ತಾಜ್ ಮಹಲ್ ಟ್ರಪೀಜಿಯಂ ವಲಯದಲ್ಲಿ ಮರಗಳ ಹನನ: ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

"ತಾಜ್ ಟ್ರಪೀಜಿಯಂ ಪ್ರಾಧಿಕಾರ ಪೊಲೀಸರ ಸಹಾಯದಿಂದ ಅಲ್ಲಿ ಮರ ಕಡಿಯುವ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ನಾವು ಸ್ಪಷ್ಟಪಡಿಸುತ್ತೇವೆ" ಎಂಬುದಾಗಿ ನ್ಯಾಯಾಲಯ ಆದೇಶಿಸಿತು.
Taj Mahal
Taj Mahal
Published on

ಆಗ್ರಾದ ವಿಶ್ವವಿಖ್ಯಾತ ತಾಜ್‌ಮಹಲ್‌ ಸ್ಮಾರಕವನ್ನು ಮಾಲಿನ್ಯದಿಂದ ಸಂರಕ್ಷಿಸುವುದಕ್ಕಾಗಿ ತಾಜ್‌ ಟ್ರಪೀಜಿಯಂ ವಲಯ (ಟಿಟಿಝಡ್‌) ಎಂದು ಗುರುತಿಸಲಾದ ಅದರ ಸುತ್ತಲಿನ 10,400 ಚದರ ಕಿ.ಮೀ ವಿಸ್ತೀರ್ಣ ಪ್ರದೇಶದಲ್ಲಿ ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮರ ಕಡಿಯಲು ಅವಕಾಶ ಕಲ್ಪಿಸಿದ ಆರೋಪ ಕುರಿತು ತನಿಖೆ ನಡೆಸುವಂತೆ ತಾಜ್ ಟ್ರಪೀಜಿಯಂ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ [ಎಂಸಿ ಮೆಹ್ತಾ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ]

ಟಿಟಿಝಡ್‌ ತನ್ನ ಅಧಿಕಾರಿಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಿ, ಮರ ಕಡಿಯಲಾಗಿದೆಯೇ ಅಥವಾ ಕಡಿಯಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮತ್ತು ತನಿಖೆಯನ್ನು ಮೂರು ವಾರಗಳಲ್ಲಿ ಪೂರ್ಣಗೊಳಿಸುವಂತೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ನಿರ್ದೇಶಿಸಿತು.

Also Read
ತಾಜ್ ಮಹಲ್ ಟ್ರಪೀಜಿಯಂ ವಲಯದಲ್ಲಿ ಕೃಷಿ-ಅರಣ್ಯಕ್ಕಾಗಿ ಮರ ಕಡಿಯುವುದಕ್ಕೆ ಅನುಮತಿಸಿದ್ದನ್ನು ಪ್ರಶ್ನಿಸಿದ ಸುಪ್ರೀಂ

ತನ್ನ ಆದೇಶ ಜಾರಿಗೊಳಿಸುವುದಕ್ಕಾಗಿ ಪ್ರಾಧಿಕಾರದ ಅಧಿಕಾರಿಗಳಿಗೆ ಅಗತ್ಯವಾದ ಪೊಲೀಸ್‌ ರಕ್ಷಣೆಯನ್ನೂ ಒದಗಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ, ತಾಜ್‌ ಟ್ರಪೀಜಿಯಂ ಪ್ರದೇಶದಲ್ಲಿ ಮರ ಕಡಿಯಲಾಗುತ್ತಿದೆ ಎಂಬುದು ಅರ್ಜಿದಾರರ ಪರವಾಗಿ ಹಾಜರಾದ ವಕೀಲರ ವಾದವಾಗಿದೆ. ಮರ ಕಡಿಯಲಾಗಿದೆಯೇ ಅಥವಾ ಕಡಿಯಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪ್ರಕರಣದ ಮೂರನೇ ಪ್ರತಿವಾದಿಯಾದ ತಾಜ್‌ ಟ್ರಪೀಜಿಯಂ ಪ್ರಾಧಿಕಾರ ತನ್ನ ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ನಿಯೋಜಿಸುವಂತೆ ನಿರ್ದೇಶಿಸುತ್ತಿದ್ದೇವೆ. ಇವರಿಗೆ ಅಗತ್ಯವಾದ ಪೊಲೀಸ್‌ ರಕ್ಷಣೆ ಒದಗಿಸಬೇಕು ಎಂಬುದಾಗಿ ವಿವರಿಸಿದೆ.

ಪೊಲೀಸರ ನೆರವು ಪಡೆದು ಪ್ರಾಧಿಕಾರ ಆ ಪ್ರದೇಶದಲ್ಲಿ ಇನ್ನು ಮುಂದೆ ಮರಗಳ ಹನನ ತಡೆಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. "ತಾಜ್ ಟ್ರಪೀಜಿಯಂ ಪ್ರಾಧಿಕಾರ ಪೊಲೀಸರ ಸಹಾಯದಿಂದ ಅಲ್ಲಿ ಯಾವುದೇ ಮರ ಕಡಿಯುವ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ನಾವು ಸ್ಪಷ್ಟಪಡಿಸುತ್ತೇವೆ" ಎಂಬುದಾಗಿ ನ್ಯಾಯಾಲಯ ಆದೇಶಿಸಿತು.

