ಈ ಹಿಂದಿನ ಶಿವಸೇನೆ ಪಕ್ಷದ ಬಂಡಾಯ ಸದಸ್ಯರ ವಿರುದ್ಧದ ಅನರ್ಹತೆ ಪ್ರಕರಣದ ಕುರಿತಾದ ತೀರ್ಪನ್ನು ಡಿಸೆಂಬರ್ 31, 2023 ರೊಳಗೆ ಮತ್ತು ಎನ್‌ಸಿಪಿ ಶಾಸಕರ ವಿರುದ್ಧ ಅನರ್ಹತೆಯನ್ನು ಜನವರಿ 24, 2024 ರೊಳಗೆ ನೀಡುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ [ಸುನಿಲ್ ಪ್ರಭು ಮತ್ತು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ನಡುವಣ ಪ್ರಕರಣ].
ಮುಂಬರುವ ದೀಪಾವಳಿ ರಜೆಗಳು ಮತ್ತು ವಿಧಾನಸಭೆಯ ಚಳಿಗಾಲದ ಅಧಿವೇಶನದ ಕಾರಣ, ಸಂವಿಧಾನದ 10ನೇ ಶೆಡ್ಯೂಲ್‌ನಲ್ಲಿನ ಪ್ರಕ್ರಿಯೆಗಳನ್ನು ಫೆಬ್ರವರಿ 29, 2024ರಂದು ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಪ್ರಕ್ರಿಯಾತ್ಮಕ ಕಗ್ಗಂಟು ಇದೆ ಎಂಬುದು ಅರ್ಜಿ ನಿರ್ಧರಿಸುವಲ್ಲಿನ ವಿಳಂಬಕ್ಕೆ ಕಾರಣವಾಗಬಾರದು ಎಂದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಎಚ್ಚರಿಕೆಯನ್ನು ಸ್ಪೀಕರ್ ಕಚೇರಿಗೆ ನೀಡಿದೆ.
"10 ನೇ ಶೆಡ್ಯೂಲ್ ಅಡಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ನಾವು ಸ್ಪೀಕರ್‌ಗೆ ಪದೇ ಪದೇ ಸಮಯಾವಕಾಶ ನೀಡಿದ್ದೇವೆ, ಈಗ ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಅಫಿಡವಿಟ್ ಸಲ್ಲಿಸಿದ್ದಾರೆ. ಅನರ್ಹತೆ ಅರ್ಜಿಗಳಲ್ಲಿ ಎರಡು ಗುಂಪುಗಳಿವೆ - ಶಿವಸೇನೆಯದ್ದು ಮತ್ತು ಎನ್‌ಸಿಪಿಯದ್ದು. ದೀಪಾವಳಿ ರಜೆಯಲ್ಲಿ ಸೆಕ್ರೆಟರಿಯೇಟ್ ಮುಚ್ಚಲಾಗುವುದು ಮತ್ತು ಚಳಿಗಾಲದ ವಿಧಾನಸಭೆಯ ಅಧಿವೇಶನವು ನಾಗಪುರದಲ್ಲಿ ನಡೆಯಲಿದೆ ಎಂದು ಅಫಿಡವಿಟ್ ಹೇಳುತ್ತದೆ.. ಪ್ರಕ್ರಿಯಾತ್ಮಕ ಬಿಕ್ಕಟ್ಟು ಇದೆ ಎಂಬುದು ಅರ್ಜಿ ನಿರ್ಧರಿಸುವಲ್ಲಿನ ವಿಳಂಬಕ್ಕೆ ಕಾರಣವಾಗಬಾರದು"ಎಂಬುದಾಗಿ ನ್ಯಾಯಾಲಯ ಹೇಳಿತು.
ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ತೀರ್ಮಾನಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪ್ರಕರಣ ಬಗ್ಗೆ ನಿರ್ಧರಿಸಲು ವಿಳಂಬ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅವರನ್ನು ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಪ್ರಸಕ್ತ ಚಾಲ್ತಿಯಲ್ಲಿರುವ ವಿಧಾನಸಭೆಯು ನಿಷ್ಕ್ರಿಯವಾಗುವವರೆಗೆ ಪ್ರಕ್ರಿಯೆಗಳನ್ನು ವಿಳಂಬಗೊಳಿಸಲಾಗದು ಎಂದು ಪೀಠ ಕುಟುಕಿತ್ತು.