
ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟಿನ ಕಂತೆಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವಾಗ್ದಂಡನೆ (ಮಹಾಭಿಯೋಗ) ವಿಧಿಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾಡಿದ್ದ ಶಿಫಾರಸು ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಘಟನೆಯ ತನಿಖೆಗೆ ಆಂತರಿಕ ಸಮಿತಿಯ ರಚನೆ ಮಾಡಿದ್ದು ಹಾಗೂ ತಾನು ಅನುಸರಿಸಿದ ಕಾರ್ಯವಿಧಾನವು ಕಾನೂನುಬಾಹಿರವಲ್ಲ ಎಂದು ನ್ಯಾಯಾಲಯ ತಿಳಿಸಿದೆ.
"ಫೋಟೋಗಳು ಮತ್ತು ವಿಡಿಯೋ ಪ್ರಸಾರ ಮಾಡಿದ್ದನ್ನು ಹೊರತುಪಡಿಸಿ (ಆಂತರಿಕ ವಿಚಾರಣೆ) ಪ್ರಕ್ರಿಯೆಯನ್ನು ಸಿಜೆಐ ಮತ್ತು ಆಂತರಿಕ ಸಮಿತಿ ಕಟ್ಟುನಿಟ್ಟಾಗಿ ಪಾಲಿಸಿದೆ. ಫೋಟೊ ಮತ್ತು ವಿಡಿಯೋ ಪ್ರಸಾರ ಮಾಡುವುದು ಅಗತ್ಯವಿರಲಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆದರೆ ನೀವು ಆಗ ಅದನ್ನು ಪ್ರಶ್ನಿಸದ ಕಾರಣ ಅದನ್ನು ಏನೂ ಮಾಡಲಿಲ್ಲ. ಸಿಜೆಐ ಅವರು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಕಳುಹಿಸುವುದು ಅಸಾಂವಿಧಾನಿಕವಲ್ಲ. ಭವಿಷ್ಯದಲ್ಲಿ ಅಗತ್ಯಬಿದ್ದಲ್ಲಿ, ನೀವು ವಿಚಾರಣಾ ಪ್ರಕ್ರಿಯೆಗೆ ಮುಂದಾಗಲು ಅಗತ್ಯವಾಗುವಂತೆ ಮುಕ್ತವಾಗಿರಿಸಿ ಕೆಲವೊಂದು ಅವಲೋಕನಗಳನ್ನು ನಾವು ಮಾಡಿದ್ದೇವೆ. ಇದರೊಂದಿಗೆ ರಿಟ್ ಅರ್ಜಿ ವಜಾಗೊಳಿಸಿದ್ದೇವೆ" ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಆರು ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪು ಹೀಗಿದೆ:
1. ಅರ್ಜಿಯ ಊರ್ಜಿತತ್ವದ ಕುರಿತು: ಆಂತರಿಕ ವ್ಯವಸ್ಥೆಯಡಿಯಲ್ಲಿನ ಹಾಲಿ ನ್ಯಾಯಮೂರ್ತಿಗಳ ನಡೆಯನ್ನು ಪ್ರಶ್ನಿಸುವ ರಿಟ್ ಅರ್ಜಿಯು ಊರ್ಜಿತವಾಗುವುದಿಲ್ಲ.
2. ಆಂತರಿಕ ಪ್ರಕ್ರಿಯೆಗೆ ಕಾನೂನು ಪಾವಿತ್ರ್ಯ ಇದ್ದು ಸಾಂವಿಧಾನಿಕ ಚೌಕಟ್ಟಿನಾಚೆಗಿನ ಪ್ರಕ್ರಿಯೆ ಅದಲ್ಲ.
3. ಅರ್ಜಿದಾರರ (ನ್ಯಾಯಮೂರ್ತಿ ವರ್ಮಾ) ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ.
4. ಫೋಟೋಗಳು ಮತ್ತು ವಿಡಿಯೋ ಪ್ರಸಾರ ಮಾಡಿದ್ದನ್ನು ಹೊರತುಪಡಿಸಿ ಆಂತರಿಕ ವಿಚಾರಣೆ ಪ್ರಕ್ರಿಯೆಯನ್ನು ಸಿಜೆಐ ಮತ್ತು ಆಂತರಿಕ ಸಮಿತಿ ಕಟ್ಟುನಿಟ್ಟಾಗಿ ಪಾಲಿಸಿದೆ. ಫೋಟೊ ಮತ್ತು ವಿಡಿಯೋ ಪ್ರಸಾರ ಮಾಡುವುದು ಅಗತ್ಯವಿರಲಿಲ್ಲ, ವಿಶೇಷವಾಗಿ ಈ ಕುರಿತು ಪ್ರಶ್ನಿಸದ ಕಾರಣ.
5. ವರದಿಯನ್ನು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸುವುದು ಸಂವಿಧಾನಬಾಹಿರವಲ್ಲ.
6. ಭವಿಷ್ಯದಲ್ಲಿ ಅಗತ್ಯವಿದ್ದರೆ ದೂರುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನ್ಯಾ. ವರ್ಮಾ ಅವರಿಗೆ ಅವಕಾಶಗಳನ್ನು ನ್ಯಾಯಾಲಯವು ಕಲ್ಪಿಸಿದೆ.
