ಶಾಹಿ ಈದ್ಗಾ ಮಸೀದಿ ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ನ್ಯಾಯಪೀಠವು ವಿವಾದಿತ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಹೇಳಿದೆ.
Krishna Janmabhoomi - Shahi Idgah Dispute
Krishna Janmabhoomi - Shahi Idgah Dispute

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು (ಮಹೇಕ್ ಮಹೇಶ್ವರಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಓರ್ಸ್) ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ನ್ಯಾಯಪೀಠವು ಪಿಐಎಲ್ ಅನ್ನು ವಜಾಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಸ್ವೀಕರಿಸಲು ನಿರಾಕರಿಸಿತು.

ವಾಸ್ತವದ ವಿವಾದಾತ್ಮಕ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

"ನಾವು ಮಧ್ಯಪ್ರವೇಶಿಸುವುದು ಸರಿಯಲ್ಲ. ಕ್ಷಮಿಸಿ. ಇದು ಪಿಐಎಲ್‌ಗೆ ಸಂಬಂಧಿಸಿದ ವಿಷಯವಲ್ಲ (ಹೈಕೋರ್ಟ್ ಮುಂದೆ). ವಾಸ್ತವಾಂಶಗಳಿಗೆ ಸಂಬಂಧಿಸಿದ ವಿವಾದಿತ ಪ್ರಶ್ನೆಗಳಾಗಿವೆ" ಎಂದು ನ್ಯಾಯಾಲಯ ಹೇಳಿದೆ.

ಆದಾಗ್ಯೂ, ಪಿಐಎಲ್ ಅನ್ನು ವಜಾಗೊಳಿಸುವುದು ಯಾವುದೇ ಪಕ್ಷಕಾರರನ್ನು ಯಾವುದೇ ಕಾಯಿದೆಯ ಉಲ್ಲಂಘನೆಯನ್ನು ಪ್ರಶ್ನಿಸುವುದನ್ನು ತಡೆಯುವುದಿಲ್ಲ ಎಂದು ಉನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಥುರಾದ ಶಾಹಿ ಈದ್ಗಾ ಮಸೀದಿ ಸ್ಥಳವನ್ನು ಕೃಷ್ಣ ಜನ್ಮಭೂಮಿ (ಶ್ರೀಕೃಷ್ಣನ ಜನ್ಮಸ್ಥಳ) ಎಂದು ಗುರುತಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ 2023 ರ ಅಕ್ಟೋಬರ್‌ನಲ್ಲಿ ತಿರಸ್ಕರಿಸಿತ್ತು. ವಿವಾದಿತ ಭೂಮಿಯಿಂದ ಮಸೀದಿಯನ್ನು ತೆರೆವುಗೊಳಿಸುವಂತೆ ಪಿಐಎಲ್ ಕೋರಿತ್ತು.

ಸಂಬಂಧಿತ ಮೊಕದ್ದಮೆಗಳಲ್ಲಿ ಕೋರಲಾದ ಪರಿಹಾರಗಳು ಈಗಾಗಲೇ ಹೈಕೋರ್ಟ್‌ನಲ್ಲಿ ಪರಿಗಣನೆಗೆ ಬಾಕಿ ಇವೆ ಎಂದು ಗಮನಿಸಿದ ನಂತರ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿತ್ತು. ಇದು ಸರ್ವೋಚ್ಚ ನ್ಯಾಯಾಲಯದ ಮುಂದೆ ಮೇಲ್ಮನವಿಗೆ ಕಾರಣವಾಗಿತ್ತು.

ವಕೀಲ ಮಹೆಕ್‌ ಮಹೇಶ್ವರಿ ಅವರು 2020 ರಲ್ಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಪ್ರಶ್ನಾರ್ಹ ಸ್ಥಳವು ವಾಸ್ತವವಾಗಿ ಕೃಷ್ಣ ಜನ್ಮಭೂಮಿ ಎಂದು ಹಲವಾರು ಐತಿಹಾಸಿಕ ಗ್ರಂಥಗಳು ದಾಖಲಿಸಿವೆ ಎಂದು ಅವರು ವಾದಿಸಿದರು.

ಇದಲ್ಲದೆ, ಮಥುರಾದ ಐತಿಹಾಸಿಕ ಬೇರುಗಳನ್ನು ರಾಮಾಯಣದ ಸಮಯದಿಂದಲೂ ಪತ್ತೆಹಚ್ಚಬಹುದಾಗಿದೆ, ಇದರ ಹೋಲಿಕೆಯಲ್ಲಿ ಇಸ್ಲಾಂ ಧರ್ಮವು ಸುಮಾರು 1,500 ವರ್ಷಗಳ ಹಿಂದೆಯಷ್ಟೇ ಬಂದಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿತ್ತು.

ಬಲವಂತದಿಂದ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲು ಸಾಧ್ಯವಿಲ್ಲದ ಕಾರಣ ಶಾಹಿ ಈದ್ಗಾ ಮಸೀದಿಯು ಇಸ್ಲಾಂನ ನ್ಯಾಯಶಾಸ್ತ್ರದ ಅಡಿಯಲ್ಲಿ ಕಾನೂನುಬದ್ಧ ಮಸೀದಿಯಾಗಿ ಅರ್ಹತೆ ಪಡೆಯುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮತ್ತೊಂದೆಡೆ, ಹಿಂದೂ ನ್ಯಾಯಶಾಸ್ತ್ರದ ಪ್ರಕಾರ, ದೇವಾಲಯವು ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಪವಿತ್ರ ಸ್ಥಾನಮಾನವನ್ನು ಉಳಿಸಿಕೊಳ್ಳುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಭೂಮಿಯನ್ನು ಹಿಂದೂ ಸಮುದಾಯಕ್ಕೆ ವರ್ಗಾಯಿಸಲು ಆದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಇದಲ್ಲದೆ, ಅರ್ಜಿದಾರರು ಕೃಷ್ಣ ಜನ್ಮಭೂಮಿ ಜನ್ಮಸ್ಥಾನಕ್ಕೆ ಕಾನೂನುಬದ್ಧ ಟ್ರಸ್ಟ್ ಅನ್ನು ಸ್ಥಾಪಿಸುವಂತೆಯೂ ಕೋರಿದ್ದರು.

ಮುಂದುವರೆದು, ಕೃಷ್ಣ ಜನ್ಮಸ್ಥಾನದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ನಂಬಲಾದ ವಿವಾದಿತ ಸ್ಥಳದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಜಿಪಿಆರ್‌ಎಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಉತ್ಖನನ ನಡೆಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಇದೇ ರೀತಿಯ ಪರಿಹಾರಗಳನ್ನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಈಗಾಗಲೇ ಬಾಕಿ ಇದೆ.

ಈ ಹಿಂದೆ, ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯ, ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿವಾದಿತ ಸ್ಥಳದ ವೈಜ್ಞಾನಿಕ ಸಮೀಕ್ಷೆಗೆ ಕೋರಿ ಹಿಂದೂ ಟ್ರಸ್ಟ್‌ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದವು .

ಇತ್ತೀಚೆಗೆ, ಮಸೀದಿಯ ಆವರಣವನ್ನು ಪರಿಶೀಲಿಸಲು ನ್ಯಾಯಾಲಯದ ಆಯುಕ್ತರನ್ನು ನೇಮಿಸಲು ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಮೌಖಿಕವಾಗಿ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು ಎನ್ನುವುದನ್ನು ಇಲ್ಲಿ ನೆನೆಯಬಹುದು.

Kannada Bar & Bench
kannada.barandbench.com