ಎಜಿಆರ್‌ ಬಾಕಿ ಮರುಲೆಕ್ಕಾಚಾರ ಕೋರಿದ್ದ ಟೆಲಿಕಾಂ ಕಂಪೆನಿಗಳ ಮನವಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ದೂರಸಂಪರ್ಕ ಇಲಾಖೆಯು ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ ಬಾಕಿ ಲೆಕ್ಕಾಚಾರ ಮಾಡುವಾಗ ತಪ್ಪೆಸಗಿದ್ದು, ಅದನ್ನು ತಿದ್ದುಪಡಿ ಮಾಡಲು ನ್ಯಾಯಾಲಯ ಸೂಚಿಸಬೇಕು ಎಂದು ಟೆಲಿಕಾಂ ಕಂಪೆನಿಗಳು ತಮ್ಮ ಮನವಿಯಲ್ಲಿ ಕೋರಿದ್ದವು.
Supreme Court, Justices L Nageswara Rao, Abdul Nazeer and MR Shah
Supreme Court, Justices L Nageswara Rao, Abdul Nazeer and MR Shah

ಸರ್ವೋಚ್ಚ ನ್ಯಾಯಾಲಯವು 2019ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪಿನ ಅನುಸಾರ ತಾವು ಪಾವತಿಸಬೇಕಾದ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್‌) ಬಾಕಿ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದ್ದು, ಅದನ್ನು ಸರಿಪಡಿಸುವಂತೆ ಭಾರ್ತಿ ಏರ್‌ಟೆಲ್‌, ವೊಡಾಫೋನ್‌-ಐಡಿಯಾ ಮತ್ತು ಟಾಟಾ ಟೆಲಿಕಾಂ ಕಂಪೆನಿಗಳು ಸಲ್ಲಿಸಿದ್ದ ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ವ್ಯತ್ಯಾಸಗಳನ್ನು ಸರಿಪಡಿಸಿ ಬಳಿಕ ಮರುಲೆಕ್ಕಾಚಾರ ನಡೆಸುವಂತೆ ಕೋರಿ ಟೆಲಿಕಾಂ ಕಂಪೆನಿಗಳು ಸಲ್ಲಿಸಿದ್ದ ಮನವಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಅಬ್ದುಲ್‌ ನಜೀರ್‌ ಮತ್ತು ಎಂ ಆರ್‌ ಶಾ ನೇತೃತ್ವದ ಪೀಠ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರಕ್ಕೆ ಎಜಿಆರ್‌ ಬಾಕಿಯನ್ನು ಪಾವತಿಸಲು ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿದ್ದ ಸುಪ್ರೀಂ ಕೋರ್ಟ್‌ ಪ್ರತಿ ವರ್ಷ ಬಾಕಿ ಮೊತ್ತದ ಶೇ. 10ರಷ್ಟು ಹಣವನ್ನು ಪಾವತಿಸುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಆದೇಶ ಮಾಡಿತ್ತು. ಮಾರ್ಚ್‌ 31ರ ಒಳಗೆ ಮೊದಲ ಕಂತು ಪಾವತಿಸಲು ನಿರ್ದೇಶಿಸಲಾಗಿತ್ತು.

ದೂರಸಂಪರ್ಕ ಇಲಾಖೆಯು ಎಜಿಆರ್‌ ಬಾಕಿ ಲೆಕ್ಕಾಚಾರ ಮಾಡುವಾಗ ಅಂಕಗಣಿತೀಯ ಲೋಪ ಎಸಗಿದೆ. ಇದನ್ನು ಸರಿಪಡಿಸಲು ನ್ಯಾಯಾಲಯ ಅನುಮತಿಸಬೇಕು ಎಂದು ಕಂಪೆನಿಗಳು ಕೋರಿದ್ದವು.

ದೂರಸಂಪರ್ಕ ಇಲಾಖೆಯ ಲೆಕ್ಕಾಚಾರದಂತೆ ವೊಡಾಫೋನ್‌-ಐಡಿಯಾ ₹58,254 ಕೋಟಿ ಪಾವತಿಸಬೇಕಿದ್ದು, ಭಾರ್ತಿ ಏರ್‌ಟೆಲ್‌ ₹43,980 ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೆ, ಸ್ವಯಂ ಲೆಕ್ಕಾಚಾರದ ಅನ್ವಯ ವೊಡಾಫೋನ್‌ ₹21,533 ಕೋಟಿ ಪಾವತಿಸಬೇಕಿದೆ. ಆದರೆ, ಕಂಪೆನಿಗಳು ಈ ಬಗೆಯ ಸ್ವಯಂ ಲೆಕ್ಕಚಾರಕ್ಕೆ ಮುಂದಾಗುವುದನ್ನು ತಡೆದಿರುವ ಉನ್ನತ ನ್ಯಾಯಾಲಯವು ದೂರಸಂಪರ್ಕ ಇಲಾಖೆಯ ಲೆಕ್ಕಾಚಾರಕ್ಕೆ ಅಸ್ತು ಎಂದಿದೆ.