ಫೋಟೋಗಳು ಮತ್ತು ವಿಡಿಯೋ ಪ್ರಸಾರ ಮಾಡಿದ್ದನ್ನು ಹೊರತುಪಡಿಸಿ ಆಂತರಿಕ ವಿಚಾರಣೆ ಪ್ರಕ್ರಿಯೆಯನ್ನು ಸಿಜೆಐ ಮತ್ತು ಆಂತರಿಕ ಸಮಿತಿ ಸೂಕ್ಷ್ಮವಾಗಿ ಪಾಲಿಸಿದೆ.
ಸುಪ್ರೀಂ ಕೋರ್ಟ್
ತಮ್ಮ ಅರ್ಜಿಯಲ್ಲಿ ನ್ಯಾ. ವರ್ಮಾ ಅವರು, ಮಾಜಿ ಸಿಜೆಐ ಸಂಜೀವ್ ಖನ್ನಾ ಅವರು ತಮ್ಮ ಪದಚ್ಯುತಿಗೆ ಮಾಡಿದ್ದ ಶಿಫಾರಸ್ಸನ್ನು ಅಸಾಂವಿಧಾನಿಕ ಹಾಗೂ ಕಾನೂನಿಗೆ ವಿರುದ್ಧವಾದದ್ದು ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅಲ್ಲದೆ, ಸಿಜೆಐ ಅವರು ತಮ್ಮ ಪದಚ್ಯುತಿಗೆ ಶಿಫಾರಸ್ಸು ಮಾಡಲು ಆಧರಿಸಿದ್ದ ಆಂತರಿಕ ಸಮಿತಿಯ ವರದಿಯನ್ನು ಅವರು ಪ್ರಶ್ನಿಸಿದ್ದರು.
ತಮ್ಮ ವಿರುದ್ಧ ಯಾವುದೇ ಔಪಚಾರಿಕ ದೂರು ದಾಖಲಾಗದೆ ಆಂತರಿಕ ವಿಚಾರಣೆಯನ್ನು ಆರಂಭಿಸಲಾಯಿತು. ಅಲ್ಲದೆ, ಆರೋಪಗಳ ಕುರಿತು ಸಾರ್ವಜನಿಕವಾಗಿ ಪತ್ರಿಕಾ ಹೇಳಿಕೆಯ ಮೂಲಕ ಬಹಿರಂಗಪಡಿಸಿದ್ದು ಹಿಂದೆಂದೂ ಕಾಣದ ರೀತಿಯಲ್ಲಿ ತಮ್ಮನ್ನು ಮಾಧ್ಯಮ ವಿಚಾರಣೆಗೆ ಒಳಪಡಿಸಿತು ಎಂದು ಅವರು ಹೇಳಿದರು.
ಪ್ರಕರಣದ ಹಿಂದಿನ ವಿಚಾರಣೆ ವೇಳೆ ನ್ಯಾಯಮೂರ್ತಿ ವರ್ಮಾ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಆಂತರಿಕ ವಿಚಾರಣೆ ಶಿಫಾರಸು ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದು ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲು ಅದು ಆಧಾರವಲ್ಲ ಎಂದಿದ್ದರು.
ಹೀಗಾಗಿ, ತಾನು ಆಂತರಿಕ ಸಮಿತಿ ವರದಿ ಪ್ರಶ್ನಿಸುತ್ತಿಲ್ಲ. ಬದಲಿಗೆ ಸಂವಿಧಾನದ 124ನೇ ವಿಧಿ ಮತ್ತು 1968ರ ನ್ಯಾಯಮೂರ್ತಿಗಳ ವಿಚಾರಣಾ ಕಾಯಿದೆಯನ್ನು ಉಲ್ಲಂಘಿಸುವುದರಿಂದ ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಗೆ ತಿದಿ ಒತ್ತುತ್ತಿರುವ ಸಂಗತಿಗಳನ್ನು ತಾನು ವಿರೋಧಿಸುತ್ತಿರುವುದಾಗಿ ಅವರು ಹೇಳಿದ್ದರು.
ಆದರೆ ಆಂತರಿಕ ವಿಚಾರಣಾ ಪ್ರಕ್ರಿಯೆಯನ್ನು 1999ರಲ್ಲಿ ರೂಪಿಸಲಾಗಿದ್ದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಕಚೇರಿ ಕೇವಲ ಅಂಚೆ ಕಚೇರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಅಲ್ಲದೆ, ಸಮಿತಿಯ ವಿರುದ್ಧ ನ್ಯಾಯಾಲಯವನ್ನು ಸಂಪರ್ಕಿಸುವಲ್ಲಿ ನ್ಯಾಯಮೂರ್ತಿ ವರ್ಮಾ ಅವರು ಮಾಡಿದ ವಿಳಂಬವನ್ನು ನ್ಯಾಯಾಲಯ ಪದೇ ಪದೇ ಪ್ರಶ್ನಿಸಿತ್ತು
ನ್ಯಾಯಮೂರ್ತಿ ವರ್ಮಾ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸೌಮಿತ್ರ ಸೇನ್ ಅವರ ವಿರುದ್ಧದ ವಾಗ್ದಂಡನೆಯ ಪ್ರಕರಣವನ್ನು ಪ್ರಸ್ತಾಪಿಸಿದರು. ಪರಿಗಣಿಸುವುದಾಗಿ ತಿಳಿಸಿದ ಪೀಠ ತೀರ್ಪು ಕಾಯ್ದಿರಿಸಿತ್ತು.
ಅದರಂತೆ ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ನ್ಯಾ. ವರ್ಮಾ ಅವರ ಅರ್ಜಿ ವಜಾಗೊಳಿಸಿ ಅವರ ಪದಚ್ಯುತಿಗೆ ಶಿಫಾರಸು ಮಾಡಿದೆ.