ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಗ್ರ ನೀತಿ ಅಥವಾ ವಿಧೇಯಕ ರೂಪಿಸಲು ಕಾನೂನು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
“ಈಗ ನ್ಯಾಯಾಲಯ ಇದನ್ನು ನಿರ್ಧರಿಸಬೇಕೆ? ಎಲ್ಲದಕ್ಕೂ ಒಂದು ತರ್ಕವಿರಬೇಕು” ಎಂದು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎ ಎಸ್ ಓಕ್ ಅವರ ನೇತೃತ್ವದ ಪೀಠ ಮನವಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅರ್ಜಿ ವಿಚಾರಣೆಗೆ ನಿರಾಕರಿಸಿತು. ಹೀಗಾಗಿ, ಉಪಾಧ್ಯಾಯ ಅವರು ಅರ್ಜಿ ಹಿಂಪಡೆದರು.
ವಿಶ್ವದ ಒಟ್ಟು ಭೂಪ್ರದೇಶದಲ್ಲಿ ಭಾರತ ಶೇ.2ರಷ್ಟು ಪ್ರದೇಶ ಹೊಂದಿದೆ. ಆದರೆ, ಶೇ. 20ರಷ್ಟು ಜನಸಂಖ್ಯೆ ಹೊಂದಿದೆ ಎಂಬ ಉಪಾಧ್ಯಾಯ ಅವರ ವಾದವನ್ನು ನ್ಯಾಯಾಲಯ ನಿರಾಕರಿಸಿತು.
“ಒಂದೇ ದಿನಕ್ಕೆ ಜನಸಂಖ್ಯೆಯನ್ನು ನಿಯಂತ್ರಿಸಲಾಗದು. ಈ ಕುರಿತು ಕಾನೂನು ಆಯೋಗಕ್ಕಾದರೂ ಏನು ನಿರ್ದೇಶಿಸಬೇಕು...” ಎಂದು ನ್ಯಾ. ಕೌಲ್ ಕೇಳಿದರು.
ಒತ್ತಾಯಪೂರ್ವಕ ಕುಟುಂಬ ಯೋಜನೆಯನ್ನು ತಾನು ವಿರೋಧಿಸುವುದಾಗಿ ಕೇಂದ್ರ ಸರ್ಕಾರವು 2020ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ಹೇಳಿಕೆಗೆ ಆಕ್ಷೇಪಿಸಿದ್ದ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸಿತು.