ಕರ್ನಾಟಕ ಸರ್ಕಾರ 2016ರಲ್ಲಿ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಖಾಸಗಿ ದೂರುದಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಕನಕರಾಜು ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಭ್ರಷ್ಟ ರಾಜಕಾರಣಿಗಳು, ಸಚಿವರು ಮತ್ತು ಲೋಕಾಯುಕ್ತ ಅಧಿಕಾರಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಇದನ್ನು ಸ್ಥಾಪಿಸಿದೆ ಎಂದು ಹೇಳಿ ಆಗಸ್ಟ್ 11ರಂದು, ಕರ್ನಾಟಕ ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿತ್ತು.
ಎಸಿಬಿ ಮುಂದೆ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗುವುದು ಎಂದು ಹೈಕೋರ್ಟ್ ಹೇಳಿರುವಾಗ ಅರ್ಜಿದಾರರ ಅಸಮಾಧಾನಕ್ಕೆ ಕಾರಣವೇನು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಪ್ರಶ್ನಿಸಿತು.
"ನೀವು ಹೇಗೆ ಅಸಮಾಧಾನಗೊಂಡಿದ್ದೀರಿ? ಅವರು (ಕರ್ನಾಟಕ ಹೈಕೋರ್ಟ್) ಲೋಕಾಯುಕ್ತದಲ್ಲಿ ಅಧಿಕಾರ ಉಳಿಯುತ್ತದೆ ಎಂದು ಹೇಳಿದ್ದಾರೆ... ನಾವು ಮಧ್ಯಪ್ರವೇಶಿಸುವುದಿಲ್ಲ," ಎಂದು ಪೀಠ ತಿಳಿಸಿತು.
ಅರ್ಜಿದಾರ ಪರ ಉತ್ತರಿಸಿದ ವಕೀಲರು, ಎಸಿಬಿಗೆ ಸಾಧ್ಯವಾಗುವಂತೆ ಎಲ್ಲ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಉದಾಹರಣೆಗೆ, ಆರೋಪಿ ತಿಂಗಳಿಗೆ ₹ 20,000ಕ್ಕಿಂತ ಕಡಿಮೆ ಆದಾಯ ಗಳಿಸುವ ಸಾರ್ವಜನಿಕ ನೌಕರನಾಗಿದ್ದರೆ ಆತನ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ಮಾಡುವಂತಿಲ್ಲ ಎಂದು ಅಧಿಸೂಚನೆಯನ್ನು ಉಲ್ಲೇಖಿಸಿ ಹೇಳಿದರು.
ಆದರೆ ನ್ಯಾಯಾಲಯ ಅಂತಹ ಅರ್ಜಿಗಳು ಪ್ರಾಕ್ಸಿ ಮೊಕದ್ದಮೆಗಳಿಗೆ (ನಿರ್ದಿಷ್ಟ ವ್ಯಕ್ತಿ, ಸಂಸ್ಥೆಗೆ ಅನುಕೂಲ ಮಾಡುವ ಉದ್ದೇಶದಿಂದ ಸಂಬಂಧಪಡದವರು ಸಲ್ಲಿಸುವ ಅರ್ಜಿ) ಸಮನಾಗಿದ್ದು, ಅದನ್ನು ವಜಾಗೊಳಿಸಲು ಒಲವು ತೋರುತ್ತಿರುವುದಾಗಿ ತಿಳಿಸಿತು. "ಇವೆಲ್ಲವೂ ಪ್ರಾಕ್ಸಿ ಮೊಕದ್ದಮೆಗಳು... ಒಬ್ಬ ವ್ಯಕ್ತಿ ಸಬ್ ಡಿವಿಷನ್ ಕಲೆಕ್ಟರ್ ಆಗಿದ್ದರೆ, ಆತ ರೂ. 20,000ಕ್ಕಿಂತ ಹೆಚ್ಚು ಸಂಪಾದಿಸುತ್ತಾರೆ. ನಾವು ಮನವಿ ವಜಾಗೊಳಿಸಲು ಒಲವು ತೋರುತ್ತೇವೆ" ಎಂದು ಪೀಠ ಹೇಳಿತು.
ಇದಲ್ಲದೆ, ಕರ್ನಾಟಕ ಪೊಲೀಸ್ ಮಹಾಸಂಘದ ಪರವಾಗಿ ವಕೀಲರು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಕೋರಿದಾಗ, ನ್ಯಾಯಾಲಯ ಅಂತಹ ಸಂಸ್ಥೆಯ ಮೂಲಕ ಹಾಜರಾಗುವ ಸರ್ಕಾರಿ ಅಧಿಕಾರಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿತು. ನೊಂದವರು ನ್ಯಾಯಾಲಯದ ಮೊರೆ ಹೋದರೆ ಮಾತ್ರ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು.
"ನೀವು ದೂರುಗಳು ನಿಮ್ಮ ಮುಂದೆ ಬರುವುದನ್ನು ಬಳಸಿಕೊಂಡು ಹಣಗಳಿಸಲು ಬಯಸುತ್ತಿದ್ದೀರಿ ಅಷ್ಟೇ. ಸರ್ಕಾರದ ಅಧಿಕಾರಿಗಳು, ಮಹಾಸಂಘದ ಮೂಲಕ ಹಾಜರಾಗುವಂತಿಲ್ಲ. ನಾವು ಇದನ್ನೆಲ್ಲಾ ಪುರಸ್ಕರಿಸುವುದಿಲ್ಲ. ನೊಂದ ವ್ಯಕ್ತಿ ಬರಲಿ ನಂತರ ನಾವು ಅದನ್ನು ನಿಭಾಯಿಸುತ್ತೇವೆ. ಈ ಮಹಾಸಂಘದ ವ್ಯವಹಾರ ಬೇಡ... (ಅರ್ಜಿ) ವಜಾಗೊಳಿಸಲಾಗಿದೆ" ಎಂದು ಅದು ಹೇಳಿತು.