದ ಅಲ್ಲಿರುವುದು ಕಷ್ಟವಾಗುತ್ತಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Also Read
ಗೌತಮ್ ನವಲಖಾ ಭದ್ರತಾ ಪಡೆಗಳ ಮೇಲೆ ದಾಳಿಗೈದ ನಿಷೇಧಿತ ಉಗ್ರ ಸಂಘಟನೆಯ ಸಕ್ರಿಯ ಸದಸ್ಯ ಎಂದ ಮುಂಬೈ ನ್ಯಾಯಾಲಯ

ಬಾಂಬೆ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಪರಿಣಾಮ ನವಲಖಾ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಇದೇ ವೇಳೆ ಸುರಕ್ಷತೆಗೆ ಸಂಬಂಧಿಸಿದಂತೆ ವಿವಿಧ ಷರತ್ತುಗಳನ್ನು ವಿಧಿಸಿತ್ತು. ಈ ಆದೇಶ ಇಲ್ಲಿಯವರೆಗೂ ಜಾರಿಯಲ್ಲಿತ್ತು.

ಶುಕ್ರವಾರದ ವಿಚಾರಣೆಯಲ್ಲಿ ಹಿರಿಯ ನ್ಯಾಯವಾದಿ ನಿತ್ಯಾ ರಾಮಕೃಷ್ಣನ್ ಅವರು ನವಲಖಾ ಅವರಿಗೆ ದಿನಂಪ್ರತಿ 45 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಆಗ ಎನ್‌ಐಎಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಅವರು ತನಿಖಾ ಸಂಸ್ಥೆಯಿಂದ ತಾವು ಈ ವಿಚಾರವಾಗಿ ಸೂಚನೆ ಪಡೆಯುವ ಅಗತ್ಯವಿದೆ ಎಂದು ಹೇಳಿದರು.

ಎಎಸ್‌ಜಿ ಉತ್ತರಕ್ಕೆ ತಟ್ಟನೆ ಪ್ರತಿಕ್ರಿಯಿಸಿದ ನ್ಯಾ. ಜೋಸೆಫ್‌ ಅವರು “ನಡಿಗೆಗಾಗಿ ನೀವು ಸೂಚನೆ ಪಡೆಯಬೇಕೆ? ಹಾಗೆ ನೋಡಿದರೆ, ನವಲಖಾ ಅವರು ಪೊಲೀಸರಿಗೆ ಉಪಕಾರ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಅವರೆಲ್ಲಾ ಈಗಿರುವ ಆಕಾರದಲ್ಲಿರುತ್ತಿರಲಿಲ್ಲ” ಎಂದು ಚಟಾಕಿ ಹಾರಿಸಿದರು.

ಮುಂದಿನ ವಿಚಾರಣೆಯ ದಿನವಾದ ಮೇ 15ರಂದು ಮನವಿಯನ್ನು ಪರಿಗಣಿಸುವುದಾಗಿ ಪೀಠ  ಸೂಚಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Gautam_Navlakha_vs_NIA___anr.pdf
Preview

Related Stories

No stories found.
Kannada Bar & Bench
kannada.barandbench.com