ಮುಂಚಿತವಾಗಿಯೇ ಸಿಎಲ್ಎಟಿ ಲಿಪಿಕಾರರ ಮಾರ್ಗಸೂಚಿ ಪ್ರಕಟಿಸುವಂತೆ ಎನ್ಎಲ್‌ಯು ಒಕ್ಕೂಟಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಪರೀಕ್ಷೆಗೆ ಎರಡು ದಿನ ಮುನ್ನ ಅಭ್ಯರ್ಥಿಗಳ ಭೇಟಿಗೆ ಲಿಪಿಕಾರರಿಗೆ ಅವಕಾಶ ನೀಡಬೇಕು ಎಂಬ ಅರ್ಜಿದಾರರ ಕೋರಿಕೆ ಮಾನ್ಯವಾದುದು ಎಂದು ಪೀಠ ತಿಳಿಸಿದೆ. ಅಲ್ಲದೆ ವಿಕಲಚೇತನ ಅಭ್ಯರ್ಥಿಗಳಿಗಾಗಿ ಸೂಕ್ತ ವಸತಿ ವ್ಯವಸ್ಥೆ ಮಾಡುವಂತೆಯೂ ಅದು ಸೂಚಿಸಿದೆ.
ಮುಂಚಿತವಾಗಿಯೇ ಸಿಎಲ್ಎಟಿ ಲಿಪಿಕಾರರ ಮಾರ್ಗಸೂಚಿ ಪ್ರಕಟಿಸುವಂತೆ ಎನ್ಎಲ್‌ಯು ಒಕ್ಕೂಟಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ
Published on

ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಬರೆಯುವ ವಿಕಲಚೇತನ ವ್ಯಕ್ತಿಗಳಿಗೆ ನೀಡಲಾದ ಸೌಲಭ್ಯಗಳ ಕುರಿತ ಮಾರ್ಗಸೂಚಿಗಳನ್ನು ಪ್ರಕಟಿಸುವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ (ಎನ್‌ಎಲ್‌ಯುಗಳ ಒಕ್ಕೂಟ) ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ (ಅರ್ನಾಬ್ ರಾಯ್ ಮತ್ತು ಎನ್‌ಎಲ್‌ಯುಗಳ ಒಕ್ಕೂಟ ನಡುವಣ ಪ್ರಕರಣ).

ವಿಕಲಚೇತನ ಅಭ್ಯರ್ಥಿಗಳ ಹಕ್ಕಗಳ ವಿಕಸನ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ಮಾರ್ಪಡಿಸಲು ಒಕ್ಕೂಟಕ್ಕೆ ಸ್ವಾತಂತ್ರ್ಯವಿದ್ದು ತೊಂದರೆ ಎದುರಾದಲ್ಲಿ ಪರಿಹಾರ ಕೋರಿ ನ್ಯಾಯಾಲಯವನ್ನು ಅದು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಹಾಗೂ ಜೆ ಬಿ ಪರ್ದಿವಾಲ ಅವರಿದ್ದ ಪೀಠ ಹೇಳಿದೆ.

Also Read
ಯಾವುದೇ ವಿಕಲಚೇತನ ವಿದ್ಯಾರ್ಥಿ ಸಿಎಲ್ಎಟಿ ಪರೀಕ್ಷೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಸುಪ್ರೀಂ ಕೋರ್ಟ್ ನಿರ್ದೇಶನ

ಸಿಎಲ್‌ಎಟಿ 2023 ಪರೀಕ್ಷೆಯಲ್ಲಿ ವಿಕಲಚೇತನ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯುವ ಲಿಪಿಕಾರರಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಜಾರಿ ಮಾಡಲಾಗಿದ್ದ ನಿಯಮಾವಳಿಗಳನ್ನು ಪ್ರಶ್ನಿಸಿ ವಕೀಲ ಮತ್ತು ವಿಕಲಚೇತನರ ಹಕ್ಕುಗಳ ಪರ ಹೋರಾಟಗಾರ ಅರ್ನಾಬ್‌ ರಾಯ್‌ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಅಭ್ಯರ್ಥಿಗಳು ಪಡೆಯಲಿರುವ ಲಿಪಿಕಾರರು 11ನೇ ತರಗತಿ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಯಾವುದೇ ಕೋಚಿಂಗ್‌ ಸೆಂಟರ್‌ಗಳಲ್ಲಿ ತರಬೇತಿ ಪಡೆದಿರಬಾರದು ಎಂದು ನಿಯಮಾವಳಿಗಳಿಗೆ ಒಕ್ಕೂಟ ಮಾರ್ಪಾಟು ಮಾಡಿತ್ತು.

Also Read
ಸಿಎಲ್ಎಟಿ 2023: ವಿಕಲಚೇತನ ಅಭ್ಯರ್ಥಿಗಳ ಲಿಪಿಕಾರರಿಗೆ ಕಟ್ಟುನಿಟ್ಟಿನ ಮಾನದಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಅಭ್ಯರ್ಥಿಗಳು ಪಡೆಯಲಿರುವ ಲಿಪಿಕಾರರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಬದಲಾವಣೆ ಮಾಡಲು ಒಪ್ಪದ ನ್ಯಾಯಾಲಯ ಪರೀಕ್ಷೆಗೆ ಎರಡು ದಿನ ಮೊದಲು ಅಭ್ಯರ್ಥಿಗಳನ್ನು ಭೇಟಿ ಮಾಡಲು ಲಿಪಿಕಾರರಿಗೆ ಅವಕಾಶ ನೀಡಬೇಕು ಎಂಬ ಅರ್ಜಿದಾರರ ಕೋರಿಕೆ ಮಾನ್ಯವಾದುದು ಎಂದಿದೆ. ಅಲ್ಲದೆ ವಿಕಲಚೇತನ ಅಭ್ಯರ್ಥಿಗಳಿಗಾಗಿ ಸೂಕ್ತ ವಸತಿ ವ್ಯವಸ್ಥೆ ಮಾಡುವಂತೆಯೂ ಅದು ಒಕ್ಕೂಟಕ್ಕೆ ಸೂಚಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್‌ ಅವರು “ಗುರುತರ ಅಂಗವೈಕಲ್ಯ ಮಾನದಂಡ ಎಂಬುದು ಮೀಸಲಾತಿ ಉದ್ದೇಶಕ್ಕಾಗಿ ಮಾತ್ರ ಇದ್ದು, ಅದನ್ನು ಲಿಪಿಕಾರರ ಬಳಕೆ ನಿರಾಕರಿಸಲು ಬಳಸಿಕೊಳ್ಳುವಂತಿಲ್ಲ” ಎಂದಿದ್ದರು. ಜೊತೆಗೆ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿಕಲಚೇತನರು ಲಿಪಿಕಾರರನ್ನು ಬಳಸಿಕೊಳ್ಳಲು ಎನ್‌ಎಲ್‌ಯುಗಳು ನಿಯಮಗಳ ಚೌಕಟ್ಟು ರೂಪಿಸಬೇಕು ಎಂದು ಸೂಚಿಸಿದ್ದರು.

Kannada Bar & Bench
kannada.barandbench.com