ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ (ಎಫ್‌ಸಿಆರ್‌ಎ) ಜಾರಿ ಮೇಲ್ವಿಚಾರಣೆಗೆ ರಾಜಕೀಯವಾಗಿ ತಟಸ್ಥ ಸಂಸ್ಥೆಯನ್ನು ರಚಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ [ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].
ಪ್ರಕರಣದಲ್ಲಿ ಅವಶ್ಯಕತೆಯ ಸಿದ್ಧಾಂತ ಅನ್ವಯಿಸುತ್ತದೆ ಎಂದು ಹೇಳಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂಎಂ ಸುಂದರೇಶ್ ಅವರಿದ್ದ ಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.
ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ಅವರು ಉದಾಹರಣೆಯಾಗಿ ಉಲ್ಲೇಖಿಸಿದ್ದ ಚುನಾವಣಾ ಆಯುಕ್ತರ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪು ವಿಸ್ತೃತ ಸಂದರ್ಭಕ್ಕೆ ಅನ್ವಯವಾಗುತ್ತದೆ ವಿನಾ ಈ ಪ್ರಕರಣಕ್ಕಲ್ಲ ಎಂದು ನ್ಯಾಯಾಲಯ ತಿಳಿಸಿತು.
ಆದರೂ ಆದೇಶ ವೈಯಕ್ತಿಕ ದೂರುಗಳಿಗೆ ಸಂಬಂಧಿಸಿದಂತೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜನವರಿ 10 ರಂದು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಎಫ್‌ಸಿಆರ್‌ಎಯನ್ನು ಸರ್ಕಾರೇತರ ಸಂಸ್ಥೆಗಳ ವಿರುದ್ಧ ಆಯುಧವಾಗಿ ಬಳಸಲಾಗುತ್ತಿದೆ ಎಂದು ಸಾಬೀತುಪಡಿಸುವಂತಹದ್ದೇನೂ ಇಲ್ಲ ಎಂದು ಅದು ತಿಳಿಸಿತ್ತು.
ಕೇಂದ್ರ ಸರ್ಕಾರ ಎಫ್‌ಸಿಆರ್‌ಎ ಜಾರಿಗೊಳಿಸುವಲ್ಲಿ ಸ್ವಾಭಾವಿಕ ಹಿತಾಸಕ್ತಿ ಸಂಘರ್ಷವಿದೆ ಎಂದು ವಾದಿಸಿ ಎಡಿಆರ್ ಅರ್ಜಿ ಸಲ್ಲಿಸಿತ್ತು. ಅಭಿವೃದ್ಧಿ, ಸಾರ್ವಜನಿಕ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಭಿನ್ನ ದೃಷ್ಟಿಕೋನ ಹೊಂದಿರಬಹುದು, ಇದರಿಂದಾಗಿ ಕಾಯಿದೆಯನ್ನು ನಿಷ್ಪಕ್ಷಪಾತವಾಗಿ ಜಾರಿಗೆ ತರಲು ಅವರಿಗೆ ಕಷ್ಟವಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಎಡಿಆರ್ ರಾಜಕೀಯ ಪಕ್ಷಗಳ ವಿರುದ್ಧ ಎಫ್‌ಸಿಆರ್‌ಎ ಜಾರಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಧಿಕಾರಶಾಹಿ ಮತ್ತು ಆಡಳಿತಾರೂಢ ಪಕ್ಷದ ನಡುವಿನ ನಿಕಟ ಸಂಪರ್ಕದಿಂದಾಗಿ ಹಿತಾಸಕ್ತಿ ಸಂಘರ್ಷದ ಸಾಧ್ಯತೆಯಿದೆ. ಇದರಿಂದ ಎಫ್‌ಸಿಆರ್‌ಎ ಉಲ್ಲಂಘಿಸಿದ ಕೆಲ ರಾಜಕೀಯ ಪಕ್ಷಗಳಿಗೆ ದಂಡದಿಂದ ವಿನಾಯಿತಿ ದೊರೆಯಬಹುದು ಎಂದು ಶಂಕೆ ವ್ಯಕ್ತಪಡಿಸಿತ್ತು.
ಎಫ್‌ಸಿಆರ್‌ಎ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದು. ವಿದೇಶಿ ದೇಣಿಗೆ ಸ್ವೀಕರಿಸದಂತೆ ನ್ಯಾಯಾಂಗ ಅಧಿಕಾರಿಗಳಿಗೆ ಇದು ನಿರ್ಬಂಧ ಹೇರುವುದರಿಂದ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಕಾಯಿದೆಯನ್ನು ತಪ್ಪಾಗಿ ಬಳಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮನವಿ ಆತಂಕ ವ್ಯಕ್ತಪಡಿಸಿತ್ತು.