
ರಸ್ತೆ ಅಪಘಾತ ಸಂತ್ರಸ್ತರಿಗೆ ಕೂಡಲೇ ನೆರವು ದೊರಕಿಸಿಕೊಡುವುದಕ್ಕಾಗಿ ಆರು ತಿಂಗಳೊಳಗೆ ಸಮಗ್ರ ಶಿಷ್ಟಾಚಾರ ರೂಪಿಸಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ [ಎಸ್ ರಾಜಶೇಖರನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ರಸ್ತೆ ಅಪಘಾತ ಪ್ರಕರಣಗಳಲ್ಲಿನ ಆತಂಕಕಾರಿ ಏರಿಕೆ ಮತ್ತು ಸಕಾಲಿಕ ಪ್ರತಿಕ್ರಿಯೆ ವ್ಯವಸ್ಥೆಗಳ ಕೊರತೆ ಇದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.
"ಸಂತ್ರಸ್ತರು ಗಾಯಗೊಂಡಿಲ್ಲದಿದ್ದರೂ ವಾಹನದೊಳಗೆ ಸಿಲುಕಿಕೊಂಡಿರುವ ಪ್ರಕರಣಗಳಿವೆ. ಅಪಘಾತಗಳ ಸಂದರ್ಭದಲ್ಲಿ ತ್ವರಿತ ಸ್ಪಂದನೆಗಾಗಿ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಮುಖ್ಯ ಸಂಗತಿ" ಎಂದು ಅದು ಹೇಳಿತು.
ಅಧಿಕಾರ ವ್ಯಾಪ್ತಿಯಲ್ಲಿ ಸ್ಥಳೀಯ ವಾಸ್ತವಗಳು ಬದಲಾಗುತ್ತವೆ ಎಂಬುದನ್ನು ಗಮನಿಸಿದ ಪೀಠ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಈ ಸಮಸ್ಯೆಯನ್ನು ಸಕ್ರಿಯವಾಗಿ ಪರಿಹರಿಸಬೇಕು ಎಂದು ಹೇಳಿತು.
ಕ್ರಮ ಕೈಗೊಂಡ ಕುರಿತ ವರದಿಗಳನ್ನು ಸಲ್ಲಿಸಲು ನ್ಯಾಯಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರು ತಿಂಗಳ ಕಾಲಾವಕಾಶ ನೀಡಿತು.
ವಿಚಾರಣೆಯ ಸಮಯದಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಈ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ವಿವರಿಸುವ ಟಿಪ್ಪಣಿಯನ್ನು ನ್ಯಾಯಾಲಯದ ಮುಂದೆ ಇರಿಸಿತು. ಟಿಪ್ಪಣಿಯನ್ನು ರಾಜ್ಯ ಸಾರಿಗೆ ಇಲಾಖೆಗಳೊಂದಿಗೆ ಹಂಚಿಕೊಳ್ಳಬೇಕೆಂದು ನಿರ್ದೇಶಿಸಿದ ಪೀಠ ನೈಜ ಅನುಷ್ಠಾನ ವಿವರಿಸುವ ಪ್ರಮಾಣಪತ್ರವನ್ನು ಆರು ತಿಂಗಳೊಳಗೆ ಸಲ್ಲಿಸುವಂತೆ ಎನ್‌ಎಚ್‌ಎಐ ಗೆ ಸೂಚಿಸಿತು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎನ್‌ಎಚ್‌ಎಐ ಶಿಷ್ಟಾಚಾರವನ್ನು ಮಾರ್ಗದರ್ಶಿಯಂತೆ ಪರಿಗಣಿಸಲು ತಿಳಿಸಿತು.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 215(ಬಿ) ಅಡಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು, ಆದರೆ ಮಂಡಳಿಗೆ ನೇಮಕಾತಿಗಳು ಬಾಕಿ ಉಳಿದಿವೆ ಎಂದು ನ್ಯಾಯಾಲಯ ತಿಳಿಸಿದೆ. ಮಂಡಳಿಯನ್ನು ಯಾವಾಗ ರಚಿಸಲಾಗುತ್ತದೆ ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಅದು ಸೂಚಿಸಿತು.
ಸಾರಿಗೆ ವಾಹನಗಳ ಚಾಲಕರ ಕೆಲಸದ ಪರಿಸ್ಥಿತಿಗಳತ್ತಲೂ ನ್ಯಾಯಾಲಯ ಗಮನ ಹರಿಸಿತು. ಚಾಲಕರ ಕೆಲಸದ ಅವಧಿಯನ್ನು ಶಾಸನಬದ್ಧವಾಗಿ ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 48 ಗಂಟೆಗಳಿಗೆ ಸೀಮಿತಗೊಳಿಸಲಾಗಿದ್ದರೂ, ಈ ಮಿತಿಗಳನ್ನು ಹೆಚ್ಚಾಗಿ ಉಲ್ಲಂಘಿಸಲಾಗುತ್ತದೆ, ಇದು ಆಯಾಸ-ಸಂಬಂಧಿತ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.
ಆದ್ದರಿಂದ, ಚಾಲಕರ ಕರ್ತವ್ಯದ ಕಾಲಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚಿಸಿದ ನ್ಯಾಯಾಲಯ ನೈಜ-ಸಮಯದ ದತ್ತಾಂಶದ ಮೂಲಕ ವಾಹನಗಳ ವೇಗ ಮೇಲ್ವಿಚಾರಣೆಯ ಕುರಿತು ಎನ್ಎಚ್ಎಐ ಪ್ರತಿಕ್ರಿಯೆ ನೀಡುವಂತೆ ಹೇಳಿತು..
ವೇಗ ಮತ್ತು ಸಂಚಾರ ಜಾರಿ ಕುರಿತಾದ ಕಳವಳಗಳನ್ನು ಸಹ ಪರಿಗಣಿಸಿದ ಅದು ಟೋಲ್ ಬೂತ್‌ಗಳ ನಡುವಿನ ಸರಾಸರಿ ವೇಗವನ್ನು ಲೆಕ್ಕಾಚಾರ ಮಾಡಲು ನೈಜ-ಸಮಯದ ದತ್ತಾಂಶ ಪ್ರಸರಣವನ್ನು ಬಳಸಬಹುದೇ ಎಂದು ಪರಿಶೀಲಿಸಲು ಎನ್‌ಎಚ್‌ಎಐ ಗೆ ಸಲಹೆ ನೀಡಿತು. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂತಲೂ ಅದು ಹೇಳಿತು.