ತನ್ನ ಲೆಕ್ಕಾಚಾರದ ಪ್ರಕಾರ ವೊಡಾಫೋನ್‌ ₹58,400 ಕೋಟಿ ಎಜಿಆರ್‌ ಬಾಕಿ ಪಾವತಿಸಬೇಕು ಎಂದು ದೂರಸಂಪರ್ಕ ಇಲಾಖೆ ಹೇಳಿತ್ತು. ಈ ಪೈಕಿ ₹7,854 ಕೋಟಿಯನ್ನು ವೊಡಾಫೋನ್‌ ಪಾವತಿಸಿದ್ದು, ಬಾಕಿ ₹50,400 ಕೋಟಿಯನ್ನು ಮಾರ್ಚ್‌ 31ರಿಂದ 10 ಕಂತುಗಳಲ್ಲಿ ಪಾವತಿಸಬೇಕಿದೆ.

Also Read
ಎಜಿಆರ್ ಬಾಕಿಯನ್ನು 10 ವರ್ಷದೊಳಗೆ ಪಾವತಿಸುವಂತೆ ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿದ ಸುಪ್ರೀಂಕೋರ್ಟ್‌

ದೂರ ಸಂಪರ್ಕ ಇಲಾಖೆ ಬೇಡಿಕೆ ಇಡುವಾಗ ತಾನು ಈಗಾಗಲೇ ಪಾವತಿಸಿರುವ ಹಣವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ವೊಡಾಫೋನ್‌-ಐಡಿಯಾ ಹೇಳಿದೆ. ಎಜಿಆರ್‌ ಬೇಡಿಕೆಗಳಲ್ಲಿ ಆದಾಯ ಉತ್ಪನ್ನಗಳನ್ನು ನಕಲಿ ಮಾಡಲಾಗಿದ್ದು, ಪಿಎಸ್‌ಟಿಎನ್‌ ಸಂಬಂಧಿತ ಕರೆ ಶುಲ್ಕ ಮತ್ತು ಇತರೆ ಆಪರೇಟರ್‌ಗಳಿಗೆ ವಾಸ್ತವದಲ್ಲಿ ಪಾವತಿಸಲಾಗುವ ರೋಮಿಂಗ್‌ ಶುಲ್ಕವನ್ನು ಪರಿಗಣನೆಗೆ ತೆಗೆದುಕೊಂಡು ಕಡಿತ ಮಾಡಿಲ್ಲ ಎಂದು ವಾದಿಸಲಾಗಿತ್ತು.

ಟಾಟಾ ಕಂಪೆನಿಯೂ ಎಜಿಆರ್‌ ಬಾಕಿಗೆ ತಗಾದೆ ಎತ್ತಿದ್ದು, ₹4,197 ಕೋಟಿಯನ್ನು ಈಗಾಗಲೇ ಎಜಿಆರ್‌ ಬಾಕಿ ಎಂದು ಠೇವಣಿ ಇಡಲಾಗಿದೆ ಎಂದು ಟಾಟಾ ಟೆಲಿಸರ್ವೀಸಸ್‌ ಹೇಳಿದೆ. ಭಾರ್ತಿ ಏರ್‌ಟೆಲ್‌ ಸ್ವಯಂ ಲೆಕ್ಕಾಚಾರವು ₹ 13,004 ಕೋಟಿಯಾಗಿದ್ದು, ₹ 18,000 ಕೋಟಿಯನ್ನು ಈಗಾಗಲೇ ಪಾವತಿಸಿರುವುದಾಗಿ ಹೇಳಿದೆ. ಆದರೆ, ದೂರಸಂಪರ್ಕ ಇಲಾಖೆಯು ₹ 44,000 ಕೋಟಿ ಬಾಕಿ ಪಾವತಿಸಬೇಕು ಎಂದು ಹೇಳಿದೆ. ಈ ಹಿಂದೆ ಪಾವತಿಸಲಾಗಿರುವ ಎಜಿಆರ್‌ ಬಾಕಿಗಳನ್ನು ದೂರ ಸಂಪರ್ಕ ಇಲಾಖೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಭಾರ್ತಿ ಏರ್‌ಟೆಲ್‌ ವಾದಿಸಿತ್ತು.

Related Stories

No stories found.
Kannada Bar & Bench
kannada.barandbench.com