ತಾಜ್ ಟ್ರೆಪೀಜಿಯಂ ವಲಯದಲ್ಲಿ ಅನಧಿಕೃತವಾಗಿ ಮರ ಕಡಿಯಲಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ತಾಜ್ ಟ್ರಪೀಜಿಯಂ ವಲಯ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಮತ್ತಿತರ ಪಾರಂಪರಿಕ ಸ್ಮಾರಕಗಳನ್ನು ಸುತ್ತುವರೆದಿರುವ 10,400 ಚದರ ಕಿಲೋಮೀಟರ್ ಸಂರಕ್ಷಿತ ಪ್ರದೇಶವಾಗಿದೆ. ಈ ಐತಿಹಾಸಿಕ ತಾಣಗಳಿಗೆ ಒದಗಿರುವ ಮಾಲಿನ್ಯದ ಭೀತಿ ಹಾಗೂ ಪರಿಸರ ನಾಶ ತಡೆಯಲು ತಾಜ್ ಟ್ರಪೀಜಿಯಂ ವಲಯವನ್ನು ಸ್ಥಾಪಿಸಲಾಗಿದೆ.

ಗಾಳಿಯ ಗುಣಮಟ್ಟ ಸುಧಾರಿಸಲು, 1996ರಲ್ಲಿ ಸುಪ್ರೀಂ ಕೋರ್ಟ್ ಟಿಟಿಝಡ್‌ನಲ್ಲಿ ಭಾರೀ ಪ್ರಮಾಣದ ಮರ ನೆಡುವಂತೆ ನಿರ್ದೇಶಿಸಿತ್ತು. ಜೊತೆಗೆ, 200ಕ್ಕೂ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನು ಮುಚ್ಚಲು ಅಥವಾ ಸ್ಥಳಾಂತರಿಸಲು ಆದೇಶಿಸಿತ್ತು. ಸಿಎನ್‌ಜಿ ಅಥವಾ ಎಲ್‌ಪಿಜಿಯಂತಹ ಶುದ್ಧ ಇಂಧನಗಳನ್ನಷ್ಟೇ ಬಳಸುವುದನ್ನು ಕಡ್ಡಾಯಗೊಳಿಸಿತ್ತು.

ತಾಜ್ ಮಹಲ್‌ಗೆ ಮತ್ತಷ್ಟು ರಕ್ಷಣೆ ನೀಡುವುದಕ್ಕಾಗಿ ನ್ಯಾಯಾಲಯ ವಾಹನ ಸಂಚಾರ ನಿರ್ಬಂಧಿಸಿತ್ತು. ಬ್ಯಾಟರಿ ಚಾಲಿತ ವಾಹನಗಳನ್ನು ಉತ್ತೇಜಿಸಿ ಸ್ಮಾರಕದ ಬಳಿ ಕಟ್ಟಡ ಕಾಮಗಾರಿ ಮತ್ತು ಗಣಿ ಚಟುವಟಿಕೆಗಳನ್ನು ಕೂಡ ನಿಷೇಧಿಸಿತ್ತು.

Also Read
ತಾಜ್‌ ಮಹಲ್‌ ಕೊಠಡಿ ತೆರೆಯಲು ಕೋರಿದ್ದ ಪಿಐಎಲ್‌ ವಜಾ ಮಾಡಿದ ಸುಪ್ರೀಂ; 'ಪ್ರಚಾರ ಹಿತಾಸಕ್ತಿ ಅರ್ಜಿ' ಎಂದ ಪೀಠ

ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಕೃಷಿ ಅರಣ್ಯ ಭೂಮಿಗಾಗಿ ಮರ ಕಡಿಯಲು ಅವಕಾಶ ಕಲ್ಪಿಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಚ್ 5 ರಂದು ಆಕ್ಷೇಪ ವ್ಯಕ್ತಪಡಿಸಿತ್ತು.

ತಮ್ಮ ಜಮೀನಿನಲ್ಲಿ 2-3 ಮರ ಇರುವ ಸಾಮಾನ್ಯ ವ್ಯಕ್ತಿ ಅವುಗಳನ್ನು ಕಡಿಯಲು ಕೂಡ  ಅನುಮತಿ ಪಡೆಯಬೇಕು. ಹೀಗಿರುವಾಗ, ವಾಣಿಜ್ಯ ಉದ್ದೇಶಗಳಿಗಾಗಿ ಮರ ಕಡಿಯುತ್ತಿರುವವರಿಗೆ ಸಂಪೂರ್ಣ ಅನುಮತಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದ ನ್ಯಾಯಾಲಯ ಆದೇಶ ಮರುಪರಿಶೀಲಿಸುವಂತೆ ನೋಟಿಸ್‌ ನೀಡಿತ್ತು. ಆ ಕುರಿತಾದ ವಿಚಾರಣೆ ಮಾರ್ಚ್ 25ರಂದು ನಡೆಯಲಿದೆ.

Kannada Bar & Bench
kannada.barandbench.com